ಜೀವನದಲ್ಲಿ ಒಂದು ಸ್ವಂತ ಮನೆಯೊಂದನ್ನ ಕಟ್ಟಿ ಸುಖವಾಗಿರೋಣ ಅನ್ನೊ ಕನಸು ಕಾಣುತ್ತಿದ್ದರೆ ಸದ್ಯಕ್ಕೆ ಆ ಆಸೆ ಬಿಟ್ಟು ಇರೋ ಜಾಗದಲ್ಲಿ ಇರುವ ದುಡ್ಡಲ್ಲಿ ಜೀವನಸಾಗಿಸೋದು ಒಳ್ಳೆಯದು. ಕಾರಣ ದುಬಾರಿ ದುನಿಯಾದ ಬೆಲೆ ಏರಿಕೆಯಿಂದ ಮೊದಲೇ ಬೇಸತ್ತಿದ್ದ ಜನರಿಗೆ ಈಗ ಮತ್ತೊಂದು ಬರೆ ಬಿದ್ದಿದೆ. ಕಬ್ಬಿಣ, ಸಿಮೆಂಟ್ ಮತ್ತಷ್ಟು ದುಬಾರಿ ಆಗಿದ್ದು.
ಅದ್ಯಾವಾಗ ರಷ್ಯಾ ಉಕ್ರೇನ್ ಯುದ್ಧ ಆರಂಭವಾಯಿತೋ ಆಗಿನಿಂದ ಮಧ್ಯಮ ವರ್ಗದ ಜನರ ಜೀವನ ಮತ್ತಷ್ಟು ಬರ್ಬಾದ್ ಆಗಿದೆ. ಬೈಕು-ಕಾರು ಓಡಿಸೋಕು ಯೋಚನೆ ಮಾಡ್ಬೇಕಾಗಿದೆ. ಸೆಂಚೂರಿ ಬಾರಿಸಿ ಸೈಲೆಂಟಾಗಿ ಮುಂದೆ ಹೋಗ್ತಿರುವ ಪೆಟ್ರೋಲ್ ದರ, ಇತ್ತ ಸಾವಿರದಂಚಿನಲ್ಲಿರೋ ಸಿಲಿಂಡರ್ ಬೆಲೆ ಸಹ ಗ್ರಾಹಕರ ಜೇಬು ಸುಡುತ್ತಿದೆ. ಇದರ ನಡುವೆ ಕೂಡಿಟ್ಟ ಕಾಸಿನಲ್ಲಿ ಕನಸಿನ ಮನೆ ನಿರ್ಮಾಣ ಮಾಡೋಣ ಅನ್ನೊವರ ಕನಸು ಸಹ ಕರಗಿ ಹೋಗುವುದರಲ್ಲಿ ಸಂಶಯವೇ ಇಲ್ಲ.
ಸ್ವತದೊಂದು ಮನೆ ಕಟ್ಟಿ ಬೆಚ್ಚಗಿರಬೇಕು ಅನ್ನೊರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಏಕಾಏಕಿ ಕಟ್ಟಡ ಸಾಮಾಗ್ರಿ ಬೆಲೆ ಏರಿಕೆಯಾಗಿದ್ದು, GST ಮತ್ತು ಇಂಧನ ದರ ಏರಿಕೆಯಿಂದ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. ಕಳೆದ ಐದು ವರ್ಷಕ್ಕೆ ಹೋಲಿಕೆ ಮಾಡಿದರೆ ಕಬ್ಬಿಣ, ಸಿಮೆಂಟ್, ಮರಳು ಇಟ್ಟಿಗೆ ಹೀಗೆ ಗೃಹ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ದರ ಬಹುತೇಕ ದುಪ್ಪಟ್ಟಾಗಿದೆ. ಕಳೆದ ಒಂದು ವರ್ಷದಲ್ಲಿ ಶೇ 40 ರಿಂದ 50ರಷ್ಟು ದರ ಹೆಚ್ಚಳವಾಗಿದ್ದು, ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಮತ್ತಷ್ಟು ಹೆಚ್ಚಳವಾಗಿದೆ ಎಂದು ವರ್ತಕರು ಹೇಳುತ್ತಿದ್ದಾರೆ.
