ಹಾವೇರಿ ಜಿಲ್ಲೆಯ ಹೊರ ವಲಯದಲ್ಲಿರುವ ಆಲದಕಟ್ಟಿ ಬಳಿಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳವಾರ (ಆಗಸ್ಟ್ 29) ಸಂಜೆ ನಡೆದಿದೆ.
ಮೃತರನ್ನು ಕಾಟೇನಹಳ್ಳಿ ಗ್ರಾಮದ ದ್ಯಾಮಪ್ಪ ಓಲೇಕಾರ (44), ರಮೇಶ ಬಾರ್ಕಿ (28), ಶಿವಲಿಂಗ ಅಕ್ಕಿ (27) ಮತ್ತು ಜಯಣ್ಣ (45) ಎಂದು ಗುರುತಿಸಲಾಗಿದೆ. ಸುಮಾರು 1 ಕೋಟಿ ರೂಪಾಯಿ ನಷ್ಟವಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ತಗ್ಗಿನಕೆರೆ ನಿವಾಸಿ ವಾಸಿಂ ಶಫಿ ಅಹ್ಮದ್ ಹಾಗೂ ಶೇರು ಮಾಳಪ್ಪ ಕಟ್ಟಿಮನಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗೋದಾಮಿನ ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ವಾಸಿಂ ಅಹಮದ್ ಅವರ ಬೆನ್ನು ಮೂಳೆ ಮುರಿದಿದೆ.
ಹಾವೇರಿ ವೀರೇಶ ಸಾತೇನಹಳ್ಳಿ ಮಾಲೀಕತ್ವದ ಭೂಮಿಕಾ ಪಟಾಕಿ ಡಿಸ್ಟ್ರಿಬ್ಯೂಟರ್ಸ್ಗೆ ಸೇರಿದ ಗೋದಾಮಿನಲ್ಲಿ ಗಣಪತಿ ಹಬ್ಬ ಮತ್ತು ದೀಪಾವಳಿಗಾಗಿ ಪಟಾಕಿ ದಾಸ್ತಾನು ಮಾಡಲಾಗಿತ್ತು. ಮಂಗಳವಾರ ಸಂಜೆ ವೇಳೆಗೆ ಪಟಾಕಿ ಇಟ್ಟಿದ್ದ ಕಟ್ಟಡದ ಬಳಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ತಗುಲಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ. ಘಟನೆಯಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸತತ ಐದು ಗಂಟೆ ಕಾರ್ಯಾಚರಣೆ
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದಾದರೂ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಇತ್ತು. ಪಟಾಕಿ ಒಂದರ ಮೇಲೊಂದು ಸಿಡಿಯುತ್ತಲೇ ಇದ್ದವು. ದಟ್ಟ ಹೊಗೆ ಆವರಿಸಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿತ್ತು. ಆದರೂ ಆರು ಅಗ್ನಿಶಾಮಕ ವಾಹನಗಳು ಮತ್ತು 25 ಸಿಬ್ಬಂದಿ ಸತತವಾಗಿ ಐದು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಗೋದಾಮಿನಲ್ಲಿದ್ದ ಪಟಾಕಿಯ ಜತೆ ಮೂವರು ಕಾರ್ಮಿಕರೂ ಸುಟ್ಟು ಕರಕಲಾಗಿದ್ದರು.
ಪ್ರಾಣಭಯದಿಂದ ಓಡಿ ಜನ
ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಟಾಕಿಗಳು ಸಿಡಿದು ಭಾರೀ ಪ್ರಮಾಣದಲ್ಲಿ ದಟ್ಟ ಹೊಗೆ ಉಂಟಾಗಿತ್ತು. ಗೋದಾಮಿನ ಸಮೀಪದ ಮನೆಯ ನಿವಾಸಿ ಕಲಾವತಿ ಎಂಬುವವರು ವಾತಾವರಣದಲ್ಲಿ ಹರಡಿದ ಹೊಗೆಯಿಂದ ಅಸ್ವಸ್ಥರಾಗಿದ್ದರು. ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೊಗೆಯಿಂದ ನೆರೆಹೊರೆಯವರು ಮತ್ತು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಜನರು ಪ್ರಾಣಭಯದಿಂದ ಪಾರಾಗಲು ಓಡಿ ಹೋಗುತ್ತಿರುವುದು ಕಂಡು ಬಂತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಬೆಂಗಳೂರಿನಿಂದ ಹಾವೇರಿಗೆ ಧಾವಿಸಿದರು. ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್, ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಹಾವೇರಿಯ ಆಲದಕಟ್ಟಿಯಲ್ಲಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಗ್ಗೆ ಹೆಚ್ಚಿನ ವರದಿ ತರಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಇಂತಹ ದುರ್ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಿದ್ದೇನೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದ್ದು, ಮೃತರ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.