—-ನಾ ದಿವಾಕರ—-
ಡಿಜಿಟಲ್ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ

2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು ಪುನರ್ ನಿರ್ವಚನೆಗೊಳಪಡಿಸಬೇಕಿದೆ. ಏಕೆಂದರೆ ಈ ಮೂರೂ ಗುಣಲಕ್ಷಣಗಳನ್ನು ಸ್ವತಃ ಆರೋಪಿಸಿಕೊಳ್ಳಬಯಸುವ ಸಮಾಜವೊಂದು ತನ್ನ ಪ್ರಾಚೀನ, ಮಧ್ಯಕಾಲೀನ ಮತ್ತು ಶತಮಾನಗಳಾಚೆಗಿನ ಅಮಾನುಷ ಪದ್ಧತಿಗಳನ್ನು, ಸಾಂಪ್ರದಾಯಿಕ ಆಚರಣೆಗಳನ್ನು ಹಾಗೂ ಆಧುನಿಕೀಕರಣಕ್ಕೂ ಮುಂಚಿನ ಮನುಷ್ಯ ಸ್ವಭಾವಗಳನ್ನು ದಾಟಿ ಮುನ್ನಡೆದಿರಬೇಕು. ಆರ್ಥಿಕ ಅಭಿವೃದ್ಧಿಯ ನೆಲೆಯಲ್ಲಿ ಮನುಷ್ಯ ಸಮಾಜವು ಸಾಧಿಸಬಹುದಾದ ಬೌದ್ಧಿಕ, ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಮುನ್ನಡೆಗಳು ಆಧುನಿಕತೆಯನ್ನು ಬಿಂಬಿಸಿದರೂ, ತಳಮಟ್ಟದ ಸಮಾಜದಲ್ಲಿ ಉಳಿದುಕೊಂಡಿರಬಹುದಾದ ಪ್ರಾಚೀನತೆಯ ಪಳೆಯುಳಿಕೆಗಳನ್ನು ನಿವಾರಿಸದೆ ಹೋದರೆ, ಪ್ರಾಯಶಃ ನಮ್ಮ ಪರಿಕಲ್ಪನೆಯೇ ದೋಷಪೂರಿತವಾಗುತ್ತದೆ.
ವರ್ತಮಾನದ ಭಾರತ ಗಗನಯಾನಿಯೊಬ್ಬರನ್ನು ಬಾಹ್ಯಾಕಾಶ ಕೋಶದ ಮೂಲಕ ಅಂತರಿಕ್ಷದ ಪಯಣಕ್ಕೆ ಕಳುಹಿಸಿರುವ ಮಹತ್ತರ ವೈಜ್ಞಾನಿಕ ಸಾಧನೆಗೆ ಸಾಕ್ಷಿಯಾಗಿದೆ. ಇದು ಇಡೀ ದೇಶ ಹೆಮ್ಮೆ ಪಡುವಂತಹ ವಿಷಯ. ಪ್ರಧಾನಿ ಮೋದಿ ಹೇಳಿರುವಂತೆ, ಗಗನಯಾತ್ರಿ ಶುಭಾಂಶು ದೇಶದ 140 ಕೋಟಿ ಜನತೆಯ ಆಕಾಂಕ್ಷೆ ಮತ್ತು ಭರವಸೆಗಳನ್ನು ಹೊತ್ತು ತೆರಳಿದ್ದಾರೆ. ಸಹಜವಾಗಿಯೇ ಸಂಭ್ರಮದ ವಾತಾವರಣ ಕಾಣುತ್ತಿದೆ. ಇದು ಒಂದು ದೇಶ ಆಧುನಿಕತೆಯತ್ತ ಹೊರಳಿರುವ ಸಂಕೇತ ಎನ್ನುವುದು ನಿಶ್ಚಿತ. ಆದರೆ ಈ ಮೇಲ್ನೋಟದ ಆಧುನಿಕತೆಯ ಹಿಂದೆ ಅಡಗಿರುವ ಪ್ರಾಚೀನ ಮನಸ್ಥಿತಿಗಳು ಮತ್ತು ಅಮಾನವೀಯ ಚಟುವಟಿಕೆಗಳು, ದೇಶದ ಪ್ರಜ್ಞಾವಂತ ಜನತೆಯನ್ನು ಎಚ್ಚರಿಸದೆ ಹೋದರೆ, ಬಹುಶಃ ನಮ್ಮ ಭ್ರಮಾಧೀನತೆಯಲ್ಲಿ ನೆಲದ ವಾಸ್ತವಗಳನ್ನು ಅಲ್ಲಗಳೆಯುತ್ತಾ, ವಸ್ತುಶಃ ಪ್ರಾಚೀನ ಸಮಾಜಕ್ಕೆ ಮರಳುವ ಅಪಾಯವನ್ನು ಎದುರಿಸಬೇಕಾಗುತ್ತದೆ.
