
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ವರದಿಯನ್ನು ಸಂಪುಟದ ಮುಂದೆ ತಂದು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ. ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ಈಗಾಗಲೇ ಸಿಎಂ ಸಿದ್ದರಾಮಯ್ಯ ನಿರ್ಧಾರದ ವಿರುದ್ಧ ಸಿಡಿಮಿಡಿ ಎನ್ನುತ್ತಿವೆ. ವಿರೋಧಗಳ ನಡುವೆಯೇ ಜಾತಿ ಜನಗಣತಿ ಜಟಾಪಟಿ ರಾಜ್ಯದಲ್ಲಿ ಮೀಸಲಾತಿ ಅನ್ನೋ ಬೆಂಕಿ ಹೊತ್ತಿಕೊಂಡಿದೆ. ಜಾತಿಜನಗಣತಿ ವರದಿಯ ಜೊತೆಗೆ ಓಬಿಸಿ ಮೀಸಲಾತಿ ಹೆಚ್ಚಳ ಮಾಡಿ, ಎಸ್‌ಸಿ, ಎಸ್‌ಟಿ ಬಿಟ್ಟು ಮುಸ್ಲಿಂ, ಒಕ್ಕಲಿಗ, ಲಿಂಗಾಯತರ ಮೀಸಲಾತಿ ಹೆಚ್ಚಳಕ್ಕೆ ಜಯಪ್ರಕಾಶ್ ಹೆಗ್ಡೆ ಆಯೋಗ ಶಿಫಾರಸು ಮಾಡಿದೆ ಅನ್ನೋ ವರದಿ ಹೊರಬಿದ್ದಿದೆ. ಒಬಿಸಿ ಮೀಸಲಾತಿಯನ್ನು ಶೇಕಡಾ 32 ರಿಂದ ಶೇಕಡಾ 51ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದ್ದು, ಪ್ರವರ್ಗ 1 ಬದಲಿಗೆ ಪ್ರವರ್ಗ A, ಪ್ರವರ್ಗ B ರಚನೆಗೆ ಶಿಫಾರಸು ಮಾಡಲಾಗಿದೆ.
ಪ್ರವರ್ಗ 1ಕ್ಕೆ ಈ ಮೊದಲು 4 ಪರ್ಸೆಂಟ್ ಮೀಸಲಾತಿ ಇತ್ತು. ಇದೀಗ 6 ಪರ್ಸೆಂಟ್ಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಸುಮಾರು 35 ರಷ್ಟು ಜನಸಂಖ್ಯೆ ಇದ್ದಾರೆ. ಅದೇ ರೀತಿ ಪ್ರವರ್ಗ 1 ಅನ್ನು ಪವರ್ಗ 1ಎ ಅಂತಾ ಮಾಡಿ ಪ್ರವರ್ಗ 1ಬಿ ಅನ್ನು ಹೊಸದಾಗಿ ಸೃಷ್ಟಿ ಮಾಡಲಾಗಿದೆ. ಪ್ರವರ್ಗ 1ಬಿಗೆ ಸುಮಾರು 73.94 ಲಕ್ಷ ಜನರನ್ನ ಸೇರಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಇರುವ ಸಮುದಾಯಗಳಿಗೆ ಶೇಕಡ 12 ಪರ್ಸೆಂಟ್ ಮೀಸಲಾತಿ ಕೊಡುವಂತೆ ಶಿಫಾರಸು ಮಾಡಲಾಗಿದೆ. ಪ್ರವರ್ಗ 2ಎಗೆ 15 ಪರ್ಸೆಂಟ್ ಇರುವ ಮೀಸಲಾತಿಯನ್ನ 10 ಪರ್ಸೆಂಟ್ಗೆ ಇಳಿಸಲಾಗಿದೆ. ಇದರಲ್ಲೂ ಸಹ 77.78 ಲಕ್ಷ ಜನರು ಇದ್ದಾರೆ. ಅದೇ ಪ್ರವರ್ಗ 2ಬಿಗೆ ಇದ್ದಂತಹ 4 ಪರ್ಸೆಂಟ್ ಮೀಸಲಾತಿಯನ್ನ 8 ಪರ್ಸೆಂಟ್ಗೆ ಏರಿಕೆ ಮಾಡಬೇಕು ಎನ್ನಲಾಗಿದ್ದು, ಇದ್ರಲ್ಲಿ 75.27 ಲಕ್ಷ ಮಂದಿ ಜನ ಇರಲಿದ್ದಾರೆ.
