ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ಗುರುವಾರ ದೆಹಲಿಗೆ ಮರಳುತ್ತಿದ್ದ ಸಂಸದ ಅಸಾದುದ್ದೀನ್ ಓವೈಸಿ ಕಾರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿದ ಬೆನ್ನಲ್ಲೇ ಶುಕ್ರವಾರ ಓವೈಸಿ ಅವರಿಗೆ Z ಕೆಟಗರಿ ಭದ್ರತೆ ಒದಗಿಸಲಾಗಿದೆ.
ಕಳೆದ ರಾತ್ರಿ ನಡೆದ ದುರ್ಘಟನೆಯನ್ನು ಪರಿಶೀಲಿಸಿದ ನಂತರ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಓವೈಸಿಗೆ Z ಕೆಟಗರಿ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮೀರತ್‌ನ ಕಿತೌಧ್ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಸಚಿನ್ ಎಂಬಾತ ನೋಯ್ಡಾ ನಿವಾಸಿಯಾಗಿದ್ದು, ಈತನ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವಿದೆ. ತಾನು ಕಾನೂನು ಪದವಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದು, ಪೊಲೀಸರು ಆ ಬಗ್ಗೆ ಪರಿಶೀಲಿಸುತ್ತಿದ್ದಾರೆ. ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ, ಸಚಿನ್ ತಾನು ಹಿಂದೂ ಬಲಪಂಥೀಯ ಸಂಘಟನೆಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಬ್ಬ ಆರೋಪಿ ಸಹಾರನ್‌ಪುರದ ರೈತ ಶುಭಂ. ಇವನ ವಿರುದ್ಧ ಯಾವುದೇ ಅಪರಾಧ ದಾಖಲೆ ಇಲ್ಲ ಎಂಬುದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಶ್ರೀ ಓವೈಸಿ ಮತ್ತು ಅವರ ಸಹೋದರ ಮತ್ತು ಶಾಸಕ ಅಕ್ಬರುದ್ದೀನ್ ಓವೈಸಿ ಅವರ ಭಾಷಣದ ಹೇಳಿಕೆಗಳಿಂದ ತಾವು ಅಸಮಾಧಾನಗೊಂಡಿದ್ದೇವೆ ಎಂದು ಇಬ್ಬರು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ.
ಇವರಿಂದ ಇತ್ತೀಚೆಗೆ ಖರೀದಿಸಿದ್ದ ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದೀಗ ಬಂದೂಕು ನೀಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಅವರ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದಾರೆ.













