ಕೋವಿಡ್ ಮಾರ್ಗಸೂಚಿಯ ಸರಿಯಾದ ಪಾಲನೆ ಮಾಡದಿದ್ದರೆ ಹಾಗೂ ಜನಸಂದಣಿಯನ್ನು ನಿಯಂತ್ರಿಸದಿದ್ದರೆ ಮುಂದಿನ ಆರೆಂಟು ವಾರಗಳಲ್ಲಿ ಸಾಂಕ್ರಾಮಿಕ ರೋಗದ ಮೂರನೆಯ ಅಲೆಯನ್ನು ನಾವು ಎದುರಿಸಬೇಕಾಗುತ್ತದೆ ಎಂದು AIIMS ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.
ಗಣನೀಯ ಪ್ರಮಾಣದಲ್ಲಿ ಜನರು ವ್ಯಾಕ್ಸಿನೇಷನ್ ಪಡೆಯುವವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು. ಜನಸಂದಣಿಯನ್ನು ತಡೆಯಬೇಕು. ಶೇಕಡಾ 5 ಕ್ಕಿಂತ ಅಧಿಕ ಪಾಸಿಟಿವಿಟಿ ರೇಟ್ ಬರುವ ಪ್ರದೇಶಗಳನ್ನು ಸ್ಥಳೀಯವಾಗಿ ಲಾಕ್‌ಡೌನ್ ಮಾಡಿ, ಕಣ್ಗಾವಲಿನಲ್ಲಿಡಬೇಕು. ಹಾಗೆಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರುವುದು ಕೋವಿಡ್ ನಿಯಂತ್ರಿಸುವ ಸರಿಯಾದ ಮಾರ್ಗವಾಗುವುದಿಲ್ಲ. ಕರೋನಾ ನಿಯಂತ್ರಿಸುವುದರ ಜೊತೆಗೆ ರಾಷ್ಟ್ರದ ಆರ್ಥಿಕತೆಯನ್ನೂ ನಾವು ಗಮನದಲ್ಲಿಡಬೇಕು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಮೂರನೆಯ ಅಲೆ ಬರುವುದನ್ನು ಈ ಹಿಂದೆಯೇ ಹಲವು ಸಾಂಕ್ರಾಮಿಕ ರೋಗ ತಜ್ಞರು ಎಚ್ಚರಿಸಿದ್ದರು. ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಮೂರನೆ ಅಲೆ ಅಪ್ಪಳಿಸುವ ಸಾಧ್ಯತೆಯನ್ನು ಅಂದಾಜಿಸಲಾಗಿತ್ತು. ಆದರೆ, AIIMS ಮುಖ್ಯಸ್ಥರ ಎಚ್ಚರಿಕೆ ಪ್ರಕಾರ ಮುನ್ನೆಚ್ಚರಿಕೆ ವಹಿಸದಿದ್ದರೆ ಜುಲೈ-ಆಗಸ್ಟ್ ತಿಂಗಳಲ್ಲೇ ಮೂರನೆ ಅಲೆ ಬರುವ ಸಾಧ್ಯತೆ ಇದೆ.
ಮೊದಲನೇ ಅಲೆಗಿಂತಲೂ ತೀವ್ರವಾಗಿ ಅಪ್ಪಳಿಸಿದ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿದೆ. ತೀವ್ರ ವೇಗದಲ್ಲಿ ಹರಡಿದ ಸೋಂಕು ಎರಡನೆ ಅಲೆಯಲ್ಲಿ ಮರಣ ಪ್ರಮಾಣವನ್ನೂ ಏರಿಸಿಕೊಂಡಿತ್ತು. ಎರಡನೇ ಅಲೆಯಲ್ಲಿ ಯುವ ಜನಾಂಗದ ಹಲವಾರು ಜೀವ ಹೋಗಿದ್ದ ಹಿನ್ನೆಲೆಯಲ್ಲಿ ಮೂರನೆಯ ಅಲೆ ಸಣ್ಣ ಮಕ್ಕಳಿಗೆ ಹೆಚ್ಚು ಅಪಾಯ ತರಬಲ್ಲದು ಎನ್ನಲಾಗಿತ್ತು. ಆದರೆ, ರಣದೀಪ್ ಗುಲೇರಿಯಾ ಇದನ್ನು ನಿರಾಕರಿಸಿದ್ದು, ಮೂರನೆ ಅಲೆ ಮಕ್ಕಳಿಗೆ ಹೆಚ್ಚು ಅಪಾಯ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ.