ನವದೆಹಲಿ: ಅಂಬಾನಿ, ಅದಾನಿ ವಿಚಾರ ಈಗ ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ವಾದ – ವಿವಾದಕ್ಕೆ ಕಾರಣವಾಗುತ್ತಿದೆ. ಹಿಂದೆ ತಮ್ಮ ಭಾಷಣದುದ್ದಕ್ಕೂ ಅಂಬಾನಿ, ಅದಾನಿಯನ್ನು ಟೀಕಿಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಮೌನ ವಹಿಸಿದ್ದಾರೆ. ಇದನ್ನು ಪ್ರಸ್ತಾಪಿಸಿ ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕುಟುಕಿದ್ದರು. ಈಗ ಖಾಸಗಿ ಪತ್ರಿಕೆ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿಯೊಂದನ್ನು ಮಾಡಿದ್ದು, ಅದು ಭಾರೀ ಸದ್ದು ಮಾಡುತ್ತಿದೆ.
ಕಲ್ಲಿದ್ದಲು ದರ ಹೆಚ್ಚಿಸಿ ಇನ್ವಾಯ್ಸ್ ಮಾಡುತ್ತಿದ್ದಾರೆ ಎಂದು ಅದಾನಿ ಗ್ರೂಪ್ ವಿರುದ್ಧ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದರು. ಹತ್ತು ವರ್ಷಗಳ ಹಿಂದೆ ಇದೇ ಅದಾನಿಯಿಂದ ಇನ್ವಾಯ್ಸ್ ಹಗರಣ ನಡೆದಿರುವುದು ಈಗ ಬೆಳಕಿಗೆ ಬಂದಿದೆ. ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಇವತ್ತು ಈ ಕುರಿತು ವರದಿ ಮಾಡಿದ್ದು, ಆ ಇನ್ವಾಯ್ಸ್ 2014ರ ಜನವರಿಯದ್ದಾಗಿದ್ದು, ಆಗ ಅಧಿಕಾರದಲ್ಲಿ ಇದ್ದದ್ದು ಯುಪಿಎ ಸರ್ಕಾರ ಎಂಬುವುದು ಸತ್ಯ.
ವರದಿಯಂತೆ ಅದಾನಿ ಗ್ರೂಪ್ ಸಂಸ್ಥೆ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಖರೀದಿಸಿ ಭಾರತಕ್ಕೆ ತಂದು, ಉತ್ತಮ ಗುಣಮಟ್ಟದ ಕಲ್ಲಿದ್ದಲಿನ ಬೆಲೆಗೆ ಮಾರುತ್ತಿತ್ತು. ಕಿಲೋಗೆ 3,500 ಕ್ಯಾಲೊರಿ ಇರುವ ಕಲ್ಲಿದ್ದಲನ್ನು 6,000 ಕ್ಯಾಲೋರಿಯ ಕಲ್ಲಿದ್ದಲೆಂದು ಮಾರಿ ಲಾಭ ಮಾಡಿಕೊಂಡಿತ್ತು ಎಂದು ವರದಿ ಮಾಡಿದೆ.
1.5 ಮಿಲಿಯನ್ ಟನ್ ಗಳಷ್ಟು ಕಲ್ಲಿದ್ದಲನ್ನು ಇಂಡೋನೇಷ್ಯಾದಲ್ಲಿ ಖರೀದಿಸಿ 22 ಹಡಗುಗಳಲ್ಲಿ ತುಂಬಿಸಿ ಭಾರತಕ್ಕೆ ತಂದಿತ್ತು. ನಂತರ ದೇಶದಲ್ಲಿ ಆ ಕಲ್ಲಿದ್ದಲನ್ನು ದುಪ್ಪಟ್ಟು ದರಕ್ಕೆ ಮಾರಿ ಅದಾನಿ ಗ್ರೂಪ್ ಲಾಭ ಮಾಡಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಈ ವರದಿಯು ವ್ಯವಸ್ಥಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯ ದಾಖಲೆಗಳಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದೆ. ಅದರಂತೆ, 2013ರ ಡಿಸೆಂಬರ್ ನಲ್ಲಿ ಟನ್ ಗೆ 28 ಡಾಲರ್ಸ್ ಬೆಲೆಯಂತೆ ಕಲ್ಲಿದ್ದಲು ಇಂಡೋನೇಷ್ಯಾದಿಂದ ಹೊರಟು 2014ರ ಜನವರಿಯಲ್ಲಿ ಭಾರತವನ್ನು ತಲುಪಿದಾಗ ಟನ್ 92 ಡಾಲರ್ ಬೆಲೆ ಪಡೆದಿತ್ತು ಎನ್ನಲಾಗಿದೆ. ಸದ್ಯ ಈ ವರದಿ ಈಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.