2022 ರ ಪಂಜಾಬ್ ವಿಧಾನಸಭಾ ಚುನಾವಣಾ ಹಿನ್ನೆಲೆ, ಶಿರೋಮಣಿ ಅಕಾಲಿ ದಳ (SAD) ಮತ್ತು ಬಹುಜನ ಸಮಾಜ ಪಕ್ಷ (BSP) ಶನಿವಾರ ಮೈತ್ರಿ ಮಾಡಿಕೊಂಡಿವೆ.
ಶಿರೋಮಣಿ ಅಕಾಲಿ ದಳ (SAD) ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಬಹುಜನ ಸಮಾಜ ಪಕ್ಷದ (BSP) ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಪತ್ರಿಕಾ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. 2022 ಪಂಜಾಬ್ ವಿಧಾನಸಭಾ ಚುನಾವಣೆ ಹಾಗು ಇತರೆ ಚುನಾವಣೆಯಲ್ಲಿ ಎರಡು ಪಕ್ಷ ಜಂಟಿಯಾಗಿ ಹೋರಾಡಲಿವೆ ಎಂದಿದ್ದಾರೆ.

ಒಟ್ಟು 177 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಅಕಾಲಿ ದಳ ಸ್ಪರ್ಧಿಸಲಿದೆ ಎನ್ನಲಾಗಿದೆ.
ʼಇಂದಿನಿಂದ ಪಂಜಾಬ್ ರಾಜಕೀಯದಲ್ಲಿ ಹೊಸ ದಿನಗಳು ಆರಂಭವಾಗಲಿವೆʼ ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಬಹುಜನ ಸಮಾಜ ಪಕ್ಷ (BSP) ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರು ಇಂದೊಂದು ಐತಿಹಾಸಿಕ ದಿನವಾಗಿದೆ. ಪಂಜಾಬ್ ರಾಜ್ಯ ರಾಜಕೀಯದಲ್ಲಿ ದೊಡ್ಡ ತಿರುವೊಂದನ್ನು ಪಡೆದುಕೊಂಡಿದೆ ಎಂದಿದ್ದಾರೆ.
2022 ರ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (BSP) ಜಲಂಧರ್, ಜಲಂಧರ್-ಪಶ್ಚಿಮ, ಜಲಂಧರ್-ಉತ್ತರ, ಫಾಗ್ವಾರಾ, ಹೋಶಿಯಾರ್ಪುರ್ ಅರ್ಬನ್, ದಾಸುಯಾ, ರುಪ್‌ನಗರ ಜಿಲ್ಲೆಯ ಚಮಕೌರ್ ಸಾಹಿಬ್, ಬಸ್ಸಿ ಪಥಾನಾ, ಪಠಾಣ್‌ಕೋಟ್‌ನ ಸುಜನ್‌ಪುರ, ಮೊಹಾಲಿ, ಅಮೃತಸರ ಉತ್ತರ ಮತ್ತು ಅಮೃತಸರ ಕೇಂದ್ರದಲ್ಲಿ ಸ್ಪರ್ಧಿಸಲಿದೆ.
ಕಳೆದ ವರ್ಷ ಕೇಂದ್ರದ ಬಿಜೆಪಿ ಸರ್ಕಾರ ವಿವಾದಾತ್ಮಕ ಕೃಷಿ ಮಸೂದೆ ಜಾರಿಗೆ ತಂದ ನಂತರ ರಾಜ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿತ್ತು. ಇದೀಗ 1996ರ ಲೋಕಸಭಾ ಚುನಾವಣೆಯ 27 ವರ್ಷಗಳ ನಂತರ ಅಕಾಲಿ ದಳ ಮತ್ತು ಬಹುಜನ ಸಮಾಜ ಪಕ್ಷ ಮತ್ತೆ ಕೈಜೋಡಿಸಿವೆ.