ಜಾತಿ ದೌರ್ಜನ್ಯದ ಪರಾಕಾಷ್ಠೆ
ಈ ಅಪಾಯವನ್ನು ಸಂಕೇತಿಸುವ ಎರಡು ಪ್ರಕರಣಗಳು ಇಲ್ಲಿ ಉಲ್ಲೇಖನಾರ್ಹ. ಸಮಕಾಲೀನ ಭಾರತ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಿದೆಯೇ ಹೊರತು ಅದರೊಳಗಿನ ಅನಿಷ್ಟ ಆಚರಣೆಗಳನ್ನಾಗಲೀ, ಅಮಾನುಷ ಪದ್ಧತಿಗಳನ್ನಾಗಲೀ ವರ್ಜಿಸಿಲ್ಲ ಎನ್ನುವುದಕ್ಕೆ ಯಾವ ಸಂಶೋಧನೆಯೂ, ರಾಕೆಟ್ ತಂತ್ರಜ್ಞಾನದ ಅರಿವೂ ಬೇಕಿಲ್ಲ. ಆ ರೀತಿಯಲ್ಲಿ ನವ ಭಾರತದ ಆದಿಮ ಕಾಲದ ಮಾನವ ವರ್ತನೆಗೆ ಸಾಕ್ಷಿಯಾಗುತ್ತಿದೆ. ಒಡಿಷಾ ರಾಜ್ಯದ ಗಂಜಾಂ ಜಿಲ್ಲೆಯ ಖರಿಗುಮ್ಮ ಗ್ರಾಮದ ಒಂದು ಘಟನೆ ಜಡಗಟ್ಟಿದ ಮನಸ್ಸುಗಳನ್ನೂ ಬಡಿದೆಬ್ಬಿಸುತ್ತದೆ.
ಅಕ್ರಮವಾಗಿ ಗೋವು ಸಾಗಿಸುತ್ತಿರುವ ಆರೋಪ ಹೊರಿಸಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹೊಡೆದು, ಅವರ ಅರ್ಧ ತಲೆ ಬೋಳಿಸಿ, ಎರಡು ಕಿಲೋಮೀಟರ್ ದೂರ ಮಂಡಿಯೂರಿ ನಡೆಯುತ್ತಾ, ಹುಲ್ಲು ತಿನ್ನುವಂತೆ ನಂತರ ಚರಂಡಿಯ ನೀರು ಕುಡಿಯುವಂತೆ ಬಲಾತ್ಕಾರ ಮಾಡಿರುವ ಘಟನೆ ʼತಲ್ಲಣಗೊಳಿಸುತ್ತದೆʼ ಎಂದರೆ ಅದು ಔಪಚಾರಿಕ ಮಾತಾಗುತ್ತದೆ. ತಮ್ಮ ಕುಟುಂಬದ ಸದಸ್ಯರ ವಿವಾಹಕ್ಕೆ ವರದಕ್ಷಿಣೆಯ ರೂಪದಲ್ಲಿ ಈ ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಈ ಕ್ರೌರ್ಯಕ್ಕೆ ಬಲಿಯಾಗಲು ಕಾರಣ ಅವರು ದಲಿತ ಸಮಾಜಕ್ಕೆ ಸೇರಿದವರು ಮತ್ತು ಆರ್ಥಿಕವಾಗಿ ದುರ್ಬಲರು ಎನ್ನುವುದು ನಿಶ್ಚಿತ. ಇದನ್ನೂ ಮೀರಿದ ಕಾರಣ ಎಂದರೆ ಪ್ರಜಾಸತ್ತಾತ್ಮಕ ಭಾರತದ ಒಂದು ಜನವರ್ಗ ಈ ರೀತಿಯ ಕ್ರೂರ ಶಿಕ್ಷೆ ವಿಧಿಸುವ ಅನಧಿಕೃತ ಪರವಾನಗಿಯನ್ನು ಪಡೆದುಕೊಂಡಿರುವುದು. ಆರೋಪಿಗಳ ಬಂಧನ, ಹಲವು ವರ್ಷಗಳ ನಂತರದ ಶಿಕ್ಷೆ ಇದಾವುದೂ ಸಹ ಈ ಕ್ರೂರ ಮನಸ್ಥಿತಿಯನ್ನು ನಿವಾರಿಸುವುದಿಲ್ಲ ಎನ್ನಲು ಸಮಕಾಲೀನ ಭಾರತದ ಚರಿತ್ರೆಯೇ ಸಾಕ್ಷಿ.

