ಬಿಜೆಪಿ ಹೈಕಮಾಂಡ್ ಅಮಿತ್ ಶಾ ರಾಜ್ಯ ಭೇಟಿಯ ಬಳಿಕ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಮೂಡಿದೆ.
ಎರಡು ವರ್ಷಗಳ ಬಿ ಎಸ್ ಯಡಿಯೂರಪ್ಪ ಆಡಳಿತದ ಉದ್ದಕ್ಕೂ ನಿರಂತರ ಭಿನ್ನಮತೀಯ ಚಟುವಟಿಕೆ, ನಾಯಕತ್ವ ಬದಲಾವಣೆಯ ಕೂಗು ಮತ್ತು ಗುಂಪುಗಾರಿಕೆಯಿಂದ ಪಕ್ಷವಷ್ಟೇ ಅಲ್ಲ; ರಾಜ್ಯದ ಆಡಳಿತವೂ ಹಳಿ ತಪ್ಪಿ ಹಳ್ಳ ಹಿಡಿದಾಗ ಕೂಡ ಆ ಬಗ್ಗೆ ಒಮ್ಮೆಯೂ ಚಕಾರವೆತ್ತದೇ ಇದ್ದ ಶಾ, ಮೊನ್ನೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಗಳ ಮದುವೆಗೆ ಬಂದವರು ದಿಢೀರನೇ ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ ಮತ್ತು ಪಕ್ಷದ ಆಡಳಿತದ ಬಗ್ಗೆ ಭಾರೀ ಮೆಚ್ಚುಗೆಯ, ಕಾಳಜಿಯ ಮಾತುಗಳನ್ನು ಆಡಿಹೋಗಿದ್ದಾರೆ.
ಅದರಲ್ಲೂ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಆಡಳಿತವನ್ನು ಹೊಗಳುತ್ತಾ, ಅವರ ನೇತೃತ್ವದಲ್ಲೇ ಪಕ್ಷ ಮುಂದಿನ ವಿಧಾನಸಭಾ ಚುನಾವಣೆ ನಡೆಸುವುದಾಗಿ ಘೋಷಿಸುವ ಮೂಲಕ ಒಂದೇ ಏಟಿಗೆ ಎರಡು ಹಕ್ಕಿಗೆ ಗುರಿ ಇಟ್ಟು ಕಲ್ಲು ಬೀಸಿದ್ದಾರೆ. ನಿರೀಕ್ಷೆಯಂತೆ ಅದು ಗುರಿ ಮುಟ್ಟಿದೆ. ಹಾಗಾಗಿಯೇ ಬಿಜೆಪಿಯಲ್ಲಿ ಇದೀಗ ಗಲಿಬಿಲಿ ಆರಂಭವಾಗಿದೆ.
ಆ ಗಲಿಬಿಲಿಯ ಭಾಗವಾಗಿಯೇ ಶಾ ಹೇಳಿಕೆಯ ಬೆನ್ನಲ್ಲೇ ಭರ್ಜರಿ ಚಟುವಟಿಕೆಗಳು ಆಡಳಿತಪಕ್ಷದಲ್ಲಿ ಗರಿಗೆದರಿದ್ದು, ಒಂದು ಕಡೆ ತಮ್ಮದೇ ನಾಯಕತ್ವದಲ್ಲಿ ಮುಂದಿನ ಚುನಾವಣೆ ಮತ್ತು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ತಮ್ಮ ಉಳಿದ ಜೀವನದ ಪರಮ ಧ್ಯೇಯ ಎನ್ನುತ್ತಿರುವ ಬಿ ಎಸ್ ಯಡಿಯೂರಪ್ಪ ದಿಢೀರನೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದರೆ, ಮತ್ತೊಂದು ಕಡೆಗೆ ಈಗಾಗಲೇ ಮುಖ್ಯಮಂತ್ರಿ ಗಾದಿ ವಂಚಿತರಾಗಿ ಮುಂದಾದರೂ ಸಿಗಬಹುದೇ ಒಂದು ಅವಕಾಶ ಎಂದು ಚಾತಕ ಪಕ್ಷಿಗಳಂತೆ ಕಾದು ಕುಳಿತಿರುವ ಕೆ ಎಸ್ ಈಶ್ವರಪ್ಪ ಮತ್ತಿತರರು ಸಾಮೂಹಿಕ ನಾಯಕತ್ವದ ಜಪ ಪಠಿಸತೊಡಗಿದ್ದಾರೆ.

