ರಾಜ್ಯದಲ್ಲಿ ಎರಡು ಧರ್ಮಗಳ ನಡುವೆ ಆಜಾನ್ ಹಾಗೂ ಹನುಮಾನ್ ಚಾಲೀಸಾ ವಿವಾದ ಬುಗಿಲೆದ್ದಿದೆ. ಇತ್ತ ಬೆಂಗಳೂರಿನ ಚಂದ್ರಾಲೇಔಟ್ನಲ್ಲಿ ಹಿಂದು-ಮುಸ್ಲಿಂ ಇಬ್ಬರೂ ಸೇರಿ ಊರು ಮಾರಮ್ಮ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ ಮಾದರಿಯಾಗಿದ್ದಾರೆ.
ದೇವಿಯ ಮೆರವಣಿಗೆ ಚಂದ್ರಾ ಲೇಔಟ್ ಬಳಿಯಿರುವ ಮಸೀದಿ ಬಳಿ ತಲುಪಿದಾಗ ಮುಸ್ಲಿಂ ಧರ್ಮದ ಮುಖಂಡರು ಮೆರವಣಿಗೆಯನ್ನು ಸ್ವಾಗತಿಸಿ ತಿಂಡಿ-ತಿನಿಸು ಹಾಗು ತಂಪು ಪಾನೀಯಗಳನ್ನು ವಿತರಿಸಿದ್ದರು. ನಂತರ ತಾವು ಸಹ ಮೆರವಣಿಗೆಯಲ್ಲಿ ಸಾಗಿ ಎರಡು ಸಮುದಾಯದವರು ಪರಸ್ಪರ ಶುಭಾಶಯ ಕೋರಿ ಕೋಮು ಸೌಹಾರ್ದತೆ ಕಾಪಾಡುವಂತೆ ಪ್ರತಿಜ್ಞೆ ಮಾಡಿದ್ದರು ಎಂದು ಚಂದ್ರಾಲೇಔಟ್ ಠಾಣಾಧಿಕಾರಿ ಮನೋಜ್ ಹೋವಲೆ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಇದ್ದ ಕಾರಣ ಜನರು ಉರಹಬ್ಬವನ್ನು ಆಚರಿಸಿರಲಿಲ್ಲ. ಆದರೆ, ಈ ಭಾರೀ ಹಬ್ಬವನ್ನು ಆಚರಿಸಲು ದೇವಸ್ಥಾನ ಸಮಿತಿಯವರು ನಿರ್ಧಿರಿಸಿದ ಕಾರಣ ಈ ಸೂಕ್ಷ್ಮ ಸಮಯದಲ್ಲಿ ಎರಡು ಸಮುದಾಯದವರನ್ನು ಒಟ್ಟಾಗಿ ಕರೆದುಕೊಂಡು ಹಬ್ಬವನ್ನು ಆಚರಿಸಲು ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಪೊಲೀಸರು ಉರಹಬ್ಬ ಶುರುವಾಗುವುದಕ್ಕು ಮುನ್ನ ಎರಡು ಸಮುದಾಯದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು ಮತ್ತು ಸಾಮರಸ್ಯ ಕಾಪಾಡುವಂತೆ ಎರಡು ಸಮುದಾಯಗಳ ಮುಖಂಡರ ಬಳಿ ಮನವಿ ಮಾಡಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಕಾರ್ಯಕ್ರಮ ಜರುಗಿತ್ತು ಮೆರವಣಿಗೆಯ ಭಾಗವಾಗಿದ್ದ ಪೊಲೀಸರು ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.