ಬೆಂಗಳೂರು: ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು 1000 ರೂ.ಗಳಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾ ಈ ಘೋಷಣೆ ಮಾಡಿದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದ್ದ ಒಂದು ಸಾವಿರ ಬಸ್ಸುಗಳನ್ನು 2000 ಕ್ಕೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಾಲ್ಕು ಸಾವಿರ ಶಿಶು ವಿಹಾರಗಳನ್ನು ಪ್ರಾರಂಭಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ. ನಿರುದ್ಯೋಗಿಗಳಿಗೆ ಬದುಕುವ ದಾರಿ ಕಲ್ಪಿಸಲಾಗಿದ್ದು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರ ಗೌರವಧನವನ್ನು ಒಂದು ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಇ-ಕಾಮರ್ಸ್ ನಲ್ಲಿ ತೊಡಗಿರುವವರ ವಾಹನಗಳಿಗೆ 2 ಲಕ್ಷ ಜೀವಮ ವಿಮೆ ಹಾಗೂ ಅಪಘಾತ ವಿಮೆಯನ್ನು ಮೊದಲ ಬಾರಿಗೆ ಘೋಷಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿರುವ ಎಲ್ಲಾ ಯೋಜನೆಗಳು ನಮ್ಮ ಸರ್ಕಾರದ ಸೂಕ್ಷ್ಮತೆಯನ್ನು ಬಿಂಬಿಸುತ್ತದೆ ಎಂದರು.
ರಾಯಚೂರಿನಲ್ಲಿ ಏಮ್ಸ್:
ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪನೆಗೆ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಪುನರ್ ರಚನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಭೂಮಿ, ಮೂಲಸೌಕರ್ಯದ ವೆಚ್ಚವನ್ನು ಭರಿಸುವುದಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅವಶ್ಯಕತೆ ಹಾಗೂ ಸಂದರ್ಭಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಕಳೆದ ಬಾರಿ ಬಜೆಟ್ ನಂತರದಲ್ಲಿಯೂ ಘೋಷಣೆಗಳನ್ನು ಮಾಡಿರುವುದು ಇದಕ್ಕೆ ಸಾಕ್ಷಿ ಎಂದರು.