ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮರಸ್ಯ ನಿರ್ವಹಣೆಗೆ ತಲಾ ಮೂರು ಸಚಿವರನ್ನು ನೇಮಿಸಿ ಸಮಿತಿ ರಚಿಸಬೇಕು. ಗಡಿ ವಿವಾದದ ವಿಷಯಗಳನ್ನು ಬಗ್ಗೆ ಆದಷ್ಟು ಬೇಗನೆ ಚರ್ಚಿಸಿ ಬಗೆಹರಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಗೃಹ ಸಚಿವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು ಜತೆಗೆ ಸಭೆ ನಡೆಸಿದರು. ಅಲ್ಲಿ ಗಡಿವಿಚಾರದ ಬಗ್ಗೆ ಮಹಾರಾಷ್ಟ್ರದವರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚಿಸಲಾಯಿತು. ಎರಡೂ ಪಕ್ಷಗಳ ವಿಚಾರಗಳನ್ನು ಚರ್ಚಿಸಿದ ನಂತರ ಕೇಂದ್ರ ಗೃಹ ಸಚಿವರು ಶಾಂತಿ ಹದಗೆಡದಂತೆ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ ಎಂದರು.

ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇದೆ. ಜನರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಗಡಿ ವಿಚಾರದ ಬಗ್ಗೆ ಸಂವಿಧಾನಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಾಗಲಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲಿ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಕೊಡುವುದಾಗಲಿ ಮಾಡಬಾರದು. ಎರಡು ರಾಜ್ಯಗಳ ನಡುವೆ ಬರುವ ಸಣ್ಣಪುಟ್ಟ ವಿಚಾರಗಳ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು.
ಉಳಿದಂತೆ ಪಕ್ಷದ ಸಂಘಟನೆ, ಜನಸಂಕಲ್ಪ ಯಾತ್ರೆ, ಪ್ರಧಾನಿ ಹಾಗೂ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ದಿನಾಂಕಗಳ ಬಗ್ಗೆ ಚರ್ಚಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಇನ್ನುಮುಂದೆ ಹೆಚ್ಚಿನ ಸಮಯ ನೀಡಲಿದ್ದು, ಹಲವಾರು ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆಯಲಿವೆ ಎಂದು ತಿಳಿಸಿದರು.