ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಯೋಗೇಶ್ವರ್ ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೇವೆ, ಆದರೆ ಆಗಲಿಲ್ಲ. ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿರೋದು ದುರ್ದೈವ. ಕಾಂಗ್ರೆಸ್‌ಗೆ ಅಲ್ಲಿ ಅಭ್ಯರ್ಥಿಯೇ ಇರಲಿಲ್ಲ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸುಲಭವಾಗಿ ಗೆಲ್ಲಬಹುದಿತ್ತು. ಆದರೂ ಚನ್ನಪಟ್ಣದಲ್ಲಿ ಕುಮಾರಸ್ವಾಮಿಯವರ ದೊಡ್ಡ ಪ್ರಭಾವ ಇದೆ. ಕಳೆದ ಬಾರಿ ತ್ರಿಕೋನ ಸ್ಫರ್ಧೆ ಇದ್ದರೂ ಕುಮಾರಸ್ವಾಮಿ ಗೆದ್ದಿದ್ದರು. ಖಂಡಿತವಾಗಿ ಅಲ್ಲಿ ಜೆಡಿಎಸ್ ಅಭ್ಯರ್ಥಿನೇ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಸಂಭ್ರಮಿಸುತ್ತಿದೆ. ನಿಜವಾದ ಸಂಗತಿ ಏನೆಂದರೆ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ. ಒಂದು ಕಾಲು ಶತಮಾನ ಇತಹಾಸ ಇರುವ ಪಕ್ಷಕ್ಕೆ, ಚನ್ನಪಟ್ಟಣ ಬೈ ಎಲೆಕ್ಷನ್ಗೆ ನಿಲ್ಲಿಸಲು ಒಬ್ಬ ಯೋಗ್ಯ ಅಭ್ಯರ್ಥಿ ಇಲ್ಲ. ಬೇರೆ ಪಕ್ಷದಿಂದ ಕರೆತಂದು ನಿಲ್ಲಿಸುವ ದುರ್ಗತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ನಿಜವಾಗಲೂ ಕಾಂಗ್ರೆಸ್ ಪಕ್ಷಕ್ಕೆ ಇದು ಅವಮಾನ. ಇತ್ತೀಚಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಶಕ್ತಿ ಕಳೆದುಕೊಂಡಿದ್ದು, ಮೂರು ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲುತ್ತೆ ಎಂದು ಹೇಳಿದ್ದಾರೆ.

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ಸೋತಿದೆ. ಸ್ವಂತ ಮಗಳು ಯೋಗೇಶ್ವರ್ ಮರ್ಯಾದೆ ಹರಾಜು ಹಾಕ್ತೀನಿ ಅಂತ ಕೂತಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್‌ಗೆ ಬರಬಾರದು. ಸಿದ್ದರಾಮಯ್ಯ ಮನಸ್ಥಿತಿ ಹೇಗಿದೆ ಅಂದ್ರೆ, ಕಾಂಗ್ರೆಸ್‌ನ ಹಾಳು ಮಾಡಿ ಹೋಗಿ ಬಿಡೋಣ ಅಂತ ಇದ್ದಾರೆ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ಮಾಡಿದ್ದಾರೆ. ಕುಮಾರಸ್ವಾಮಿ ಯೋಗೇಶ್ವರ್‌ಗೆ ಟಿಕೆಟ್ ಕೊಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್‌ನಿಂದ ಕುಮಾರಸ್ವಾಮಿ ಅಫರ್ ಮಾಡಿದ್ರು. ಅದನ್ನು ಯೋಗೇಶ್ವರ್ ಕೇಳಲಿಲ್ಲ. ಈಗ ಕಾಂಗ್ರೆಸ್‌ಗೆ ಯೋಗೇಶ್ವರ್ ರೈಟ್ ಪರ್ಸನ್ ಅಲ್ಲ. ರಾಜಕಾರಣದಲ್ಲಿ ಅನಿವಾರ್ಯ ಸೃಷ್ಟಿ ಆಗ್ತಿದೆ. ಪಕ್ಷ ರಾಜಕಾರಣ ಹೋಗಿದೆ. ವ್ಯಕ್ತಿ ರಾಜಕಾರಣ ಆಗ್ತಿದೆ ಎಂದಿದ್ದಾರೆ.

ಕೋಲಾರದಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಾಣ ಮಾತನಾಡಿ, ಸಿ.ಪಿ .ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಬೇಸರ ತಂದಿದೆ. ಕಾಂಗ್ರೇಸ್ ವಿರುದ್ದ ಬಹಳ ಸ್ಪಷ್ಟವಾಗಿ ಪಕ್ಷ ಕಟ್ಟಿಯಾಗಿದ್ದವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಬಲವಾಗಿ ಇದ್ದವರು, ಯಾವ ಕಾರಣಕ್ಕೆ ಕಾಂಗ್ರೆಸ್ ಕಡೆ ವಾಲಿದ್ದಾರೆ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿಗೆ ಉತ್ತಮ ಸ್ಥಾನ ಮಾನ ಸಿಕ್ಕಿತ್ತು. ಅವರು ಕಾಂಗ್ರೆಸ್ ಸೇರ್ಪಡೆ ದುಃಖದ ವಿಚಾರ, ಖಂಡನೆ ವಿಚಾರ ಎಂದಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದಲೇ ಅಭ್ಯರ್ಥಿ ಮಾಡುವ ಇಂಗಿತ ಇತ್ತು. ಆದ್ರೆ ಕೆಲವು ಕಾರಣಗಳಿಂದ ಅವರಿಗೆ ನೋವಾಗಿದೆ. ಇಂತಹ ಅಲೋಚನೆಗಳು ಬಂದಾಗ ಅವಕಾಶವಾದ ರಾಜಕಾರಣ ಅಗಲಿದೆ. ಕಾಂಗ್ರೆಸ್ ಸೇರುವ ಮೂಲಕ ತಪ್ಪು ನಡೆ, ತಪ್ಪು ನಿರ್ಧಾರ ಮಾಡಿದ್ದಾರೆ ಎಂದಿದ್ದಾರೆ.

ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿ .ಪಿ ಯೋಗೇಶ್ವರ್ ನಮ್ಮನ್ನು ಬಿಡುವುದಿಲ್ಲ ಎನ್ನುವ ವಿಶ್ವಾಸವಿತ್ತು. ಚನ್ನಪಟ್ಟಣದಲ್ಲಿ ಎನ್‌ಡಿಎ ಗೆಲ್ಲಬೇಕು ಅನ್ನೋದು ನಮ್ಮ ವಿಚಾರ. ಚನ್ನಪಟ್ಟಣದಲ್ಲಿ ನಮಗೆ ಗೆಲ್ಲುವ ವಿಶ್ವಾಸವಿದೆ. ರಾಜಕಾರಣದಲ್ಲಿ ಈ ರೀತಿಯ ತರ್ಕಗಳು, ಚರ್ಚೆಗಳು, ಬೆಳವಣಿಗೆಗಳು ಆಗುವುದು ಸಹಜ. ಒಟ್ಟಾರೆ ಚುನಾವಣೆ ಸುಖಾಂತ್ಯ ಆಗುತ್ತದೆ ಎನ್ನುವ ವಿಶ್ವಾಸವಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಯಾರನ್ನು ನಿಲ್ಲಿಸಬೇಕು ಅನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.