ಒಡಿಷಾದಲ್ಲೇ ನಡೆದಿರುವ ಮತ್ತೊಂದು ಘಟನೆಯಲ್ಲಿ ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದ ಹೆಣ್ಣುಮಗಳು, ಪರಿಶಿಷ್ಟ ಜಾತಿಯ (SC) ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕಾಗಿ, ಗ್ರಾಮಸ್ಥರು ಆ ಹೆಣ್ಮಗಳ ಕುಟುಂಬದ 40 ಸದಸ್ಯರ ತಲೆ ಬೋಳಿಸಿ ಶುದ್ಧೀಕರಿಸುವ ಭೀಕರ ಪ್ರಸಂಗ ನಡೆದಿದೆ. ಅಂತರ್ಜಾತಿ ವಿವಾಹವನ್ನು ಒಪ್ಪಿಕೊಂಡ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿ, ಕ್ರೂರ ಶಿಕ್ಷೆ ವಿಧಿಸಿ ʼಶುದ್ಧೀಕರಣಗೊಳಿಸಿರುವʼ ಈ ಘಟನೆ ವಿಕಸಿತ ಭಾರತದ ಮತ್ತೊಂದು ಚಹರೆಯನ್ನು ನಮ್ಮ ಮುಂದಿಟ್ಟಿದೆ. ಶ್ರೇಷ್ಠತೆ ಎಂಬ ಸಾಂಸ್ಕೃತಿಕ ಅಹಮಿಕೆಯನ್ನು ಪಾವಿತ್ರ್ಯಗೊಳಿಸಲು ಬಳಸಲಾಗುವ ʼಶುದ್ಧೀಕರಣʼ ಎಂಬ ಕ್ರಿಯೆಯೇ ಪ್ರಾಚೀನ ಭಾರತೀಯ ಸಮಾಜದ ಪಳೆಯುಳಿಕೆ. ಈ ಎರಡೂ ಘಟನೆಗಳಲ್ಲಿ ಗುರುತಿಸಬಹುದಾದ ಸಮಾನ ಎಳೆ ಎಂದರೆ ದೌರ್ಜನ್ಯಕ್ಕೀಡಾದವರು ತಳಸಮುದಾಯಕ್ಕೆ ಸೇರಿದವರು, ಕ್ರೂರ ದೌರ್ಜನ್ಯ ಎಸಗಿದವರು ಸಮಾಜದ ಮೇಲ್ವರ್ಗ-ಪ್ರಬಲ ವರ್ಗದವರು.
ಈ ಎರಡೂ ಘಟನೆಗಳನ್ನು ಮೀರಿದ ಬೆಳವಣಿಗೆ ತಮಿಳುನಾಡಿನ ಕಂಚೀಪುರದಲ್ಲಿ ನಡೆದಿರುವುದನ್ನು ದ ಹಿಂದೂ ಪತ್ರಿಕೆ ವರದಿ ಮಾಡಿದೆ.
ನಿಷೇಧಿತ ಜೀತ ಪದ್ಧತಿ-ಜೀವಂತವಾಗಿದೆ
ಮಾನೇಪಲ್ಲಿ ಅಂಕಮ್ಮ ಆಂಧ್ರ ಪ್ರದೇಶದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ. ಆಕೆ ಬಾತುಕೋಳಿಗಳ ಸಾಕಾಣಿಕೆ ಮಾಡುವ ಮುತ್ತು ಎಂಬ ರೈತನ ಬಳಿ ಮಾಹೆಯಾನ 24 ಸಾವಿರ ರೂ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಆತನ ಹಸುಗಳನ್ನು ಮೇಯಿಸುವುದು ಮತ್ತು ತಿರುಪತಿ ಜಿಲ್ಲೆಯ ಸತ್ಯವೇದು ಎಂಬ ಊರಿನಲ್ಲಿರುವ ಆತನ ಸಿಹಿ ತಿಂಡಿಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. ಅಂಕಮ್ಮ ತನ್ನ ಮಾಲೀಕನಿಂದ 15 ಸಾವಿರ ರೂ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದಿದ್ದುದರಿಂದ ಮುತ್ತು ಆಕೆಯ 9 ವರ್ಷದ ಕಿರಿಯ ಮಗ ವೆಂಕಟೇಶನನ್ನು ತನ್ನ ಬಳಿ ಕೆಲಸಕ್ಕೆ ಇಟ್ಟುಕೊಳ್ಳಲು ಕರೆಯದೊಯ್ಯುತ್ತಾನೆ. ಆಕೆಯ ಸಾಲದ ಮೊತ್ತವನ್ನು 42 ಸಾವಿರ ರೂಗಳಿಗೆ ಏರಿಸುತ್ತಾನೆ.

ತದನಂತರದಲ್ಲಿ ಅಂಕಮ್ಮ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ದುತ್ತರಾಳು ಮಂಡಲದ ವ್ಯಾಪ್ತಿಗೊಳಪಟ್ಟ ತೂರಕಪಲ್ಲೆ ಗ್ರಾಮದಲ್ಲಿ ಶಿವಾರೆಡ್ಡಿ ಎಂಬ ನಿಂಬೆ ತೋಟದ ಮಾಲೀಕನ ಬಳಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಕಳೆದ ಏಪ್ರಿಲ್ 9ರಂದು ಕಂಚೀಪುರದಲ್ಲಿ ಮುತ್ತು ನಿರ್ವಹಿಸುತ್ತಿದ್ದ ಬಾತುಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ತನ್ನ 9 ವರ್ಷದ ಮಗನೊಡನೆ ದೂರವಾಣಿ ಮೂಲಕ ಮಾತನಾಡಿ, ಮುತ್ತುವಿಗೆ ಕೊಡಬೇಕಾದ 42 ಸಾವಿರ ರೂ ಸಾಲವನ್ನು ಇನ್ನೆರಡು ದಿನಗಳಲ್ಲಿ ಪಾವತಿಸಿ, ಹುಡುಗನನ್ನು ವಾಪಸ್ ಕರೆತರುವುದಾಗಿ ಹೇಳುತ್ತಾಳೆ. ಆದರೆ ಅಂಕಮ್ಮ ತನ್ನ ಮಗನೊಡನೆ ನಡೆಸಿದ ಈ ದೂರವಾಣಿ ಸಂಭಾಷಣೆಯೇ ಕೊನೆಯ ಮಾತುಗಳಾಗಿಬಿಡುತ್ತವೆ.
