ಇಂದು ಎಲ್ಲರ ಬಳಿಯಲ್ಲಿ ಮೊಬೈಲ್ ಇದ್ದರೂ ಗೋಡೆ ಗಡಿಯಾರ ಬಹುತೇಕ ಪ್ರತಿಯೊಂದು ಮನೆಯಲ್ಲೂ ಇದೆ. ಇದು ಇಂದು ಮನೆಯ ಅವಿಭಾಜ್ಯ ಅಂಗವೇ. ಅದರಲ್ಲೂ ಅಜಂತಾ ಗೋಡೆ ಗಡಿಯಾರಗಳು ಮನೆ ಮಾತಾಗಿವೆ. ಈ ಅಜಂತಾ ಗಡಿಯಾರ ಕಂಪೆನಿ ಇಂದು ವಿಶ್ವದ ಅತ್ಯಂತ ದೊಡ್ಡ ಗಡಿಯಾರ ಕಂಪೆನಿಯಾಗಿ ಹೊರಹೊಮ್ಮಿದೆ. 1971 ರಲ್ಲಿ ಒಧವಿಜ್ಭಾಯ್ ಆರ್ ಪಟೇಲ್ ಎಂಬುವವರು ಸ್ಥಾಪಿಸಿದ ಈ ಕಂಪೆನಿ 50 ವರ್ಷಗಳನ್ನು ಮುಗಿಸಿದ್ದು ದೇಶದ ಜನಪ್ರಿಯ ಬ್ರಾಂಡ್ ಆಗಿದೆ. ಇಂದು ಜಾಗತೀಕರಣದ ಕಾರಣದಿಂದ ವಿದೇಶೀ ಬ್ರಾಂಡ್ ಗಡಿಯಾರಗಳೂ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ರತಿಷ್ಟಿತ ಕಂಪೆನಿಗಳಾದ ಟ್ಯಾಗ್ ಹೂಯರ್, ರ್ಯಾಂಡಮ್ , ಸೀಕೊ ಇದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಅಜಂತಾ ಹೆಸರು ಅಜರಾಮರ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಜಂತಾ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ವಾಯುಮಾಲಿನ್ಯ ಸೂಚ್ಯಂಕ ಗಡಿಯಾರವು ವಾಯು ಗುಣಮಟ್ಟದ ಸೂಚ್ಯಂಕವನ್ನು ಸಹ ಪ್ರದರ್ಶಿಸುತ್ತದೆ. ಭಾರತ ಮತ್ತು ವಿದೇಶಗಳಲ್ಲಿನ ಮಾಲಿನ್ಯದ ಮಟ್ಟದಲ್ಲಿನ ಕಳವಳವನ್ನು ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗಿದೆ. ಒಧವ್ಜಿಭಾಯ್ ಆರ್. ಪಟೇಲ್ ಅವರು ಮೊದಲು 50 ವರ್ಷಗಳ ಹಿಂದೆ ಕೇವಲ 1 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ಕಂಪನಿಯನ್ನು ಪ್ರಾರಂಭಿಸಿದರು. ಅಂದಿನಿಂದ ಕಂಪೆನಿ ಶರವೇಗದಲ್ಲಿ ಮುನ್ನಡೆಯುತ್ತಾ ಸಾಗಿದೆ. ಭಾರತದಲ್ಲಿ ಹ್ಯಾಂಡ್ ಬ್ಲೆಂಡರ್ಗಳು, ರೂಮ್ ಹೀಟರ್ಗಳು ಮತ್ತು ಕ್ಯಾಲ್ಕುಲೇಟರ್ಗಳ ಅತಿದೊಡ್ಡ ಉತ್ಪಾದಕರೂ ಆಗಿರುವ ಅಜಂತಾ ಆರ್ಪಾಟ್ ಸಮೂಹ 2019 ರಲ್ಲಿ 1,200 ಕೋಟಿ ರೂ.ವಹಿವಾಟು ನಡೆಸಿದೆ. 1975 ರಲ್ಲಿ ಜಪಾನ್ಗೆ ಭೇಟಿ ನೀಡಿದ ನಂತರ ಒಧವ್ಜಿಭಾಯ್ ಮತ್ತು ಅವರ ಮಗ ಪ್ರವೀನ್ಭಾಯ್ ಪಟೇಲ್ ಅವರು ಕ್ವಾರ್ಟ್ಜ್ ತಂತ್ರಜ್ಞಾನವನ್ನು ಭಾರತಕ್ಕೆ ತಂದ ಮೊದಲ ವ್ಯಕ್ತಿಗಳಾಗಿದ್ದಾರೆ. ಕಂಪೆನಿಯು 1985 ರಲ್ಲಿ ಮಾರುಕಟ್ಟೆಗೆ ಜನತಾ ಎಂಬ ಕ್ವಾರ್ಟ್ಜ್ ಗಡಿಯಾರಗಳನ್ನು ಪರಿಚಯಿಸಿತು. ಇದು ಅಪಾರ ಜನಪ್ರಿಯತೆ ಗಳಿಸಿತು.
ಕೆಲವು ವರ್ಷಗಳ ನಂತರ, 1996 ರಲ್ಲಿ ಅಜಂತಾ ಕಂಪೆನಿ ಆರ್ಪಾಟ್ ಎಂಬ ಮತ್ತೊಂದು ಅಂಗಸಂಸ್ಥೆಯನ್ನು ಪರಿಚಯಿಸಿತು. ಇದು ಮತ್ತು ದೂರವಾಣಿಗಳು ಮತ್ತು ಕ್ಯಾಲ್ಕುಲೇಟರ್ಗಳ ಉತ್ಪಾದನೆ ಆರಂಬಿಸಿತು. ಶೀಘ್ರದಲ್ಲೇ, ಒಧವ್ಜಿಭಾಯ್ ಪಟೇಲ್ ಅವರ ಹೆಸರಿನಿಂದ ಆರ್ಪಾಟ್ ಕೂಡ ಜನಪ್ರಿಯ ಬ್ರಾಂಡ್ ಆಗಿದ್ದು ವಿಭಿನ್ನ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿತು. 2021 ರಲ್ಲಿ , ಕಂಪನಿಯು ಸುಮಾರು 450 ಡಿಪೋಗಳನ್ನು ಮತ್ತು 5,000 ಚಿಲ್ಲರೆ ವ್ಯಾಪಾರಿಗಳ ಸಮೂಹವನ್ನೆ ಹೊಂದಿದೆ ಮತ್ತು ಜಗತ್ತಿನಾದ್ಯಂತ 45 ಇತರ ದೇಶಗಳಿಗೆ ಗಡಿಯಾರಗಳನ್ನು ರಫ್ತು ಮಾಡುತ್ತಿದೆ. ಈಗ ಪಟೇಲ್ ಕುಟುಂಬದ ಮೂರನೇ ತಲೆಮಾರಿನ ಸದಸ್ಯ ಮತ್ತು ಅಮೇರಿಕಾದ ಎಂಜಿನಿಯರಿಂಗ್ ಪದವೀಧರರಾದ ನೆವಿಲ್ ಪಟೇಲ್ ಅವರ ನೇತೃತ್ವದಲ್ಲಿ, ಅಜಂತಾ-ಆರ್ಪಾಟ್ ಸಮೂಹ ಮುನ್ನಡೆಯುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದ ಸಮಯದಲ್ಲಿ, ಒಬ್ಬ ಉದ್ಯೋಗಿಯನ್ನು ಸಹ ಕೆಲಸದಿಂದ ತೆಗೆಯಲಿಲ್ಲ ಎಂದು ನೆವಿಲ್ ಪಟೇಲ್ ಹೇಳಿದರು. ನಾವು ಮೆಟ್ರೊ ನಗರಗಳಿಗಿಂತ ಬೇಗನೆ ಕೆಲಸವನ್ನು ಪುನರಾರಂಭಿಸಿದ್ದೇವೆ ಏಕೆಂದರೆ ನಮ್ಮದು ಶೇಕಡಾ 30 ರಷ್ಟು ಉದ್ಯೋಗಿಗಳನ್ನು ಹೊಂದಿರುವ ಹಸಿರು ವಲಯದಲ್ಲಿರುವ ಕಂಪೆನಿ ಆಗಿದ್ದು ಎಲ್ಲಾ ಸಾಮಾಜಿಕ ಸಂಪರ್ಕ ತಡೆಯನ್ನೂ ಕಾಯ್ದುಕೊಂಡು ಕೆಲಸ ಮಾಡಿದ್ದೇವೆ. ಲಾಕ್ಡೌನ್ ಅವಧಿಯಲ್ಲಿ ನಾವು ಯಾವುದೇ ವೇತನ ಕಡಿತವನ್ನು ಮಾಡಿಲ್ಲ ಎಂದು ನೆವಿಲ್ ತಿಳಿಸಿದರು.ಕಂಪನಿಯ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೆಂದರೆ ಅದು ಹೊಂದಿರುವ ಮಹಿಳಾ ಉದ್ಯೋಗಿಗಳ ಸಂಖ್ಯೆ ಆಗಿದೆ. 1980 ರ ದಶಕದಲ್ಲಿ, ನೆವಿಲ್ ಅವರ ತಂದೆ ಪ್ರವೀಣ್ ಭಾಯ್ ಪಟೇಲ್ ಅವರು ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಎದುರಿಸುತಿದ್ದರು. ಏಕೆಂದರೆ ಸೌರಾಷ್ಟ್ರದ ಪುರುಷರು ಕೃಷಿಯಲ್ಲಿ ನಿರತರಾಗಿದ್ದರು ಮತ್ತು ಇತರರು ದಕ್ಷಿಣ ಗುಜರಾತ್ಗೆ ವಲಸೆ ಬಂದು ಉತ್ತಮ ಸಂಬಳ ನೀಡುವ ವಜ್ರಕ್ಕೆ ಹೊಳಪು ನೀಡುವ ಉದ್ಯಮ ಕೆಲಸ ಮಾಡುತಿದ್ದರು. ಇದರಿಂದ ಪ್ರವೀಣ್ ಆವರು ಮಹಿಳೆಯರನ್ನೆ ಕಂಪೆನಿಗೆ ನೇಮಕಾತಿ ಮಾಡಿಕೊಂಡರು. ಇಂದು ಕಂಪೆನಿಯ ಒಟ್ಟು 5000 ಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಮಹಿಳಾ ಕೆಲಸಗಾರರ ಸಂಖ್ಯೆ ಶೇಕಡಾ 95 ಕ್ಕೂ ಹೆಚ್ಚಿದೆ.
