ಬೆಂಗಳೂರು: ಪ್ರಧಾನಿ ಮೋದಿ ನಾಲ್ಕು ದಿನಗಳ ಕಾಲ ಅಮೆರಿಕಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅವರಿಗಾಗಿ ವೈಟ್ಹೌಸ್ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ದಂಪತಿ ಔತಣ ಕೂಟ ಸೇರಿದಂತೆ ಅದ್ಧೂರಿ ಕಾರ್ಯಕ್ರಮ ಒಂದನ್ನು ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ಮೂಲದ ಸಂಗೀತ ಸಂಯೋಜಕ ಹಾಗೂ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್ ಅವರಿಗೂಈ ಆಹ್ವಾನ ನೀಡಿರುವುದು ವಿಶೇಷವಾಗಿದೆ.
ನಾಲ್ಕು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿ ಹಾಗೂ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮ ಕೂಡ ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.
UNCCD ರಾಯಭಾರಿ
ಈ ಕುರಿತು ಟ್ವೀಟ್ ಮಾಡಿರುವ ರಿಕಿ ಕೇಜ್ ವೈಟ್ ಹೌಸ್ನಿಂದ ನನಗೆ ಆಹ್ವಾನ ಬಂದಿದೆ. ಈ ಗುರುವಾರ ಕಾರ್ಯಕ್ರಮ ನಡೆಯಲಿದ್ದು, ತುಂಬಾ ಸಂತಸವಾಗಿದೆ ಎಂದು ಹೇಳಿದ್ಧಾರೆ. ರಿಕಿ ಕೇಜ್ ಕಳೆದ ನಾಲ್ಕು ವರ್ಷಗಳಿಂದ ವಿಶ್ವ ಸಂಸ್ಥೆಯ UNCCDಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು ಭೂ ಒಡೆತನದ ಹಕ್ಕು ಹೊದಬೇಕು ಎಂಬ ನಿಟ್ಟಿನಲ್ಲಿ Her land, Her life ಅಭಿಯಾನದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹಾಗೂ ಪ್ರಧಾನಿ ಮೋದಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಮಾತನಾಡಲಿದ್ದಾರೆ. ಅಮೆರಿಕಾ ಕಾಂಗ್ರೆಸ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.