ಬೀದರ್: ಬಸವ ಕಲ್ಯಾಣದಿಂದ ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ಶುಕ್ರವಾರ ಬೀದರ್ ಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಖ್ಖರ ಪವಿತ್ರ ಕ್ಷೇತ್ರ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಗುರುವಾರ ಮಧ್ಯರಾತ್ರಿ ಬೀದರ್ ವಾಯು ನೆಲೆಗೆ ಆಗಮಿಸಿದ್ದ ಅಮಿತ್ ಶಾ ಆಗಮಿಸಿದ್ದರು.
ಗುರುದ್ವಾರ ಪರಿಸರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಅಮಿತ್ ಶಾ ಇದ್ದ ವಾಹನ ಗುರುದ್ವಾರದ ಪ್ರವೇಶ ದ್ವಾರದ ವರೆಗೂ ಬಂದಿತು. ಅಲ್ಲಿ ಪಕ್ಷದ ಕಾರ್ಯಕರ್ತರು ಅವರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ನಂತರ ಅವರು ನಾನಕ್ ಝೀರಾ ಅಮೃತ ಕುಂಡದ ದರ್ಶನ ಪಡೆದರು. ಮೆಟ್ಟಿಲುಗಳನ್ನು ಏರಿ ಗುರುದ್ವಾರಕ್ಕೆ ಹೋಗುವುದು ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಗುರುದ್ವಾರ ಪ್ರಬಂಧಕ ಕಮಿಟಿಯವರು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಿದ್ದರು.
ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಒಂದು ವಾಹನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೊಂದು ವಾಹನದಲ್ಲಿ ಕುಳಿತು ಲಂಗರ್ ಭವನದ ಮುಂಭಾಗದಿಂದ ಗುರುದ್ವಾರ ಪ್ರವೇಶಿಸಿದರು.
ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್ ಸಿಂಗ್, ಮನಪ್ರೀತ್ ಸಿಂಗ್ ಖನೋಜಾ ಅವರು ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಮುಖಂಡರಾದ ಗುರುನಾಥ ಕೊಳ್ಳೂರು, ಸೂರ್ಯಕಾಂತ ನಾಗಮಾರಪಳ್ಳಿ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಇದ್ದರು.