ಮೊದ ಮೊದಲು ಮಹಿಳೆಯರನ್ನು ಕಾರ್ಖಾನೆ ಕೆಲಸಕ್ಕೆ ಕಳುಹಿಸಲು ಕುಟುಂಬಗಳು ಹಿಂದೇಟು ಹಾಕಿದವು. ನಂತರ ಪ್ರವೀಣ್ ಭಾಯ್ ಮತ್ತು ಅವರ ಪತ್ನಿ ವನಿತಾ ಬೆನ್ ಗ್ರಾಮದ ಮುಖಂಡರು ಮತ್ತು ಕುಟುಂಬಗಳನ್ನು ತಮ್ಮ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತೆ ಮನವೊಲಿಸಲು ಹತ್ತಿರದ ಹಳ್ಳಿಗಳಿಗೆ ತೆರಳುತಿದ್ದರು. ಗುಜರಾತಿನ ಮೊರ್ಬಿ ನಗರದ ಮೊದಲ ಮಹಿಳಾ ಉದ್ಯೋಗಿ ವನಿತಾಬೆನ್ ಕಂಪನಿಗೆ ಸೇರಿದ ನಂತರ, ಪಟಾರಿ, ತಂಕರ, ಮಾಲಿಯಾ, ಧ್ರೋಲ್ ಮತ್ತು ಮೊರ್ಬಿಯಂತಹ 450-500 ಜನರಿರುವ ಸುತ್ತಮುತ್ತಲಿನ ಹಳ್ಳಿಗಳಿಂದ ಮಹಿಳೆಯರು ಮತ್ತು ಅವರ ಕುಟುಂಬಗಳನ್ನು ಮನವೊಲಿಸುವಲ್ಲಿ ಪಟೇಲ್ ಯಶಸ್ವಿಯಾದರು. ಈ ಎಲ್ಲ ಉದ್ಯೋಗಿಗಳಿಗೆ ಕಂಪನಿಯು ಬಸ್ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ. ಮಹಿಳೆಯರು ಶಿಸ್ತು, ಸಮಯ ಪಾಲನೆಗೆ ಒತ್ತು ನೀಡುತ್ತಾರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದರಿಂದ ಅವರ ಕುಟುಂಬಗಳಿಗೆ ಆರ್ಥಿಕ ಬೆಂಬಲವೂ ದೊರೆಯಿತು. ಇದರಿಂದಾಗಿ ಹಳ್ಳಿಗಳೂ ಅಭಿವೃದ್ದಿ ಆಗಿವೆ ಎಂದು ಒಧವ್ಜಿ ಪಟೇಲ್ ಹೇಳುತ್ತಾರೆ.
ಒಧವಿಜ್ಭಾಯ್ ಆರ್ ಪಟೇಲ್
ನೆವಿಲ್ ಪ್ರಕಾರ, ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಮಹಿಳಾ ಉದ್ಯೋಗಿಗಳಿಲ್ಲದೆ ಕಂಪನಿಯು ಇಂದು ತನ್ನ ಸ್ಥಾನವನ್ನು ತಲುಪುತ್ತಿರಲಿಲ್ಲ. ನನ್ನ ತಾಯಿಯಿಂದ ಹಿಡಿದು ಈಗ ನಮ್ಮಲ್ಲಿರುವ ಪ್ರತಿಯೊಬ್ಬ ಮಹಿಳಾ ಉದ್ಯೋಗಿಗಳೂ ಕಂಪನಿಯ ಬೆನ್ನೆಲುಬು ಎಂದು ಅವರು ಹೇಳಿದರು. ನನ್ನ ಅಜ್ಜ ಮತ್ತು ತಂದೆ ಮಹಿಳೆಯರನ್ನು ಕಂಪನಿಗೆ ನೇಮಕ ಮಾಡಿಕೊಳ್ಳಲು ಹೊರಟಾಗ ಕಠಿಣ ಪರಿಸ್ಥಿತಿ ಇತ್ತು. ಏಕೆಂದರೆ 80 ರ ದಶಕದಲ್ಲಿ, ಮಹಿಳೆಯರು ದೊಡ್ಡ ಮೆಟ್ರೋ ನಗರಗಳಲ್ಲಿಯೂ ಸಹ ಕೆಲಸ ಮಾಡಲು ಹಿಂಜರಿಯುತಿದ್ದರು. ನಮ್ಮ ಕಂಪೆನಿಯು ಒಂದು ಸಣ್ಣ ನಗರದಲ್ಲಿದ್ದುದರಿಂದ ಮಹಿಳೆಯರ ನೇಮಕಾತಿಗೆ ಭಾರೀ ಕಷ್ಟ ಪಡಬೇಕಾಯ್ತು ಎಂದು ವ್ಯವಸ್ಥಾಪಕ ನಿರ್ದೇಶಕ ನೆವಿಲ್ ಹೇಳಿದರು.