ಬೆಂಗಳೂರು:ಆತ್ಮಹತ್ಯೆ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಆತ್ಮಹತ್ಯೆ ತಡೆ ಕೇಂದ್ರವಾದ N-SPRITE (NIMHANS – Suicide Prevention, Research, Implementation and Training Engagement) ಗೆ ಚಾಲನೆ ನೀಡಲಾಗಿದೆ.
ಈ ಕುರಿತು ಸಚಿವ ದಿನೇಶ್ ಗುಂಡೂರವಾವ್ ಮಾಹಿತಿ ನೀಡಿದ್ದು, ಈ ಕೇಂದ್ರವು ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ಸಂಶೋಧನೆ ಮತ್ತು ಮಾನಸಿಕವಾಗಿ ಸದೃಢವಾಗಲು ತರಬೇತಿ ನೀಡಲು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ.ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತೇವೆ. ಕೆಲವೊಮ್ಮೆ ಹತಾಶೆಯಿಂದ ಆತ್ಮಹತ್ಯೆಯಂತಹ ಯೋಚನೆಗೆ ಬೀಳುತ್ತೇವೆ. ಆದರೆ, ಇದೊಂದು ಮಾನಸಿಕ ಖಿನ್ನತೆಯಿಂದ ಉಂಟಾಗುವ ಆಲೋಚನೆಯಾಗಿದ್ದು, ಜಾಗೃತಿ ಮತ್ತು ಚಿಕಿತ್ಸೆ ಪಡೆಯುವ ಮೂಲಕ ಖಿನ್ನತೆಯಿಂದ ಬೇಗ ಹೊರಬರಬಹುದು ಎಂದು ತಿಳಿಸಿದ್ದಾರೆ.
ಸಮಸ್ಯೆಗಳಿಗಿಂತ ಜೀವನ ಅಮೂಲ್ಯವಾದದ್ದು, ಮಾನಸಿಕ ಸಮಸ್ಯೆಗಳಿದ್ದರೆ ಅವುಗಳಿಂದ ಹೊರಬರಲು ಸರ್ಕಾರದ ಬೆಂಬಲ ಯಾವಾಗಲೂ ಲಭ್ಯವಿರಲಿದೆ ಎಂಬುದನ್ನು ದಯವಿಟ್ಟು ನೆನಪಿಡಿ. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಆತ್ಮಹತ್ಯಾ ಆಲೋಚನೆಗಳಿಂದ ಬಳಲುತ್ತಿದ್ದರೆ ಸಹಾಯವಾಣಿ ಸಂಖ್ಯೆ 14416 (ಟೆಲಿ-ಮಾನಸ್) ಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಿರಿ.
ಆತ್ಮಹತ್ಯಾ ಆಲೋಚನೆಗಳಿಂದ ಮುಕ್ತರಾಗಲು ಮಾನಸಿಕ ಖಿನ್ನತೆಯಿಂದ ಹೊರ ಬರುವುದು ಅತಿ ಮುಖ್ಯ. ಮಾನಸಿಕ ಸಮಸ್ಯೆಗಳಿದ್ದರೆ ತಕ್ಷಣ ಈ ಸಹಾಯವಾಣಿಗಳಿಗೆ ಕರೆ ಮಾಡಿ ಮುಕ್ತವಾಗಿ ಮಾತನಾಡಿ. ಮಹಿಳಾ ಸಹಾಯವಾಣಿ ಸಂಖ್ಯೆ – 181, ಮಕ್ಕಳ ಸಹಾಯವಾಣಿ ಸಂಖ್ಯೆ – 1098, ಮಾನಸಿಕ ಖಿನ್ನತೆಗೆ ಟೆಲಿ ಮಾನಸ್ ಸಂಖ್ಯೆ – 14416, ತುರ್ತು ಸಹಾಯವಾಣಿ ಸಂಖ್ಯೆ – 112