ವಾಸ್ತವವಾಗಿ ಅಮಿತ್ ಶಾ ಹೇಳಿಕೆಯ ಉದ್ದೇಶ ಕೂಡ ಇದೇ ಆಗಿತ್ತು. ಒಂದು ಕಡೆ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಆಡಳಿತ ದುರುಪಯೋಗದಂತಹ ಗಂಭೀರ ಆರೋಪಗಳ ಜೊತೆಗೆ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕುಟುಂಬದ ಮಟ್ಟದಲ್ಲಿ ಆಡಳಿತ ಮತ್ತು ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿಯೇ ಅಧಿಕಾರದಿಂದ ಪದಚ್ಯುತಗೊಂಡಿರುವ ಯಡಿಯೂರಪ್ಪ, ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಮತ್ತು ಆಡಳಿತದಲ್ಲಿ ಪ್ರಭಾವ ಮುಂದುವರಿಸುವ ಯತ್ನವಾಗಿ ಏಕಪಕ್ಷೀಯವಾಗಿ ರಾಜ್ಯ ಪ್ರವಾಸ ನಿರ್ಧಾರ ಕೈಗೊಂಡಿದ್ದಾರೆ. ಆ ಪ್ರವಾಸದ ಹಿಂದೆ ಕೇವಲ ಪಕ್ಷದ ಮೇಲಿನ ಪ್ರಭಾವ ಮತ್ತು ಹಿಡಿತ ಉಳಿಸಿಕೊಳ್ಳುವ ಇರಾದೆ ಮಾತ್ರವಲ್ಲದೆ, ಆ ಮೂಲಕ ಹೈಕಮಾಂಡಿಗೆ ರಾಜ್ಯ ರಾಜಕಾರಣದಲ್ಲಿ ಈಗಲೂ ತಮಗಿರುವ ಪ್ರಭಾವದ ಕುರಿತ ಸಂದೇಶ ರವಾನೆಯ ಉದ್ದೇಶವೂ ಇದೆ. ಜೊತೆಗೆ ಪಕ್ಷದಲ್ಲಿ ತಮ್ಮನ್ನು ಮತ್ತು ತಮ್ಮ ಪುತ್ರರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ಮುಂದುವರಿದರೆ, ನಿರ್ಣಾಯಕ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳ ಕುರಿತು ಇದೇ ಪ್ರವಾಸದಲ್ಲಿ ಜಿಲ್ಲಾ ಮಟ್ಟದ ತಮ್ಮ ಆಪ್ತ ನಾಯಕರೊಂದಿಗೆ ಸಮಾಲೋಚನೆಯ ಯೋಚನೆ ಕೂಡ ಈ ಪ್ರವಾಸದ ಹಿಂದೆ ಇತ್ತು ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿಯೇ ಯಡಿಯೂರಪ್ಪ ಪ್ರವಾಸಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದಲೇ ಶಾ, ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆಗೆ ಹೋಗುವ ಮಾತುಗಳನ್ನಾಡಿದ್ದರು. ಇದೀಗ ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವುದರಿಂದ, ಅಷ್ಟರಮಟ್ಟಿಗೆ ಶಾ ಬಿಟ್ಟ ಬಾಣ ಕೆಲಸ ಮಾಡಿದೆ.
ಅಮಿತ್ ಶಾ ಮಾತಿನ ಮತ್ತೊಂದು ಗುರಿ ಪಕ್ಷದ ಹಿರಿಯ ನಾಯಕರ ನಿಷ್ಕ್ರಿಯತೆ. ಪಕ್ಷದಲ್ಲಿ ಅಧಿಕಾರ ಅನುಭವಿಸಿ, ಸ್ಥಾನ ಮಾನ ಪಡೆದು, ಸಂಪತ್ತು ವೃದ್ಧಿಸಿಕೊಂಡಿರುವ ಹಲವು ಹಿರಿಯ ನಾಯಕರು, ಪಕ್ಷದ ನಾಯಕತ್ವ ಬದಲಾವಣೆಯ ಈ ಹೊತ್ತಿನಲ್ಲಿ ಪಕ್ಷದ ಸಂಘಟನೆಯನ್ನು ದೃಢಪಡಿಸುವ, ಯಡಿಯೂರಪ್ಪ ಅವರನ್ನು ಸಿಎಂ ಗಿರಿಯಿಂದ ಇಳಿಸಿದ ಪರಿಣಾಮವಾಗಿ ಆಗಬಹುದಾದ ಗೊಂದಲಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಕೇವಲ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಮತ್ತೆ ಕೆಲವರು ಪಕ್ಷದ ಬೆಳವಣಿಗೆಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ತಲೆಮಾರು ಬದಲಾವಣೆಯ ಹಂತದಲ್ಲಿ ಹಳೆಯ ತಲೆಮಾರು ಹೊಸ ತಲೆಮಾರಿನ ನಾಯಕರಿಗೆ ಮಾರ್ಗದರ್ಶನ ಮಾಡಬೇಕು, ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಗೊಂದಲ ಮೂಡದಂತೆ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ, ಹಿರಿಯ ನಾಯಕರೆನಿಸಿಕೊಂಡವರು ಅಂತಹ ಯತ್ನಗಳನ್ನು ಮಾಡುತ್ತಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಪಕ್ಷದ ಹಿರಿಯರಿಗೆ ಚುರುಕು ಮುಟ್ಟಿಸುವ ಉದ್ದೇಶವೂ ಶಾ ಮಾತಿನ ಹಿಂದಿತ್ತು ಎನ್ನಲಾಗಿದೆ.