ಕೋವಿಡ್ ನಿಂದ ಕಂಗಾಲಾಗಿದ್ದ ಜನ ತುಸು ಚೇತರಿಕೆ ಕಾಣುತ್ತಿದ್ದಾರೆ. ಆದರೆ ಯುದ್ಧದಿಂದಾಗಿ ಏಕಾಏಕಿ ಅಗತ್ಯವಸ್ತುಗಳ ಜೊತೆ ಗೃಹ ನಿರ್ಮಾಣಕ್ಕೆ ಬೇಕಾದ ಸಿಮೆಂಟ್ ಕಬ್ಬಿಣ ದರ ಹೆಚ್ಚಳವಾಗಿ ಗ್ರಾಹಕರ ಜೇಬು ಸುಡುತ್ತಿದೆ. ಸಾರ್ವಕಾಲಿಕ ದಾಖಲೆ ಬರೆದಿರುವ ಸಿಮೆಂಟ್ ಮತ್ತು ಕಬ್ಬಿಣ ದರ ಯುದ್ಧದ ಎಫೆಕ್ಟ್ ನಿಂದ ಕಳೆದೆರಡು ತಿಂಗಳಿನಿಂದ ಏರಿಕೆಯಾಗುತ್ತಿದೆ. ಕೆ.ಜಿ. ಕಬ್ಬಿಣದ ದರ ಶತಕದ ಅಂಚಿನಲ್ಲಿದ್ದು ಪೆಟ್ರೋಲ್, ಸಗಟು ವೆಚ್ಚ ಹೆಚ್ಚಳ, ರಫ್ತಿನ ಪ್ರಮಾಣ ಇಳಿಕೆ ಎಫೆಕ್ಟ್ ನಿಂದ ಮತ್ತಷ್ಟು ದುಬಾರಿ ಆಗಿದೆ. ಈ ನಡುವೆ ತೆರಿಗೆ ಇಳಿಸಿ ಶ್ರೀ ಸಾಮಾನ್ಯರ ಜೊತೆಗಿರಬೇಕಿದ್ದ ಸರ್ಕಾರ ಕೂಡ ಗೌಣವಾಗಿದೆ.
ಗಗನಕ್ಕೇರಿದ ಗೃಹ ನಿರ್ಮಾಣ ವಸ್ತುಗಳ ಬೆಲೆ
ಕಬ್ಬಿಣ ಟನ್ ಗೆ 68,000 ಇತ್ತು, ಆದರೀಗ 78,000 ರೂಪಾಯಿ ಆಗಿದೆ. ಸಿಮೆಂಟ್ ಚೀಲಕ್ಕೆ ಈ ಹಿಂದೆ 270 ಸದ್ಯದ ಬೆಲೆ 480 – 550 ರೂಪಾಯಿ ಹೆಚ್ಚಳವಾಗಿದೆ. ಮಣ್ಣಿನ ಇಟ್ಟಿಗೆ 6 ರಿಂದ 8 ರೂಪಾಯಿಗೆ ಏರಿಕೆಯಾಗಿದೆ. ಸಿಮೆಂಟ್ ಇಟ್ಟಿಗೆ 35 ರಿಂದ 48 ರೂಪಾಯಿ ಹೆಚ್ಚಿದೆ. ಒಟ್ನಲ್ಲಿ ಬೆಲೆ ಏರಿಕೆಯ ಭೂತ ಜನರನ್ನ ಬೆನ್ನು ಬಿಡದಂತೆ ಕಾಡುತ್ತಿದೆ. ಇತ್ತ ಸದ್ಯದ ಪರಿಸ್ಥಿತಿ ಎಷ್ಟೊ ಜನರ ಜೀವನದ ಕನಸನ್ನ ಕನಸಾಗೆ ಉಳಿಸಿ ಬಿಡುತ್ತ ಎನ್ನುವ ಪ್ರಶ್ನೆಯೂ ಕಾಡತೊಡಗಿದೆ. ಇದರ ಜೊತೆಗೆ ಸರ್ಕಾರ ಕೂಡ ಜನರನ್ನು ಮರೆತು ಜೇಬು ತುಂಬಿಸುವ ಕಡೆ ಹೊರಟಿದೆ. ಪರಿಣಾಮ ಜನರು ಹೈರಾಣಾಗಿ ಹೋಗಿದ್ದಾರೆ.