ಫೆಬ್ರವರಿ 13 ರ ಸಂಜೆ ದಿಲ್ಲಿಯ ಪೊಲೀಸರು ಬೆಂಗಳೂರಿನ ಸೋಲದೇವನಹಳ್ಳಿಗೆ ಬಂದು, ‘ಫ್ರೈಡೇಸ್ ಫಾರ್ ಪ್ಯೂಚರ್ ‘ ಸಂಘಟನೆಯ ಸ್ವಯಂಸೇವಕರಾದ ದಿಶಾ ರವಿ ಅವರ ಮನೆಗೆ ಹೋಗಿ, ಅವರ ಪೋಷಕರಿಗೆ ಯಾವುದೇ ಸರಿಯಾಗಿ ಮಾಹಿತಿ ನೀಡದೆ ದೆಹಲಿಗೆ ಅಕ್ರಮವಾಗಿ ಕರೆದುಕೊಂಡುಹೋಗಿದ್ದಾರೆ. ಇಂದು ದೆಹಲಿಯ ನ್ಯಾಯಾಲಯವೊಂದು ದಿಶಾ ಲವಲನ್ನು ೫ ದಿವಸ ಪೊಲೀಸ್ ಬಂಧನದಲ್ಲಿರುವಂತೆ ಆದೇಶ ನೀಡಿದೆ. ಪರಿಸರ ಉಳಿಸಬೇಕೆಂದು ಸ್ವಂತ ಆಸಕ್ತಿಯಿಂದ ಕೆಲಸ ಮಾಡುವ ಯುವತಿಯರನ್ನು 5 ದಿವಸ ಪೊಲೀಸ್ ಬಂಧನಕ್ಕೆ ಕಳಿಸಿರುವುದು ಅಮಾನವೀಯ, ಎಂದು ರೈತ, ದಲಿತ ಮತ್ತು ಕಾರ್ಮಿಕರ ಐಕ್ಯ ವೇದಿಕೆ ಪತ್ರಿಕಾ ಹೇಳಿಕೆ ನೀಡಿದೆ.
ದಿಶಾ ರವರ ಮೇಲೆ ಇರುವ ಆರೋಪ, ಅವರು ಗ್ರೀಟಾ ತಾನರ್ ಜೊತೆ ಸೇರಿ ‘ಟೂಲ್ ಕಿಟ್ ‘ ಒಂದು ತಯಾರು ಮಾಡಿದರು ಎಂದು. ಈ ‘ಟೂಲ್ ಕಿಟ್’ನಲ್ಲಿ ಇದ್ದಿದ್ದು ಏನು? ಕೇವಲ ಆನ್ಲೈನ್ ನಲ್ಲಿ ಅಂದೋಲನಗಳು ನಡೆಸುವಾಗ ಯಾರನ್ನು ಟ್ಯಾಗ್ ಮಾಡಬೇಕು, ಯಾವ ಹ್ಯಾಶ್ ಟ್ಯಾಗ್ ಉಪಯೋಗಿಸಬೇಕು ಇತ್ಯಾದಿ ಇತ್ತು. ಇದು ಹೇಗೆ ಕಾನೂನು ಬಾಹಿರ ವಾಗುತ್ತದೆ? ಎಂದು ಐಕ್ಯ ಹೋರಾಟ ವೇದಿಕೆ ಪ್ರಶ್ನಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದಿಶಾ ಹಾಗು ಹಲವು ವಿದ್ಯಾರ್ಥಿಗಳು, ಯುವಜನರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಏಕೆಂದರೆ ಅವರಿಗೆ ತಿಳಿದಿದೆ, ಈ ಹೋರಾಟ ರೈತರಿಗೆ ಮಾತ್ರವಲ್ಲ ಇದು ದೇಶದ ಭವಿಷ್ಯಕ್ಕಾಗಿ ಹೋರಾಟ, ಕೃಷಿ ಕಾಯ್ದೆಗಳು ಜಾರಿಗೆ ಬಂದರೆ ಹವಾಮಾನ ಬದಲಾವಣೆ (ಕ್ರೈಮೇಟ್ ಚೇಂಜ್) ಸಹ ಜಾಸ್ತಿಯಾಗುತ್ತದೆ, ಸಣ್ಣ ರೈತ ಆಧಾರಿತ ಕೃಷಿ ಹೋಗಿ ಕಂಪನಿ ಕೃಷಿ ಬರುತ್ತದೆ ಎಂದು ಈ ಯುವಜನ ಅರ್ಥ ಮಾಡಿಕೊಂಡಿದ್ದಾರೆ, ಅದಕ್ಕಾಗಿ ಹೋರಾಡುತ್ತಿದ್ದಾರೆ. ಇಂತಹ ಸಮಾಜದ ಮೇಲೆ ಅತ್ಯಂತ ಕಳಕಳಿ ಉಳ್ಳ ಯುವಕರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕೆಳಗೆ ಇರುವ ದೆಹಲಿ ಪೊಲೀಸ್ ನ ನಡೆ ಕಾನೂನು ಬಾಹಿರವಾಗಿದೆ, ಅದು ಹೀನಾಯವಾಗಿದೆ.
ಕಾನೂನಿನಲ್ಲಿ ಯಾರನ್ನಾದರೂ ಬಂಧಿಸಬೇಕಾದರೆ ಒಂದು ಪ್ರಕ್ರಿಯೆ ಪಾಲಿಸಬೇಕಾಗಿದೆ. ಅವರ ವಕೀಲರೊಡನೆ ಚರ್ಚಿಸಲು ಅವಕಾಶ ನೀಡಬೇಕು, ಏಕೆ ಬಂಧಿಸುತ್ತಿದ್ದಾರೆ ಎಂದು ಮಾಹಿತಿ ನೀಡಬೇಕು, ಹಾಗು ಒಂದು ಊರಿನಿಂದ ಇನ್ನೊಂದು ಊರಿಗೆ ಕರೆದುಕೊಂಡು ಹೋಗಿ ಬಂದಿಸಲು ನ್ಯಾಯಾಲಯದ ಮುಂದೆ ಹಾಜರ್ ಮಾಡಿಸಿ, ಕರೆದುಕೊಂಡುಹೋಗಬೇಕು, ಇದು ಯಾವುದನ್ನು ಪಾಲಿಸದ ದೆಹಲಿ – ಪೊಲೀಸ್ ಹಾಗು ಅವರಿಗೆ ನಿರ್ದೇಶನ ನೀಡುವ ಕೇಂದ್ರ ಸರ್ಕಾರ ಇಂದು ಸಂವಿಧಾನವನ್ನೇ ಉಲ್ಲಂಘಿಸುತ್ತಿದೆ . ಕಾನೂನನ್ನು ಗಾಳಿಗೆ ತೂರಿ ತೆಗೆದುಕೊಂಡಿರುವ ಈ ಕ್ರಮ ಖಂಡನೀಯ. ಹಾಗೆಯೇ ಕರ್ನಾಟಕದ ಯುವತಿಯೊಬ್ಬರನ್ನು ಬಂಧಿಸಲು ದೆಹಲಿ ಪೊಲೀಸ್ ಗೆ ಅಧಿಕಾರ ಹೇಗೆ ನೀಡಲಾಯಿತು. ಇದರಲ್ಲಿ ನಮ್ಮ ಪೋಲೀಸ್ ಇಲಾಖೆ ಗೆ ತಿಳಿಸದೆ ಹೇಗೆ ಮಾಡಲಾಯಿತು? ಕರ್ನಾಟಕ ಸರ್ಕಾರ ಕೂಡಾ ಇದರ ಬಗ್ಗೆ ಉತ್ತರಿಸಬೇಕಾಗಿದೆ
ಇದೆ ರೀತಿ ಈ ಸರ್ಕಾರ ಹಲವಾರು ರೈತರನ್ನು ಅಕ್ರಮವಾಗಿ ಬಂಧಿಸಿದೆ, ದಲಿತ ಕಾರ್ಮಿಕ ಹೋರಾಟಗಾರ್ತಿ ನವದೀಪ್ ಕೌರ್ ಅವರನ್ನು ಸಹ ಬಂಧಿಸಲಾಗಿದೆ. ರೈತರ ಮೇಲೆ, ಪತ್ರಕರ್ತರ ಮೇಲೆ ಸುಳ್ಳು ಪ್ರಕರಣಗಳು ದಾಖಲಿಸಲಾಗಿದೆ. ಇವೆಲ್ಲವನ್ನೂ ಸರ್ಕಾರ ನಿಲ್ಲಿಸಬೇಕು, ದಿಶಾ ಸೇರಿದಂತೆ ಅಕ್ರಮವಾಗಿ ಬಂಧಿಸಲಾದ ಎಲ್ಲಾ ಹೋರಾಟಗಾರರನ್ನು, ರೈತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಶಾಂತಿ ರೀತಿಯಲ್ಲಿ ನಡೆಸುತ್ತಿರುವ ನಮ್ಮ ಹಲವು ತಿಂಗಳ ಹೋರಾಟವನ್ನು ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯಿಂದ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಅದರ ಬದಲು ನಮ್ಮ ಜೊತೆ ಪ್ರಾಮಾಣಿಕವಾಗಿ ಮಾತುಕತೆ ಮಾಡಿ ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಸಂವಿಧಾನವನ್ನು ಪಾಲಿಸಬೇಕು, ಎಂದು ಐಕ್ಯ ಹೋರಾಟ ಸಮಿತಿಯು ಆಗ್ರಹಿಸಿದೆ.