ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕದನ ದಿನಕಳೆದಂತೆ ತಾರಕಕ್ಕೇರುತ್ತಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್(Congress) ಹೈಕಮಾಂಡ್ ಮಾಡಿದ್ದ ಪ್ಲಾನ್ ಕೈ ಕೊಟ್ಟಿದೆ. ಇದರ ಪರಿಣಾಮ ಬೆಳಗಾವಿಯ ಚಳಿಗಾಲದ ಅಧಿವೇಶನದ(Winter Session 2025) ಮೇಲೆ ಬೀರಿದಂತಾಗಿತ್ತು. ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಬೇಕಾಗಿದ್ದ ನಾಯಕರು ಸಿಎಂ ಬದಲಾವಣೆಯ ಬಗ್ಗೆ ದಿನಕ್ಕೊಂದರಂತೆ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು.

ಈ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಎಂದಿನ ಶೈಲಿಯಲ್ಲಿಯೇ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ವಿಧಾನಸಭೆಯಲ್ಲಿ ಈ ಮಾತನ್ನು ಸಿದ್ದು ಪುನರುಚ್ಚರಿಸುವ ಮೂಲಕ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಬಣಕ್ಕೆ ಟಾಂಗ್ ನೀಡಿದ್ದರು. ಈ ಮೂಲಕ ತಾವು ನೀಡಬೇಕಾಗಿದ್ದ ಸ್ಪಷ್ಟ ಸಂದೇಶವನ್ನು ರವಾನಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದರು.

ಅಲ್ಲದೇ ಇದೇ ವಿಚಾರಕ್ಕೆ ಸರಣಿ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿದ್ದ ತಮ್ಮ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರಗೆ ಕ್ಲಾಸ್ ತೆಗೆದುಕೊಂಡಿದ್ದರು. ಗೊಂದಲಕಾರಿ ಹೇಳಿಕೆಗಳನ್ನು ನೀಡದಂತೆ ತಾಕೀತನ್ನೂ ಮಾಡಿದ್ದರು. ಇದಾದ ಬಳಿಕ ಡಿಕೆ ಶಿವಕುಮಾರ್ ನಾಯಕತ್ವದ ಬದಲಾವಣೆಯ ಕುರಿತು ಕಳೆದೆರಡು ದಿನಗಳಿಂದ ನೀಡುತ್ತಿರುವ ಹೇಳಿಕೆಗಳು ಸಾಕಷ್ಟು ಕುತೂಹಲ ಮೂಡಿಸುತ್ತಿವೆ.

