ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ?! ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಎಸ್.ಐ.ಟಿ ಅಧಿಕಾರಿಗಳಿಗೆ ಇರುವ ಮಾಹಿತಿಯ ಪ್ರಕಾರ ಪ್ರಜ್ವಲ್ ಸದ್ಯ ದುಬೈನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಪ್ರಜ್ವಲ್ ಬಂಧನಕ್ಕೆ SIT ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಪ್ರಜ್ವಲ್ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.

ಮತ್ತೊಂದೆಡೆ ರಾಜ್ಯದಲ್ಲಿ ಎರಡನೇ ಹಂತದ ಮತದಾನದ ನಂತರ ಪ್ರಜ್ವಲ್ ತಾವೇ SIT ಮುಂದೆ ಹಾಜರಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಒಂದುವೇಳೆ ಈಗಲೇ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾದರೆ SIT ಅವರನ್ನು ಬಂಧಿಸಲಿದ್ದು , ಇದು ಚುನಾವಣೆಯ ಮತದಾನದ ಮೇಲೆ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ-ಜೆಡಿಎಸ್ ನಾಯಕರಿದ್ದಾರೆ.

ಈ ಕಾರಣಕ್ಕಾಗಿ, ರಾಜ್ಯದಲ್ಲಿ ಚುನಾವಣೆ ಮುಗಿಯುತ್ತಿದ್ದ ಹಾಗೇ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಸ್ಸಾಗುವ ಲೆಕ್ಕಾಚಾರದಲ್ಲಿದಾರೆ. ಪ್ರಜ್ವಲ್ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಅವರನ್ನು ವಶಕ್ಕೆ ಪಡೆಯಲು SIT ತಂಡ ಸಿದ್ಧತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.