ಇದೀಗ ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತಿತರ ನಾಯಕರು ಬೆಚ್ಚಿಬಿದ್ದಂತೆ ಎದ್ದು ಕೂತಿರುವುದು, ಶಾ ಬಿಟ್ಟ ಬಾಣ ತನ್ನ ಎರಡನೇ ಗುರಿಯನ್ನೂ ಯಶಸ್ವಿಯಾಗಿ ಮುಟ್ಟಿದೆ ಎಂಬುದನ್ನು ಸಾರಿ ಹೇಳುತ್ತಿದೆ.

ಶಾ ಹೇಳಿಕೆ, ಆ ಬಳಿಕದ ಯಡಿಯೂರಪ್ಪ ರಾಜ್ಯ ಪ್ರವಾಸ ರದ್ದು, ಹಿರಿಯ ನಾಯಕರ ಗಲಿಬಿಲಿ… ಇಷ್ಟರವರೆಗೆ ಶಾ ಬಿಟ್ಟ ಬಾಣದ ಪರಿಣಾಮಗಳು ಹೈಕಮಾಂಡ್ ನಿರೀಕ್ಷೆಯಂತೆಯೇ ಇವೆ. ಆದರೆ, ಆ ಬಳಿಕದ ಬೆಳವಣಿಗೆಗಳು ಬೇರೆಯದೇ ಸೂಚನೆ ನೀಡತೊಡಗಿವೆ ಎಂಬುದು ಬಿಟ್ಟ ಬಾಣದ ಅಡ್ಡಪರಿಣಾಮ!
ಶಾ ಹೇಳಿಕೆಯ ಬೆನ್ನಲ್ಲೇ ಯಡಿಯೂರಪ್ಪ, ತಮ್ಮೊಂದಿಗೆ ಅಷ್ಟೇನೂ ಆಪ್ತ ನಂಟು ಹೊಂದಿರದ ಮತ್ತು ಬೊಮ್ಮಾಯಿ ಅವರನ್ನು ಸಿಎಂ ಮಾಡಿದ ಬಳಿಕ ಪಕ್ಷದ ನಿರ್ಧಾರದ ಕುರಿತು ಸಾಕಷ್ಟು ಅಸಮಾಧಾನಗೊಂಡಿರುವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದಾರೆ. ಆ ಭೇಟಿ ಕೇವಲ ಔಪಚಾರಿಕ ಎಂದು ಎರಡೂ ಕಡೆಯುವರು ಹೇಳುತ್ತಿದ್ದರೂ, ಆ ಭೇಟಿಯ ವೇಳೆ, ಬಿಜೆಪಿಯ ಮತಬ್ಯಾಂಕ್ ಆದ ಲಿಂಗಾಯತ ಸಮುದಾಯದ ಇಬ್ಬರು ಪ್ರಮುಖ ನಾಯಕರ ನಡುವೆ ಮುಖ್ಯವಾಗಿ ಅಮಿತ್ ಶಾ ಅವರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಸುವ ಕುರಿತ ಹೇಳಿಕೆಯ ವಿಷಯವೇ ಚರ್ಚೆಯಾಗಿದೆ ಎಂಬುದು ಅವರ ಆಪ್ತ ವಲಯಗಳಿಂದಲೇ ಹರಿದುಬಂದಿರುವ ಸಂಗತಿ.
ತಮ್ಮ ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯ ಖಾತರಿಪಡಿಸಿಕೊಳ್ಳಲು ಮತ್ತು ಪುತ್ರ ಸೇರಿದಂತೆ ತಮ್ಮ ಕುಟುಂಬದ ಮೇಲಿರುವ ಸಾಲು ಸಾಲು ಗಂಭೀರ ಭ್ರಷ್ಟಾಚಾರ ಪ್ರಕರಣಗಳಿಂದ ತಾವು ಬಚಾವಾಗಬೇಕಾದರೆ ತಾವು ರಾಜಕೀಯವಾಗಿ ಸಕ್ರಿಯವಾಗಿರುವುದು ಬಿಎಸ್ ವೈ ಗೆ ಅನಿವಾರ್ಯ. ಅದು ಬಿಜೆಪಿಯ ಒಳಗಿರಲಿ, ಅಥವಾ ಹೊರಗಿರಲಿ, ರಾಜಕೀಯವಾಗಿ ಚಾಲ್ತಿಯಲ್ಲಿ ಇರದೇ ಹೋದರೆ, ಪುತ್ರನ ರಾಜಕೀಯ ಮಹತ್ವಾಕಾಂಕ್ಷೆಯೂ ಮಂಕಾಗಲಿದೆ ಮತ್ತು ಅಂತಹ ರಾಜಕೀಯ ಅಪ್ರಸ್ತುತತೆಯ ಮೊದಲ ಅಪಾಯ ಅಕ್ರಮಗಳು ಉರುಳಾಗುವುದು. ಹಾಗಾಗಿ ರಾಜಕೀಯವಾಗಿ ಸಕ್ರಿಯವಾಗಿರುವುದು ಅನಿವಾರ್ಯ. ಹಾಗಾಗಿಯೇ ರಾಜ್ಯ ಪ್ರವಾಸವನ್ನು ಯೋಜಿಸಿದ್ದರು.
