ನಗರಗಳೆಲ್ಲವೂ ಕಾಂಕ್ರೀಟ್ ಕಾಡುಗಳಾಗಿ ಪರಿವರ್ತನೆಗೊಂಡು ಹಸಿರೇ ಇಂದು ಕಣ್ಮರೆ ಆಗುತ್ತಿದೆ. ಆದರೆ ಹಚ್ಚ ಹಸಿರಿನ ಪ್ರವಾಸೀ ತಾಣ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಮಡಿಕೇರಿಯ ರಾಜಾಸೀಟಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವ ಆರೋಪಗಳು ಕೇಳಿ ಬಂದಿವೆ. ಪ್ರಕೃತಿ ರಮಣೀಯ ಹೆಸರುವಾಸಿ ಉದ್ಯಾನವನ ಇಂದು ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸುತ್ತಮುತ್ತಲ ಹಸಿರ ಬೆಟ್ಟ, ಗುಡ್ಡಗಳನ್ನು ಅಗೆದು ಕಾಂಕ್ರೀಟ್ ಮಯಗೊಳಿಸಲಾಗಿದೆ. ಈ ಪರಿಸರ ವಿರೋಧಿ ಕಾಮಗಾರಿಯಿಂದಾಗಿ ರಾಜಾಸೀಟ್ ಪ್ರದೇಶ ಮಂಗಳೂರು ರಸ್ತೆಗೆ ಕುಸಿಯುವ ಎಲ್ಲಾ ಸಾಧ್ಯತೆಗಳಿದ್ದು, ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೀರನಾಡು ರಕ್ಷಣಾ ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ ವೇದಿಕೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಪ್ರಕೃತಿಗೆ ವಿರುದ್ಧವಾಗಿ ಗುಡ್ಡವನ್ನು ಅಗೆದು ಹಾಕಿರುವುದರಿಂದ ಮತ್ತು ಕಾಂಕ್ರೀಟ್ ಕಾಮಗಾರಿ ನಡೆಸಿರುವುದರಿಂದ ಮಹಾಮಳೆಯ ಸಂದರ್ಭ ಕುಸಿಯುವುದು ಖಚಿತವೆಂದು ಅಭಿಪ್ರಾಯಪಟ್ಟಿದ್ದಾರೆ.
ಭಾಗಮಂಡಲದ ಗಜಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ತೆಗೆದು ದೊಡ್ಡ ಅನಾಹುತವೇ ನಡೆದು ಹೋಯಿತು. ಇದೀಗ ರಾಜಾಸೀಟ್ನಲ್ಲಿ ಇಂತಹದ್ದೇ ಅಪಾಯವನ್ನು ಆಹ್ವಾನಿಸುವ ಕಾರ್ಯ ನಡೆದಿದೆ. ಮಂಗಳೂರು ರಸ್ತೆಗೆ ಗುಡ್ಡ ಕುಸಿದರೆ ಕೆಳ ಭಾಗದಲ್ಲಿರುವ ಮನೆಗಳಿಗೆ ಹಾನಿಯಾಗುವುದಲ್ಲದೆ, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಗಳಿದೆ.

ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದೆ. ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ಆರೋಪಿಸಿದ್ದಾರೆ. ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚು. ಪರಿಸ್ಥಿತಿ ಹೀಗಿದ್ದರೂ ಈ ಕಾಮಗಾರಿಗಳನ್ನು ಕೈಗೊಳ್ಳಲು ಭೂವಿಜ್ಞಾನಿಗಳು ಅನುಮತಿ ನೀಡಿದ್ದಾರೆಯೇ ಎಂದು ಹರೀಶ್ ಜಿ.ಆಚಾರ್ಯ ಪ್ರಶ್ನಿಸಿದ್ದಾರೆ.

ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದು ಖಂಡನೀಯ. ರಾಜಾಸೀಟ್ನಲ್ಲಿ ನಡೆದಿರುವ ಕಾಂಕ್ರಿಟ್ ಕಾಮಗಾರಿಯಿಂದ ಅನಾಹುತ ಸಂಭವಿಸಿದರೆ ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಮೌನಕ್ಕೆ ಶರಣಾಗಿರುವ ಸ್ಥಳೀಯ ಜನಪ್ರತಿನಿಧಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಬೆಟ್ಟ, ಗುಡ್ಡಗಳಲ್ಲಿ ಕಾಂಕ್ರೀಟ್ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಆದೇಶಿಸಿದ್ದರು. ಆದರೆ ಇಂದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದುರುದ್ದೇಶದ ಕಾಮಗಾರಿಗಳು ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಈ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿದೆಯೇ ಎನ್ನುವ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


ಈ ಹಿಂದೆ ಮೂರು ವರ್ಷ ಮಳೆಗಾಲದಲ್ಲಿ ಕೊಡಗಿನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಜನರು ಮನೆ ಮಠ ಅಸ್ತಿ ಪಾಸ್ತಿ ಕಳೆದುಕೊಂಡಿದ್ದರು. ರಾಜ್ಯ ಸರ್ಕಾರವು ಭೂಕುಸಿತ ಕಾರಣ ಕಂಡು ಹಿಡಿಯಲು ನೇಮಿಸಿದ್ದ ತಜ್ಞರ ಸಮಿತಿಯು ಕೊಡಗಿನ ಬೆಟ್ಟ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಸಮತಟ್ಟು ಮಾಡಿ ಕಟ್ಟಡಗಳನ್ನು ಕಟ್ಟಿರುವುದೇ ಭೂಕುಸಿತಕ್ಕೆ ಕಾರಣ ಎಂದು ವರದಿ ನೀಡಿತ್ತು. ಅಲ್ಲೆ ಕೊಡಗಿನಲ್ಲಿ ಇನ್ನು ಮುಂದೆ ಬೆಟ್ಟ ಗುಡ್ಡಗಳಲ್ಲಿ ಕಾಮಗಾರಿ ಕೈಗೊಳ್ಳಲು ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ನಿಯಮವನ್ನೂ ಬಿಗಿಗೊಳಿಸಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ಅನುಮತಿ ನೀಡಿದರೆ ಮಾತ್ರ ಭೂ ಪರಿವರ್ತನೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಬಿಗಿಗೊಳಿಸಿರುವ ಈ ನಿಯಮವನ್ನೇ ಉಲ್ಲಂಘಿಸಿ ಸರ್ಕಾರವೇ ಕಾಮಗಾರಿ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತಿದ್ದಾರೆ.











