ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಯಾವುದೇ ಯೋಚನೆ ಇಲ್ಲ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ನಗರದಲ್ಲಿ ಕೆಟ್ಟ ವಾಯು ಮಾಲಿನ್ಯದಿಂದಾಗಿ ಮುಂದಿನ ಆದೇಶದವರೆಗೆ ರಾಷ್ಟ್ರ ರಾಜಧಾನಿಯ ಶಾಲೆಗಳಲ್ಲಿ ದೈಹಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ದೆಹಲಿ ಸರ್ಕಾರ ಭಾನುವಾರ ಹೇಳಿಕೆ ನೀಡಿದ್ದು, ಆನ್ಲೈನ್ ತರಗತಿಗಳು ಮಾತ್ರ ಮುಂದುವರಿಯಲಿವೆ ಎಂದು ಶಿಕ್ಷಣ ನಿರ್ದೇಶನಾಲಯ ಆದೇಶದಲ್ಲಿ ತಿಳಿಸಿದೆ.
ಕಳೆದ ನವೆಂಬರ್ 13 ರಂದು, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ದೆಹಲಿ ಸರ್ಕಾರವು ಶಾಲೆಗಳನ್ನು ಮುಚ್ಚಿತ್ತು. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಆಯೋಗದ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದೆ.
ಭಾನುವಾರದಂದು ನಡೆದ ಸಭೆಯಲ್ಲಿ ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯು ಮುಂದಿನ ಸೂಚನೆಯವರೆಗೆ ಶಾಲೆಗಳನ್ನು ತೆರೆಯದಿರಲು ಹೊಸ ಆದೇಶವನ್ನು ಹೊರಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ವರದಿಯ ಪ್ರಕಾರ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು ಸಂಜೆ 4 ಗಂಟೆಗೆ 352 ರಷ್ಟಿದೆ ಎಂದು ತಿಳಿಸಿದೆ.

ತೀರ ಕಳಪೆ ಮಟ್ಟ ತಲುಪಿದ ದೆಹಲಿ!
ಈ ವಾಯು ಗುಣಮಟ್ಟದ ಸೂಚ್ಯಂಕವು 50 ರ ಒಳಗಿದ್ದರೆ ಉತ್ತಮವಾಗಿದೆ. 51 ರಿಂದ 100ರವರೆಗಿದ್ದರೆ ತೃಪ್ತಿದಾಯಕ. 101 ರಿಂದ 200 ರವರೆಗಿದ್ದರೆ ಮಧ್ಯಮ. 201 ರಿಂದ 300 ರವರೆಗೆ ಕಳಪೆ, 301 ರಿಂದ 400 ರವರೆಗೆ ತೀರ ಕಳಪೆಮಟ್ಟ. 401 ರಿಂದ 500 ರವರೆಗೆ ವಾಯು ಗುಣಮಟ್ಟ ಕಂಡುಬಂದರೆ ವಾಯುಗುಣಮಟ್ಟದಲ್ಲಿ ತೀವ್ರ ತರಹದ ಮಾಲಿನ್ಯವಾಗಿದೆ ಎಂದು ಸಂಶೋಧನೆಯಲ್ಲಿ ತಿಳಿದುಬರುತ್ತದೆ.
ಈ ಮಧ್ಯೆ ಮಾಲಿನ್ಯ ತಡೆಗಟ್ಟಲು ನಗರದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಪರಿಶೀಲಿಸಲು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದೆಹಲಿಯ ಕೇಂದ್ರ ಸರ್ಕಾರದ ಏರ್ ಕ್ವಾಲಿಟಿ ಅರ್ಲಿ ವಾರ್ನಿಂಗ್ ಸಿಸ್ಟಂ ಹೇಳಿಕೆ ನೀಡಿರುವ ಪ್ರಕಾರ, ದೆಹಲಿಯಲ್ಲಿ ಅತ್ಯಂತ ಕಳಪೆಮಟ್ಟದ ವಾತಾವರಣವಿದ್ದು, ಮುಂದಿನ ವಾರದಲ್ಲಿ ಸುಧಾರಿಸಬಹುದು ಎಂದು ತಿಳಿಸಿದೆ.

ಟ್ರಕ್ಕ್ ಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ!
ಇದಕ್ಕೂ ಮುನ್ನ ದೆಹಲಿಯಲ್ಲಿ ನವೆಂಬರ್ 17 ರಂದು, ಮಾಲಿನ್ಯ ನಿಗ್ರಹಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ದೆಹಲಿಗೆ ಸರಕುಗಳನ್ನು ತುಂಬಿಕೊಂಡು ಬರುವ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಲಾಗಿದೆ.