ತಮಿಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿರುವ ಮೊದಲ ಚಿತ್ರ ಎಂಬ ಹೆಮ್ಮೆಗೆ ಪಾತ್ರವಾಗಿರುವ ಜೈಲರ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ನಾಗಾಲೋಟದಿಂದ ಓಡುತ್ತಿದೆ. ಕಳೆದ ಮೂರು ವಾರಗಳಿಂದ ಭರ್ಜರಿ ಪ್ರದರ್ಶನ ಕಾಡುತ್ತಿರುವ ಜೈಲರ್ ಈಗಾಗಲೇ 600 ಕೋಟಿ ಗಳಿಸಿದ ಎಂದು ಹೇಳಲಾಗುತ್ತಿದೆ.
ಚಿತ್ರದ ಪ್ರಚಂಡ ಗೆಲುವಿಗೆ ಸಂಬಂಧಿಸಿದಂತೆ ನಟ ರಜಿನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‌ಗೆ ಭರ್ಜರಿ ಉಡುಗೊರೆಯನ್ನು ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ನೀಡಿದೆ.
ರಜನಿಕಾಂತ್ ಅವರು ತಮ್ಮ ಸಂಭಾವನೆಯಾಗಿ, ಚಿತ್ರದ ಲಾಭ ಹಂಚಿಕೆ ಆಧಾರದ ಮೇಲೆ ಸನ್ ಪಿಕ್ಚರ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಂತೆ, ಚಿತ್ರದ ಲಾಭಾಂಶದ ಚೆಕ್ ಅನ್ನು ರಜಿನಿಕಾಂತ್ ಅವರಿಗೆ ಸನ್ ಪಿಕ್ಚರ್ಸ್ ಸಿಇಒ ಕಲಾನಿದಿ ಮಾರನ್ ವಿತರಿಸಿದ್ದಾರೆ. ಸುಮಾರು 100 ಕೋಟಿಯಷ್ಟು ಮೊತ್ತವನ್ನು ರಜಿನಿಕಾಂತ್ ಪಡೆದಿದ್ದಾರೆ ಎನ್ನಲಾಗಿದೆ.
ಅದಲ್ಲದೆ, BMW X7 ಸೀರೀಸ್ ಕಾರನ್ನು ಸಹ ಉಡುಗೊರೆಯಾಗಿ ರಜಿನಿಕಾಂತ್ ಅವರು ಪಡೆದಿದ್ದಾರೆ.
ಸನ್ ಪಿಕ್ಚರ್ಸ್ ಸಿಇಒ ಮತ್ತು ‘ಜೈಲರ್’ನ ಫೈನಾನ್ಶಿಯರ್ ಆಗಿರುವ ಕಲಾನಿದಿ ಮಾರನ್ ಅವರು ಆಗಸ್ಟ್ 31 ರಂದು ರಜನಿಕಾಂತ್ ಅವರನ್ನು ಅವರ ಚೆನ್ನೈ ನಿವಾಸದಲ್ಲಿ ಭೇಟಿ ಮಾಡಿ ಚೆಕ್ ಹಾಗೂ ಉಡುಗೊರೆಯನ್ನು ನೀಡಿದ್ದಾರೆ.
ಜೈಲರ್ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರಿಗೆ ಕೂಡಾ ಚಿತ್ರದ ಲಾಭಾಂಶದ ಚೆಕ್ ವಿತರಣೆ ಮಾಡಲಾಗಿದ್ದು, ಪೋರ್ಷೆ ಕಾರ್ ಕೂಡಾ ಉಡುಗೊರೆಯಾಗಿ ಪಡೆದಿದ್ದಾರೆ.
ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿಶ್ರಾಫ್ ಮೊದಲಾದ ಲೆಜೆಂಡ್ ನಟರು ಅತಿಥಿ ಪಾತ್ರದಲ್ಲಿ ಬಂದು ಕಮಾಲ್ ಮಾಡಿದ್ದ ಜೈಲರ್ ಚಿತ್ರ ಈ ವರ್ಷ ಅತೀ ಹೆಚ್ಚು ಬ್ಯುಸಿನೆಸ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.