ಆದರೆ, ಈಗಾಗಲೇ ತಮ್ಮನ್ನು ಮೂಲೆಗುಂಪು ಮಾಡುವ ಸೂಚನೆಯನ್ನು ಅಮಿತ್ ಶಾ ಬಹಳ ಸ್ಪಷ್ಟವಾಗಿಯೇ ರವಾನಿಸಿಯಾಗಿದೆ. ಹಾಗಾಗಿ, ಯಡಿಯೂರಪ್ಪ ಮತ್ತು ಅವರ ಪುತ್ರರ ಪಾಲಿಗೆ ಮುಂದಿನ ದಿನಗಳು ಮಾಡು ಇಲ್ಲವೇ ಮಡಿ ಎಂಬಂತಹ ಸವಾಲಿನ ದಿನಗಳಾಗಿವೆ. ಆ ಹಿನ್ನೆಲೆಯಲ್ಲಿ ಮತ್ತೊಬ್ಬ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊಂದಿರುವ ಹಲವು ಹಿರಿಯ ನಾಯಕರೊಂದಿಗೂ ಇದೇ ರೀತಿಯ ಸಮಾಲೋಚನೆ ನಡೆಸುವ ಮೂಲಕ ಅವರನ್ನು ವಿಶ್ವಾಸಕ್ಕೆ ಪಡೆಯುವ ಲೆಕ್ಕಾಚಾರ ಬಿ ಎಸ್ ವೈ ಅವರದು. ಬೊಮ್ಮಾಯಿ ಅವರನ್ನು ಹೈಕಮಾಂಡ್ ಏಕಾಏಕಿ ಪಕ್ಷದ ಭವಿಷ್ಯದ ನಾಯಕ ಎಂದು ತೀರ್ಮಾನಿಸಿರುವುದರಿಂದ ಬೇಸರಗೊಂಡಿರುವ, ಆತಂಕಗೊಂಡಿರುವ ಹಲವರನ್ನು ಮುಂದಿನ ದಿನಗಳಲ್ಲಿ ಬಿಎಸ್ ವೈ ಭೇಟಿಯಾಗಿ, ತಮ್ಮ ಬೆಂಬಲಿಗರ ಪಡೆಯನ್ನು ವಿಸ್ತರಿಸಲಿದ್ದಾರೆ. ಆ ಮೂಲಕ ಪಕ್ಷದ ಹೈಕಮಾಂಡಿಗೆ ತಮ್ಮ ಪ್ರಭಾವ ಕುಗ್ಗಿಸುವ ಯತ್ನಗಳನ್ನು ಕೈಬಿಡದೇ ಹೋದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು, 2012ರ ಪರಿಸ್ಥಿತಿ ಮತ್ತೆ ಮರುಕಳಿಸಬಹುದು ಎಂಬ ಸಂದೇಶ ರವಾನಿಸುವುದು ಬಿ ಎಸ್ ವೈ ತಂತ್ರಗಾರಿಕೆ ಎನ್ನಲಾಗಿದೆ!
ಹಾಗಾಗಿ, ಅಮಿತ್ ಶಾ ಬಿಟ್ಟ ನಾಯಕತ್ವದ ಬಾಣ, ಆರಂಭಿಕ ಯಶಸ್ಸು ಕಂಡಿದ್ದರೂ, ಕ್ರಮೇಣ ಅದು ತಿರುಗುಬಾಣವಾದರೂ ಅಚ್ಚರಿ ಇಲ್ಲ! ಆದರೆ, ಆ ಬೆಳವಣಿಗೆಗಳು ಬಿಎಸ್ ವೈ ತಂತ್ರಗಾರಿಕೆ ಮತ್ತು ಅವರೊಂದಿಗೆ ಯಾವೆಲ್ಲಾ ನಾಯಕರು ಕೈಜೋಡಿಸುತ್ತಾರೆ ಎಂಬುದರ ಮೇಲೆ ನಿಂತಿವೆ!