ಒಂದು ವಾರದ ನಂತರ 42 ಸಾವಿರ ರೂಗಳೊಂದಿಗೆ ಅಂಕಮ್ಮ ತನ್ನ ಗ್ರಾಮದಿಂದ 270 ಕಿಮೀ ದೂರದಲ್ಲಿರುವ ಸತ್ಯವೇದು ಗ್ರಾಮಕ್ಕೆ ಹೋಗಿ ಮುತ್ತು ಸಾಲದ ಮೊತ್ತವನ್ನು ನೀಡಲು ಮುಂದಾದಾಗ , ಅದನ್ನು ನಿರಾಕರಿಸುವ ಮುತ್ತು ಆಕೆಯನ್ನು ಜಾತಿಯ ಹೆಸರಿನಲ್ಲಿ ನಿಂದಿಸುವುದೇ ಅಲ್ಲದೆ, ಆಕೆಯ ಮಗ ತನ್ನ ಮೊಬೈಲ್ ಮತ್ತು ಕೊಂಚ ಹಣದೊಂದಿಗೆ ತಪ್ಪಿಸಿಕೊಂಡಿದ್ದಾನೆ ಎಂದು ಹೇಳುತ್ತಾನೆ. ಒಂದು ತಿಂಗಳಾದರೂ ಮಗ ವೆಂಕಟೇಶನ ಸಂಪರ್ಕ ಸಿಗದೆ ಕಂಗಾಲಾಗಿದ್ದ ಅಂಕಮ್ಮನಿಗೆ ಹಾಲಿ ಮಾಲಿಕ ಶಿವಾರೆಡ್ಡಿ ನೆರವಾಗಿ ಸತ್ಯವೇದು ಪೊಲೀಸ್ ಠಾಣೆಯಲ್ಲಿ ಬಾಲಕ ನಾಪತ್ತೆಯಾಗಿರುವುದಾಗಿ ಎಫ್‌ಐಆರ್ ದಾಖಲಿಸುತ್ತಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಆರಂಭಿಸಿದಾಗ ಮುತ್ತು ವೆಂಕಟೇಶ್ ಏಪ್ರಿಲ್ 12ರಂದೇ ತಿರುವಣ್ಣಾಮಲೈ ಜಿಲ್ಲೆಯ ಪುದುಪಾಳಯಂನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ, ಜಾಂಡೀಸ್ ಕಾಯಿಲೆಗೆ ತುತ್ತಾಗಿ ಮೃತಪಟ್ಟಿರುವುದಾಗಿ ತಿಳಿಸುತ್ತಾನೆ. ಪಾಲಾರ್ ನದಿಯ ಬಳಿ ಬಾಲಕನ ಶವವನ್ನು ತಾನೇ ಹೂತಿರುವುದಾಗಿಯೂ ಒಪ್ಪಿಕೊಳ್ಳುತ್ತಾನೆ.
ಪೊಲೀಸರು ಆಳವಾದ ತನಿಖೆಯನ್ನು ನಡೆಸಿ, ಹೂತ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೊಳಪಡಿಸುತ್ತಾರೆ. ಕೊಳೆತ ಶವವನ್ನು ಕಂಡ ತಾಯಿ ಅಂಕಮ್ಮ ತನ್ನ ಮಗನನ್ನು ಅವನು ತೊಟ್ಟಿದ್ದ ಉಡುಪಿನಿಂದ ಗುರುತಿಸುತ್ತಾಳೆ. ಏಕೆಂದರೆ ಬಾಲಕನ ಮುಖ ಗುರುತಿಸಲಾಗದಷ್ಟು ಕೊಳೆತುಹೋಗಿರುತ್ತದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ವೈದ್ಯಕೀಯ ಆಸ್ಪತ್ರೆ ವೈದ್ಯರು ಅಂಕಮ್ಮಳಿಗೆ ಕೊಡದೆ ಹೋದರೂ, ಆ ವರದಿಯಲ್ಲಿ ಬಾಲಕ ವೆಂಕಟೇಶ್ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದನ್ನು, ಭಾರಿ ಆಯುಧವೊಂದರಿಂದ ಹಲ್ಲೆ ನಡೆದಿರುವುದಾಗಿ ದೃಢೀಕರಿಸುತ್ತಾರೆ. ತದನಂತರ ಮುತ್ತು, ಅವನ ಪತ್ನಿ ಮತ್ತು ಮಗನನ್ನು ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1976 ಹಾಗೂ 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 2016 ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ ಮತ್ತು ಪರಿಶಿಷ್ಟ ಪಂಗಡಗಳ ( ದೌರ್ಜನ್ಯ ನಿರ್ಬಂಧಕ ) ಕಾಯ್ದೆಯಡಿ ಬಂಧಿಸಲಾಗುತ್ತದೆ. ಈ ಘಟನೆ 50 ವರ್ಷದ ಹಿಂದೆ ನಿಷೇಧಕ್ಕೊಳಗಾದ ಜೀತ ಕಾರ್ಮಿಕ ಪದ್ಧತಿಯ ಪ್ರಾಚೀನ ನಡವಳಿಕೆಯು ಇನ್ನೂ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಜೀತ ಮತ್ತು ಶೋಷಣೆಯ ರೂಪಾಂತರ
ಎರಡು ವರ್ಷಗಳ ಹಿಂದೆ ಮುತ್ತು ಬಳಿ ಕೆಲಸಕ್ಕೆ ಸೇರಿದ ಅಂಕಮ್ಮ ಮತ್ತು ಆಕೆಯ ಪತಿ ಪ್ರಕಾಶ್ ಹೆಚ್ಚಿನ ಸಂಬಳ ದೊರೆಯುವ ಆಸೆಯ ಮೇಲೆ ಅಲ್ಲಿಗೆ ಸೇರಿದ್ದರು. ಆರಂಭದಲ್ಲಿ 24 ಸಾವಿರ ಮಾಸಿಕ ವೇತನದ ಆಶ್ವಾಸನೆ ನೀಡಿದ್ದರೂ ಮುತ್ತು ಅವರಿಗೆ ಅಷ್ಟು ಮೊತ್ತವನ್ನು ನೀಡಲಿಲ್ಲ. ಮುಂಗಡವಾಗಿ ದಂಪತಿಗಳು ಪಡೆದಿದ್ದ 15 ಸಾವಿರ ರೂಗಳನ್ನೇ ವೇತನವಾಗಿ ನಿಗದಿಪಡಿಸಲಾಗಿತ್ತು. ಈ ಸಾಲದ ಮೊತ್ತವನ್ನು ಕಂತಿನಲ್ಲಿ ಮರುಪಾವತಿ ಮಾಡುವ ಇವರ ಮನವಿಗೆ ಮುತ್ತು ಕಿವಿಗೊಡಲಿಲ್ಲ. ತಂಗಲು ಸೂರು ಸಹ ಇಲ್ಲದೆ ದಂಪತಿಗಳು ತೋಟದಲ್ಲಿ, ಹೊಲದಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದರು. ಪ್ರತಿವಾರವೂ ತಮ್ಮ ಕೂಳಿಗಾಗಿ ಇತರ ಊರುಗಳಲ್ಲಿ ಸುತ್ತಾಡಲಾರಂಭಿಸಿದ್ದರು. ಆಕೆಯ ಮೊದಲ ಪತಿ ಮರಣ ಹೊಂದಿದಾಗ, ತನ್ನ ಗಂಡ ಪ್ರಕಾಶ್‌ನೊಡನೆ ಅಂತ್ಯಸಂಸ್ಕಾರಕ್ಕೆಂದು ತಿರುಪತಿಗೆ ಹೋದಾಗ ಅಲ್ಲಿ ಭೆಟ್ಟಿಯಾದ ಮುತ್ತು, ಸಾಲದ ಹಣ ವಾಪಸ್ ಕೊಡುವವರೆಗೆ ಕೊನೆಯ ಮಗ ವೆಂಕಟೇಶನನ್ನು ಕರೆದೊಯ್ದಿದ್ದ.

ಈ ಬಾಲಕನ ದುರಂತ ಸಾವು, ಮಾಲಿಕನ ಬಂಧನ, ತನಿಖೆ, ಶಿಕ್ಷೆ, ಅಂಕಮ್ಮ ಮತ್ತು ಅಕೆಯ ಪತಿಗೆ ಸೂಕ್ತ ಪರಿಹಾರ ಇನ್ನಿತರ ಬೆಳವಣಿಗೆಗಳನ್ನು ಬದಿಗಿಟ್ಟು ಗಮನಿಸಬೇಕಿರುವುದು ನಿಷೇಧಿತ ಜೀತ ಪದ್ಧತಿ ಇಂದಿಗೂ ಜೀವಂತವಾಗಿ ಆಚರಣೆಯಲ್ಲಿರುವ ಆಘಾತಕಾರಿ ಅಂಶ. ಆಂಧ್ರಪ್ರದೇಶದಲ್ಲಿ ಜೀತ ಪದ್ಧತಿ ಮೊದಲಿನಷ್ಟು ವ್ಯಾಪಕವಾಗಿ ಇಲ್ಲದಿದ್ದರೂ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ ಎನ್ನುತ್ತಾರೆ ವೆಟ್ಟಿ ವಿಮೋಚನಾ ಒಕ್ಕೂಟ ಎನ್‌ಜಿಒದ ಪ್ರತಿನಿಧಿ ರಾವಿ ಸುನೀಲ್ ಕುಮಾರ್. ಸಾಮಾನ್ಯವಾಗಿ ಒಡಿಷಾ, ಛತ್ತಿಸ್‌ಘಡ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲದಿಂದ ಕೂಲಿ ಅರಸಿ ಬರುವ ವಲಸೆ ಕಾರ್ಮಿಕರು ಈ ವಿಷವರ್ತುಲಕ್ಕೆ ಸಿಲುಕುತ್ತಾರೆ ಎಂದು ಸುನೀಲ್ ಕುಮಾರ್ ಹೇಳುತ್ತಾರೆ. ಈ ಸಂಸ್ಥೆಯ ವರದಿಯೊಂದರ ಅನುಸಾರ 2023 ರಿಂದ ಈವರೆಗೆ 402 ಕಾರ್ಮಿಕರನ್ನು ಜೀತಪದ್ಧತಿಯಿಂದ ವಿಮುಕ್ತಗೊಳಿಸಲಾಗಿದೆ.
