ಉತ್ತರಾಖಂಡದ ರೂರ್ಕಿಯಲ್ಲಿ ಬುಧವಾರ ನಡೆಯಲಿರುವ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳಬೇಕು ಮತ್ತು ಆ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಮೊದಲು ಧರ್ಮ ಸಂಸದ್ ಕಾರ್ಯಕ್ರವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ವಿಚಾರಣೆಯನ್ನು ಕೈಗೆತ್ತಿಕೊಂಡ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠವು ಉತ್ತರಾಖಂಡ ಸರ್ಕಾರ ನೀಡಿದ ಭರವಸೆಯನ್ನು ಗಮನಿಸಿತ್ತು. ಯಾವುದೇ ಅಹಿತಕರ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳಲಾಗುವುದು ಒಂದು ವೇಳೆ ನೀಡದ್ದರೆ ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಅಗತ್ಯವಾಗಿ ಪಾಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಅಗತ್ಯವಾಗಿ ಪಾಲಿಸಬೇಕು ಮತ್ತು ಇದರ ವರದಿಯನ್ನು ಕಾರ್ಯಕ್ರಮ ಮುಗಿದ ಮೇಲೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಎ.ಎಂ.ಖಾನ್ವಿಲ್ಕರ್, ಎಸ್ ಓಕಾ ಹಾಗೂ ಸಿಟಿ ರವಿಕುಮಾರ್ ಇದ್ದ ತ್ರಿಸದಸ್ಯ ಪೀಠ ಆದೇಶಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗಿತ್ತು ಮತ್ತು ಈ ಕುರಿತು ಹಲವು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು.