ಹಾವೇರಿ :ಕಿಕ್ಕಿರಿದು ತುಂಬಿದ್ದ ಸರ್ಕಾರಿ ಬಸ್ನಿಂದ ಬಿದ್ದು ಪ್ರೌಢಶಾಲಾ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆಯು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು 14 ವರ್ಷದ ಮಧು ಕುಂಬಾರ ಎಂದು ಗುರುತಿಸಲಾಗಿದೆ. ವಾಸನ ಗ್ರಾಮದ ನಿವಾಸಿಯಾಗಿದ್ದ ಮಧು ಕುಸನೂರುನಲ್ಲಿರುವ ಶಾಲೆಗೆ ಸರ್ಕಾರಿ ಬಸ್ನಲ್ಲಿಯೇ ಪ್ರಯಾಣಿಸುತ್ತಿದ್ದಳು ಎನ್ನಲಾಗಿದೆ.
ಇಂದು ಸರ್ಕಾರಿ ಬಸ್ನಲ್ಲಿ ಮಹಿಳೆಯರೇ ಕಿಕ್ಕಿರಿದು ತುಂಬಿದ್ದರು. ಎಲ್ಲೆಡೆ ಸಭೆ – ಸಮಾರಂಭ, ವಿವಾಹ ಕಾರ್ಯಕ್ರಮಗಳು ಇದ್ದರಿಂದ ಸಾರಿಗೆ ಬಸ್ನಲ್ಲಿ ಜನರು ತುಂಬಿ ಹೋಗಿದ್ದರು. ಬಸ್ನ ಬಾಗಿಲಲ್ಲಿ ನಿಂತಿದ್ದ ಮಧು ಕುಂಬಾರ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್ನಿಂದ ಬಿದ್ದಿದ್ದಳು. ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಬಸ್ನಿಂದ ಬಿದ್ದು ಮಧು ಮೃತಪಟ್ಟಿದ್ದಾಳೆ.
ಈ ಘಟನೆ ಸಂಬಂಧ ಮೃತ ಬಾಲಕಿಯ ಪೋಷಕರು ಬಸ್ ಚಾಲಕನ ವಿರುದ್ಧ ಆಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರಿ ಬಸ್ಗಳು ಫುಲ್ ರಶ್ ಆಗುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.