ಇವರಲ್ಲಿ ಬಹುತೇಕ ಕಾರ್ಮಿಕರು ಯಾನಾದಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 59 ಅಧಿಸೂಚಿತವಲ್ಲದ, 60 ಅಲೆಮಾರಿ ಬುಡಕಟ್ಟು ಸಮುದಾಯಗಳ ಪೈಕಿ ಈ ಸಮುದಾಯ ಪ್ರಮುಖವಾಗಿದ್ದು 2011ರ ಜನಗಣತಿಯ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಕಡುಬಡತದಲ್ಲೇ ಬದುಕುವ ಈ ಸಮುದಾಯದಲ್ಲಿ ಸಾಕ್ಷರತೆಯ ಪ್ರಮಾಣ ಕೇವಲ ಶೇಕಡಾ 33.35ರಷ್ಟಿದೆ. ಈ ಸಮುದಾಯದ ಜನರಿಗೆ ಕಾನೂನಿನ ಅರಿವು ಇಲ್ಲದಿರುವುದರಿಂದ ಅವರನ್ನು ಅತಿಯಾಗಿ ಶೋಷಣೆಗೊಳಪಡಿಸಲಾಗುತ್ತದೆ. ಯಾವುದೇ ಸ್ಥಿರಾಸ್ತಿಯಿಲ್ಲದೆ, ಕೆರೆ ಅಥವಾ ನದಿ ದಡಗಳ ಮೇಲೆ ವಾಸಿಸುವ ಈ ಜನರು ಬಾಹ್ಯ ಸಮಾಜದೊಡನೆ ಬೆರೆಯಲು ಭಯಪಟ್ಟು, ಮುಖ್ಯವಾಹಿನಿಯಿಂದ ದೂರವೇ ಇರುತ್ತಾರೆ ಎಂದು ಸುನೀಲ್ ಕುಮಾರ್ ಹೇಳುತ್ತಾರೆ. ಸಾಮಾನ್ಯವಾಗಿ ಈ ಬುಡಕಟ್ಟು ಕಾರ್ಮಿಕರು ಮುಕ್ತವಾಗಿ ಅನ್ಯರ ಸಹಾಯವನ್ನೇ ಕೋರುವುದಿಲ್ಲ ಎನ್ನುವುದು ವಿಶೇಷ.

ಸುನೀಲ್ ಅವರೇ ಉಲ್ಲೇಖಿಸುವ ಮತ್ತೊಂದು ಘಟನೆಯಲ್ಲಿ ಪಾಲ್ನಾಡು ಜಿಲ್ಲೆಯಲ್ಲಿ ಇಬ್ಬರು ಜೀತ ಕಾರ್ಮಿಕರು ವಿದ್ಯುತ್ ಆಘಾತದಿಂದ ಮರಣ ಹೊಂದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ನಡೆದ ಈ ಘಟನೆಯ ನಂತರವೂ ಪೋಷಕರು ಜೀತದಾಳುಗಳಾಗಿ ದುಡಿಯುತ್ತಲೇ ಇದ್ದಾರೆ ಎನ್ನಲಾಗಿದೆ. 56 ವರ್ಷದ ಕೋಟಯ್ಯ, ಪ್ರಕಾಶಂ ಜಿಲ್ಲೆಯ ಕೋತಪಟ್ನಂ ಗ್ರಾಮದಲ್ಲಿ ವಾಸಿಸುತ್ತಾರೆ. ನಾನ್ನೂರು ಯಾನಾದಿ ಸಮುದಾಯದವರು ಇರುವ ಈ ಗ್ರಾಮದಲ್ಲಿ ಕಾರ್ಮಿಕರು ಒಂದು ಹಟ್ಟಿಯಲ್ಲಿ ಹತ್ತು ಜನರಂತೆ ವಾಸ ಮಾಡುತ್ತಾರೆ. ಪಾಲ್ನಾಡು ಜಿಲ್ಲೆಯ ಚಿಕ್ಕಲ್ಲೂರಿಪೇಟದ ಲೇವಾದೇವಿಗಾರನ ಬಳಿ 10 ಸಾವಿರ ರೂ ಸಾಲ ಮಾಡಿದ್ದ ತಪ್ಪಿಗಾಗಿ, ಕೋಟಯ್ಯ ಮತ್ತು ಆತನ ಏಳು ಜನರ ಇಡೀ ಕುಟುಂಬ ಜೀತದಾಳುಗಳಾಗಿ ದುಡಿದಿರುವುದಾಗಿ ಅವರೇ ಹೇಳುತ್ತಾರೆ. ಕಳೆದ ವರ್ಷ ಅವರ ವಿಮೋಚನೆಯ ವೇಳೆಗೆ 1500 ರೂಗಳ ಸಾಲದ ಮೊತ್ತ 15 ಲಕ್ಷ ರೂಗಳಿಗೆ ಏರಿತ್ತು ಎಂದು ವಿಷಾದದಿಂದ ನೆನೆಯುತ್ತಾರೆ.
ಸುಬಾಬುಲ್ ಮರವನ್ನು ಕಡಿಯುವ ಕೆಲಸ ಮಾಡುವ ಕೋಟಯ್ಯ ಮತ್ತು ಸಹವರ್ತಿಗಳಿಗೆ 14 ಟನ್ ಮರವನ್ನು ಕಡಿದರೆ 15 ಸಾವಿರ ರೂಗಳ ವೇತನ ನೀಡಲಾಗುತ್ತದೆ. ಆದರೆ ಕಾನೂನು ನಿಯಮಾನುಸಾರ ಪ್ರತಿ ಟನ್‌ಗೂ 500 ರೂ ನೀಡಬೇಕಾಗುತ್ತದೆ. ಇಲ್ಲಿ ಆ ಕಾನೂನುಗಳು ಚಾಲ್ತಿಯಲ್ಲಿಲ್ಲ ಎಂದು ಹೇಳುವ ಕೋಟಯ್ಯ , ಕೋವಿದ್ ಸಂದರ್ಭದಲ್ಲಿ ನೌಕರಿ ಕಳೆದುಕೊಂಡಾಗ, ಮಾಲೀಕನ ಬಳಿ ಪಡೆದಿದ್ದ 1 ಲಕ್ಷ ರೂ ಸಾಲ ತೀರಿಸಲು, ಸರ್ಕಾರದಿಂದ ದೊರೆತಿದ್ದ ಮನೆಯನ್ನು 2 ಲಕ್ಷ ರೂಗಳಿಗೆ ಮಾರಿ ಸಾಲಮುಕ್ತರಾಗಿದ್ದಾರೆ. ಈಗ ನಾಗರಿಕ ಸಂಘಟನೆ ಮತ್ತು ಎನ್‌ಜಿಒಗಳ ಸಹಾಯದಿಂದ ಕೋಟಯ್ಯ ಜೀವನ ಸಾಗಿಸುತ್ತಿದ್ದು ದಿನಕ್ಕೆ 100 ರಿಂದ 400 ರೂಗಳ ದಿನಗೂಲಿ ಪಡೆದು ಬದುಕು ಸವೆಸುತ್ತಿದ್ದಾರೆ.

1996ರಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದೇಶಾದ್ಯಂತ ಜೀತ ಕಾರ್ಮಿಕರ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಆಗ ಸಲ್ಲಿಸಿದ ವರದಿಯಲ್ಲಿ ಆಂಧ್ರಪ್ರದೇಶದಲ್ಲಿ ಯಾವುದೇ ಪ್ರಕರಣಗಳು ಇಲ್ಲ ಎಂದೇ ವರದಿ ಮಾಡಲಾಗಿತ್ತು. ಆದರೆ ತದನಂತರ 2004ರಲ್ಲಿ ಆಂಧ್ರಪ್ರದೇಶ ಸರ್ಕಾರ 37,988 ಜೀತ ಕಾರ್ಮಿಕರನ್ನು ಗುರುತಿಸಿ ಮುಕ್ತಿಗೊಳಿಸಿತ್ತು. ಆದರೆ ತದನಂತರದಲ್ಲಿ ಯಾವುದೇ ಅಧಿಕೃತ ಸಮೀಕ್ಷೆಗಳನ್ನು ನಡೆಸಲಾಗಿಲ್ಲ ಎನ್ನುತ್ತಾರೆ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ರವಿ ಎಸ್ ಶ್ರೀವಾಸ್ತವ. ಈ ವಿದ್ವಾಂಸರು “ ಭಾರತದಲ್ಲಿ ಜೀತ ಕಾರ್ಮಿಕ ಪದ್ದತಿ ; ಘಟನೆಗಳು ಮತ್ತು ಮಾದರಿ ” ಎಂಬ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ತನ್ನ ಆದೇಶವನ್ನೂ ಹೊರಡಿಸಿತ್ತು. ಜೀತ ಕಾರ್ಮಿಕ ನಿಷೇಧ ಕಾಯ್ದೆಯ ಅನುಸಾರ ತಪ್ಪಿತಸ್ಥರಿಗೆ ಕನಿಷ್ಠ ಮೂರು ವರ್ಷದ ಸೆರೆವಾಸ ವಿಧಿಸಬೇಕೆಂಬ ನಿಯಮವಿದ್ದರೂ, ಎಷ್ಟು ಅಪರಾಧಿಗಳು ಶಿಕ್ಷೆಗೊಳಗಾಗಿದ್ದಾರೆ ಎನ್ನುವ ನಿಖರ ದತ್ತಾಂಶಗಳು ಲಭ್ಯವಿಲ್ಲ ಎಂದು ರವಿ ಶ್ರೀವಾಸ್ತವ ಹೇಳುತ್ತಾರೆ.
