ಕೇಂದ್ರ ಬಜೆಟ್ ಮಂಡನೆಗೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದೆ. ಸಭೆಯಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆಯಾಗದೆ ಎಂಬುವುದರ ಕುರಿತು ಕೇಂದ್ರ ಸಂಸತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಪ್ರಧಾನಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಲೋಕಸಭೆಯಲ್ಲಿ ಮಂಡನೆಯಾಗುವ ಮಸೂದೆ, ನೂತನ ಕೃಷಿ ಕಾಯ್ದೆಗಳು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲು ಅವಕಾಶ ನೀಡುವಂತೆ ವಿಪಕ್ಷಗಳು ಕೇಳಿಕೊಂಡಿದ್ದವು, ಅದಕ್ಕೆ ಸರ್ಕಾರ ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ ರೈತ ಸಂಘಟನೆ ಜತೆ ಕೇಂದ್ರ ಕೃಷಿ ಸಚಿವರು ಚರ್ಚೆ ನಡೆಸಿದ್ದು, ಹೊಸ ಕಾಯ್ದೆಗಳನ್ನು ಅಮಾನತಿನಲ್ಲಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಸರ್ಕಾರ ಈ ಪ್ರಸ್ತಾಪಕ್ಕೆ ಈಗಲೂ ಬದ್ಧವಾಗಿದ್ದು, ರೈತ ಸಂಘಟನೆಗಳ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
“ಸರ್ವಪಕ್ಷ ಸಭೆಯಲ್ಲಿ ನರೇಂದ್ರ ಮೋದಿ ಅವರು ಭಾರತ ಸರ್ಕಾರ ರೈತರ ಸಮಸ್ಯೆಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಕೃಷಿ ಸಚಿವರ ಪ್ರಸ್ತಾಪವೇ (ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವ ಪ್ರಸ್ತಾಪ) ಸರ್ಕಾರದ ಸದ್ಯದ ನಿಲುವು ಆಗಿದೆ ಎಂದು ಪ್ರಧಾನಿ ಹೇಳಿದ್ದಾರೆ ” ಎಂದು ಜೋಶಿ ತಿಳಿಸಿದ್ದಾರೆ.
ರೈತ ಪ್ರತಿಭಟನೆಗಳ ಸಮಗ್ರ ಚರ್ಚೆಗೆ ಪ್ರತಿಪಕ್ಷಗಳ ಆಗ್ರಹ
ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಬೃಹತ್ ರೈತ ಪ್ರತಿಭಟನೆಗಳ ಕುರಿತಂತೆ ಸಂಸತ್ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಪ್ರತಿಪಕ್ಷಗಳು ಸರ್ವ ಪಕ್ಷ ಸಭೆಯಲ್ಲಿ ಆಗ್ರಹಿಸಿವೆ.
ಪ್ರತಿಪಕ್ಷಗಳ ಬೇಡಿಕೆಗೆ ಒಪ್ಪಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಂಬಂಧಿತ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ದವಿದೆ, ವಿಪಕ್ಷಗಳು ಸಹಕಾರ ನೀಡಬೇಕು. ಸುಗಮ ಕಲಾಪಕ್ಕೆ ಅವಕಾಶ ಕೊಡಬೇಕು ಎಂದು ವಿನಂತಿಸಿದ್ದಾರೆ.
ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ತೃಣಮೂಲ ಕಾಂಗ್ರೆಸ್‌ನ ಸದೀಪ್ ಬಂಡೋಪಾಧ್ಯಾಯ, ಆಮ್ ಆದ್ಮಿ ಪಕ್ಷದ ಭಗವಂತ್ ಮನ್, ಶಿವಸೇನೆಯ ವಿನಾಯಕ್ ರಾವತ್ ಸೇರಿದಂತೆ ಹಲವು ನಾಯಕರು ಸರ್ವ ಪಕ್ಷ ಸಭೆಯಲ್ಲಿ ರೈತ ಹೋರಾಟದ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದ್ದು, ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಬೇಕು, ರೈತರನ್ನು ಶತ್ರುಗಳಂತೆ ನೋಡಬಾರದು ಎಂದು ಆಗ್ರಹಿಸಿರುವುದಾಗಿ ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷವು ಈಗಾಗಲೇ ರೈತ ಹೋರಾಟದ ಕುರಿತಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಸರ್ಕಾರ ಈಗಲೂ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಾಗುವ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಜನವರಿ 26 ರಂದು ನಡೆದ ಹಿಂಸಾಚಾರವನ್ನು ವಿರೋಧ ಪಕ್ಷಗಳು ಖಂಡಿಸಿದ್ದು, “ಹೊರಗಿನ ವ್ಯಕ್ತಿಗಳು” ರೈತರ ಆಂದೋಲನಕ್ಕೆ ಹೇಗೆ ನುಸುಳಿದರು ಎಂಬ ಬಗ್ಗೆ ತನಿಖೆಗೆ ಒತ್ತಾಯಿಸಿವೆ. ಟ್ರಾಕ್ಟರ್ ಪರೇಡ್ ವೇಳೆ ಉಂಟಾದ ಘರ್ಷಣೆಗೆ ʼಸಮಾಜಘಾತುಕʼ ಶಕ್ತಿಗಳು ರೈತರ ಸೋಗಿನಲ್ಲಿ ಪ್ರತಿಭಟನಾಕಾರರನ್ನು ಸೇರಿಕೊಂಡಿರುವುದು ಕಾರಣ ಎಂದು ರೈತ ಮುಖಂಡರು ಈ ಹಿಂದೆ ಆರೋಪಿಸಿದ್ದರು.