ಪ್ರವರ್ಗ 3ಎ ನಲ್ಲಿ 72 ಲಕ್ಷ ಜನಸಂಖ್ಯೆ ಇದ್ದು, 3ಎ ಮೀಸಲಾತಿಯನ್ನು 4 ರಿಂದ 7 ಪರ್ಸೆಂಟ್ಗೆ ಏರಿಕೆ ಮಾಡಬೇಕು ಅಂತಾ ಶಿಫಾರಸು ಮಾಡಲಾಗಿದೆ. ಪ್ರವರ್ಗ 3ಬಿಯಲ್ಲಿ 81 ಲಕ್ಷ ಜನಸಂಖ್ಯೆ ಇದ್ದು, ಇವರಿಗೆ ಹಾಲಿ ಇರುವ 5 ಪರ್ಸೆಂಟ್ ಮೀಸಲಾತಿಯನ್ನ 8 ಪರ್ಸೆಂಟ್ಗೆ ಏರಿಸಿ ಅಂತ ಸಮೀಕ್ಷಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಜಾತಿಜನಗಣತಿ ವರದಿ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಸರ್ಕಸ್ ಮಾಡ್ತಿದೆ. ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗ್ತಿದೆ, ಕಾಂಗ್ರೆಸ್ ಪಕ್ಷದೊಳಗೇ ಜಾತಿ ಜನಗಣತಿ ಬಹಿರಂಗಕ್ಕೆ ಪ್ರಬಲ ವಿರೋಧ ಇದೆ. ಜಾತಿ ಜನಗಣತಿಗೆ ವಿರೋಧ ಮಾಡ್ತಿರೋ ಸಮುದಾಯದ ಆಕ್ರೋಶ ತಣಿಸಲು ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿರುವ ಚರ್ಚೆಗಳು ಶುರುವಾಗಿವೆ.

ಜಾತಿ ಜನಗಣತಿಯನ್ನ ವಿರೋಧ ಮಾಡ್ತಿರೋ ಸಮುದಾಯದ ಬಾಯಿ ಮುಚ್ಚಿಸೋಕೆ, ಸಿಟ್ಟು ತಣ್ಣಗಾಗಿಸೋಕೆ ಸಿದ್ದರಾಮಯ್ಯ ಸರ್ಕಾರವೇ ಮೀಸಲಾತಿ ಹೆಚ್ಚಳ ಅನ್ನೋ ಅಸ್ತ್ರ ಪ್ರಯೋಗಿಸಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಒಬಿಸಿ ಮೀಸಲಾತಿ ಪ್ರಮಾಣ ಶೇಕಡ 32 ರಿಂದ ಶೇಕಡ 51ಕ್ಕೆ ಏರಿಸಬೇಕು ಅಂತ ಶಿಫಾರಸ್ಸು ಮಾಡಿದ್ದಾರೆ. ಮುಸ್ಲಿಂ ಮೀಸಲಾತಿ ಪ್ರಮಾಣ ಶೇಕಡ 4 ರಿಂದ ಶೇಕಡ 8 ಏರಿಸಬೇಕು.. ಲಿಂಗಾಯತರ ಮೀಸಲಾತಿ ಪ್ರಮಾಣ ಶೇಕಡ 5 ರಿಂದ ಶೇಕಡ 8ಕ್ಕೆ ಏರಿಸಬೇಕು. ಒಕ್ಕಲಿಗರ ಮೀಸಲಾತಿ ಪ್ರಮಾಣ ಶೇಕಡ 4 ರಿಂದ 7ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ.. ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನ ಈಗಿರುವ ಶೇಕಡ 24.1ಕ್ಕೆ ಇರಲಿ.. ಹೆಚ್ಚಿಸೋದು ಬೇಡ ಅಂದಿದ್ದಾರೆ. ಸದ್ಯಕ್ಕೆ ಈಗಿನ ಕಾನೂನಿನಡಿ ಸುಪ್ರೀಂಕೋರ್ಟ್ ಆದೇಶದಂತೆ ಮೀಸಲಾತಿ ಶೇಕಡ 50ರಷ್ಟು ಮೀರಬಾರದು..

ಮೀಸಲಾತಿ ಹೆಚ್ಚಳ ಮಾಡಲು ಸಂವಿಧಾನದ 9ನೇ ಪರಿಚ್ಛೇದಕ್ಕೆ ಕೇಂದ್ರ ತಿದ್ದುಪಡಿ ತರಬೇಕು. ಸುಪ್ರೀಂಕೋರ್ಟ್ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಅಷ್ಟೇ ಅಧಿಕಾರ ನೀಡಿದೆ. ಈ ನಡುವೆ ಕುರುಬರಿಗೆ ಬಂಪರ್ ಕೊಡುಗೆ ಕೊಡಲು ಮೀಸಲಾತಿಯೇ ಅದಲು-ಬದಲು ಮಾಡಿದ್ದಾರೆ ಸಿದ್ದರಾಮಯ್ಯ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಕುರುಬ ಸಮುದಾಯಕ್ಕೆ ಮೀಸಲಾತಿ ಕಡಿಮೆ ಮಾಡಿದಂತೆ ಮಾಡಿ ಬಂಪರ್ ಗಿಫ್ಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.