ಸಾಮಾಜಿಕ ವ್ಯಾಧಿಯ ಬೇರುಗಳು
ಮೊದಲು ಉಲ್ಲೇಖಿಸಿದ ಎರಡು ಜಾತಿ ದೌರ್ಜನ್ಯಗಳು ಮತ್ತು ಅಂಕಮ್ಮ-ಕೋಟಯ್ಯ ಅವರು ಅನುಭವಿಸಿದ ಜೀತ ಕಾರ್ಮಿಕ ಪದ್ಧತಿಯ ಕ್ರೌರ್ಯ 21ನೆ ಶತಮಾನದಲ್ಲಿ ವರದಿಯಾಗಿರುವ ಘಟನೆಗಳು. ಇದು ಏನನ್ನು ಸೂಚಿಸುತ್ತದೆ. ಮೂರೂ ಘಟನೆಗಳಲ್ಲಿ ಸಾಮಾನ್ಯ ಸಾರ್ವಜನಿಕ ಸಂಕಥನದಲ್ಲಿ ಈಗ ಕ್ಲೀಷೆಯಾಗಿ ಬಳಸಲ್ಪಡುತ್ತಿರುವ ʼಮನುವಾದಿʼಯ ಛಾಯೆಯನ್ನು ಕಾಣಲಾಗುವುದೇ ? ಇದನ್ನೂ ದಾಟಿದ ಸಾಮಾಜಿಕ ವ್ಯಸನವನ್ನು, ವ್ಯಾಧಿಯನ್ನು ಸಂವಿಧಾನ-ಪ್ರಜಾಪ್ರಭುತ್ವವಾದಿಗಳು ಗುರುತಿಸಬೇಕಿದೆ. ಮನುವಾದ ಎಂಬ ಮನಸ್ಥಿತಿ ಭಾರತೀಯ ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿದ್ದು, ಎಲ್ಲ ಜಾತಿ, ಸಮುದಾಯ, ಪಂಗಡ ಹಾಗೂ ಸಮಾಜಗಳನ್ನೂ ಆವರಿಸಿಕೊಂಡಿದೆ. ಶೋಷಣೆ, ದೌರ್ಜನ್ಯ, ತಾರತಮ್ಯ ಮತ್ತು ಈ ಮೂರೂ ವ್ಯಕ್ತವಾಗುವ ಅಮಾನುಷ ಕ್ರೌರ್ಯ ಆಧುನಿಕ ಭಾರತೀಯ ಸಮಾಜದಲ್ಲಿ ಬೇರೂರಿರುವುದು ಈ ಮೂರು ಘಟನೆಗಳಲ್ಲಿ ಕಾಣುತ್ತದೆ. ಇದರ ಮೂಲ ಇರುವುದು ಪಿತೃಪ್ರಧಾನ ಮೌಲ್ಯಗಳಾದ ಯಜಮಾನಿಕೆ, ದಬ್ಬಾಳಿಕೆ, ಜಾತಿ ವ್ಯವಸ್ಥೆಯ ಮೌಲ್ಯಗಳಾದ ಶ್ರೇಷ್ಠತೆ-ಶುದ್ಧತೆ ಮತ್ತು ಬಂಡವಾಳಶಾಹಿ ಮೌಲ್ಯಗಳಾದ ಮಾಲಿಕತ್ವ-ಮೇಲ್ಪಂಕ್ತಿಯ ಧೋರಣೆಗಳಲ್ಲಿ.

ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗಿನ ನಡುವೆಯೇ ಅಪಾಯದಲ್ಲಿರುವ ತಳಸಮಾಜದ ದುರ್ಬಲ ಸಮುದಾಯಗಳತ್ತ ನೋಡಿದಾಗ, ಈ ಸಾಮಾಜಿಕ ವ್ಯಾಧಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಡಪಕ್ಷಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗು ನಾಗರಿಕ ಭಾರತದ ಹಿತವಲಯದ ಸಮಾಜ ಯೋಚಿಸಬೇಕಿದೆ. ನಿರಂತರ ಶೋಷಣೆಗೊಳಗಾಗುತ್ತಿರುವ ದಲಿತ, ಆದಿವಾಸಿ, ಬುಡಕಟ್ಟು ಸಮುದಾಯಗಳು ಹಾಗೂ ಅದರೊಳಗಿನ ಶ್ರಮಜೀವಿ, ಮಹಿಳಾ ಸಮುದಾಯಗಳು ಈ ಸಾಮಾಜಿಕ ವ್ಯಾಧಿಯ ಬಲಿಪಶುಗಳಾಗಿರುವುದು ಸುಸ್ಪಷ್ಟವಾಗಿ ಕಾಣುತ್ತದೆ. ಈ ಜಟಿಲ ಹಾಗೂ ಸಂಕೀರ್ಣ ಸಮಸ್ಯೆಯ ವಿರುದ್ಧ ಸಾಮಾಜಿಕ ಅರಿವು ಮತ್ತು ಸಾಂವಿಧಾನಿಕ ಪ್ರಜ್ಞೆ ಮೂಡಿಸುವುದು ವಿಕಸಿತ ಭಾರತದ ಮುಖ್ಯ ಗುರಿಯಾಗಬೇಕಿದೆ.
(ಜೀತ ಕಾರ್ಮಿಕರನ್ನು ಕುರಿತ ಮಾಹಿತಿಗಳಿಗೆ ಆಧಾರ : A nine-year old bonded labourer – ನೆಲ್ಲೂರು ಶ್ರಾವಣಿ̧ ದ ಹಿಂದೂ 31 ಮೇ 2025- ಲೇಖನದ ಪೂರ್ಣ ಪಠ್ಯದ ಲಿಂಕ್ ಮೇಲೆ ಉಲ್ಲೇಖಿಸಲಾಗಿದೆ. )
-೦-೦-೦-೦-








