ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ರಾಜೀನಾಮೆಗೆ ಮುಂದಾಗಿಲ್ಲ. ಅವರಿಗೆ ನನ್ನ ಬೆಂಬಲವಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯರಾಗಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.

ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪದ ವಿಚಾರದ ಕುರಿತು ಮಾಧ್ಯಮಗಳ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ನಾನು ಸಿದ್ದರಾಮಯ್ಯ ಅವರ ಜೊತೆಯಾಗಿ ಇರುತ್ತೇನೆ. ರಾಜೀನಾಮೆಯ ಪ್ರಮೇಯವೇ ಉದ್ಭವಿಸುವುದಿಲ್ಲ. ಸಂಪೂರ್ಣವಾದ ನಂಬಿಕೆ ಮುಖ್ಯಮಂತ್ರಿ ಅವರ ಮೇಲಿದೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.
ಪ್ರಕರಣ ಏನಾಗಿತ್ತು..?
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಈಗಾಗಲೇ ನಾಯಕತ್ವ ಬದಲಾವಣೆಯ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದಲ್ಲಿ ಸಂಚಲನಕ್ಕೆ ಕಾರಣರಾಗಿದ್ದರು. ಈ ಹಿಂದೆಯೂ ಹಲವು ನಾಯಕರು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಪಕ್ಷದ ಹಿರಿಯ ಸಚಿವರ ವಿಚಾರದಲ್ಲಿ ಹಿಂದೆ ನಡೆದಿರುವ ಘಟನೆ ಈಗ ವರದಿಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಬಾಲಿವುಡ್ ನಟನ ಮೇಲೆ ಬೆಂಗಳೂರಲ್ಲಿ FIR
ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪ ಮಾಡಿರುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಸಚಿವನಾಗಿಯೇ ನನ್ನ ಮಾತಿಗೆ ಬೆಲೆ ಇಲ್ಲ ಎಂದರೆ ನಾನು ಸರ್ಕಾರದಲ್ಲಿ ಇರುವುದಿಲ್ಲ. ಆದರೆ ನಿಮ್ಮ ಜೊತೆ ಇರುತ್ತೇನೆ ಎಂದು ಜಾರ್ಜ್ ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದರು ಎನ್ನುವುದು ಮಾಧ್ಯಮಗಳ ವರದಿಯಾಗಿದೆ. ಅಲ್ಲದೆ ಯತೀಂದ್ರ ನಡೆಗೆ ಬೇಸತ್ತು ಜಾರ್ಜ್ ರಾಜೀನಾಮೆ ಪತ್ರವನ್ನು ಸಿಎಂಗೆ ನೀಡಿದ್ದರು ಎಂದು ವರದಿಯಾಗಿದೆ.

ಇನ್ನೂ ಇದೇ ವಿಚಾರಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಜಾರ್ಜ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಜಾರ್ಜ್ ಸಚಿವ ಸಂಪುಟ ಸಭೆಗೂ ಗೈರಾಗಿದ್ದರು. ಆದರೆ ಈ ವಿಚಾರ ತಿಳಿದ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜಾರ್ಜ್ ಮನವೊಲಿಸುವಲ್ಲಿ ಮುಂದಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ಎಲ್ಲರಲ್ಲೂ ಗೊಂದಲಕ್ಕೆ ಕಾರಣವಾಗಿದೆ.