ಸಿಎಂ ಸಿದ್ದರಾಮಯ್ಯ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಆಪ್ತರ ಡಿನ್ನರ್ ಮೀಟಿಂಗ್ ನಡೆಸಿದ್ದರು. ಇದಕ್ಕೂ ಸಹ ಡಿಕೆಶಿ ತಾಳ್ಮೆಯಿಂದಲೇ ಅದು ಸಹಜ ಎಂದು ಪ್ರತಿಕ್ರಿಯಿಸಿದ್ದರು. ಊಟ ಮಾಡೋಕೆ ಬೇಡ ಅನ್ನೀಕ್ಕಾಗಲ್ಲ, ಅದರಲ್ಲಿ ತಪ್ಪೇನಿದೆ ಎಂದಿದ್ದರು. ಈ ಮೊದಲು ಜಾರಕಿಹೊಳಿಯನ್ನು ರಹಸ್ಯವಾಗಿ ಭೇಟಿಯಾಗಿ ಪಕ್ಷದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಆಪ್ತರನ್ನು ವಿಶ್ವಾಸಕ್ಕೆ ಪಡೆಯುವ ಚಿಂತನೆ ಮಾಡಿದಂತೆ ಕಂಡುಬರುತ್ತಿದೆ. ಸತೀಶ್ ಬಳಿಕ ಡಿಕೆ ಶಿವಕುಮಾರ್ ಮಾಜಿ ಸಚಿವ ರಾಜಣ್ಣ ಅವರನ್ನು ಭೇಟಿಯಾಗಿ ಪ್ರಮುಖ ರಾಜಕೀಯ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದಾರೆ. ರಣತಂತ್ರದ ಮೂಲಕ ಸಿಎಂ ಹಾದಿ ಸುಲಭವಾಗುವುದು ಕಷ್ಟ ಸಾಧ್ಯ ಎಂದು ಮನಗಂಡಿರುವ ಡಿಸಿಎಂ ಪ್ರೀತಿ, ವಿಶ್ವಾಸದ ಮೂಲಕ ಹೆಜ್ಜೆ ಇಟ್ಟರೆ ಹೆಚ್ಚಿನ ಅನುಕೂಲ ಎನ್ನುವುದನ್ನು ಅರಿತುಕೊಂಡಂತೆ ಕಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ ದೈವೀ ಶಕ್ತಿಗಳ ಜೊತೆಗೆಯೇ ಸಿದ್ದ ಶಕ್ತಿಗಳನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ನಡುವೆಯೇ ನಾನು ಸಿಎಂ ಇಬ್ಬರೂ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಇಬ್ಬರಿಗೂ ಒಪ್ಪಂದ ಮಾಡಿಕೊಂಡಿದ್ದೇವೆ ಎಂದಿರುವ ಡಿಕೆ ಶಿವಕುಮಾರ್ ಇನ್ನೊಂದು ಒಪ್ಪಂದದ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಹೈಕಮಾಂಡ್ ಈ ವಿಚಾರದ ಮೇಲೆ ನಿಗಾಇರಿಸಿದೆ ಎಂದು ಡಿಸಿಎಂ ಪರೋಕ್ಷವಾಗಿ ತಿಳಿಸಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಡಿಕೆ ಶಿವಕುಮಾರ್ ಆಪ್ತ ಶಾಸಕರು ತಮ್ಮ ಹೇಳಿಕೆಗಳನ್ನು ನಿಲ್ಲಿಸಿಲ್ಲ. ಜನವರಿ 6ರಂದು ಡಿಕೆಶಿ ಸಿಎಂ ಆಗುತ್ತಾರೆ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಆದರೆ ಲಂಗು ಲಗಾಮಿಲ್ಲದೆ ಹೇಳಿಕೆ ನೀಡುತ್ತಿದ್ದ ಕೈ ನಾಯಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ಪಕ್ಷ ಯಾವುದೇ ಒಬ್ಬ ನಾಯಕನಿಂದ ಬೆಳಿದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು ಎಂದು ಪರೋಕ್ಷವಾಗಿ ಡಿಕೆಶಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾರ್ನ್ ಮಾಡಿದ್ದಾರೆ.

ಈ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷವಾಗಿದೆ. ಪಕ್ಷದ ಎಂಬ ವಿಚಾರ ಬಂದಾಗ ಅದರಲ್ಲಿ ಎಲ್ಲರ ಪಾತ್ರವೂ ಇರುತ್ತದೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ತೀಕ್ಷ್ಣವಾಗಿ ಚಾಟಿ ಬೀಸಿದ್ದಾರೆ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹೈಕಮಾಂಡ್ ಯಾವುದೇ ರೀತಿಯ ಗೊಂದಲ ಮಾಡಿಲ್ಲ. ಸ್ಥಳೀಯ ನಾಯಕರೇ ಇದನ್ನು ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್ ಹೆಸರು ಹೇಳಿದರೆ ಹೇಗೆ ಖರ್ಗೆ ಪ್ರಶ್ನಿಸಿದ್ದಾರೆ. ಈ ಮೂಲಕ ಹೈಕಮಾಂಡ್ ನಾಯಕರು ನಿರ್ಧರಿಸುವವರೆಗೂ ಯಾವೊಬ್ಬ ನಾಯಕನೂ ಕೂಡ ವ್ಯತಿರಿಕ್ತ ಹೇಳಿಕೆಗಳನ್ನು ನೀಡಬಾರದು ಎಂದು ನಾಯಕರಿಗೆ ಮತ್ತೊಮ್ಮೆ ಮಲ್ಲಿಕಾರ್ಜುನ ಖರ್ಗೆ ಸಂದೇಶ ರವಾನಿಸಿದ್ದಾರೆ.










