ಕಳೆದೆರಡು ದಿನಗಳ ಹಿಂದೆ ಗೂಗಲ್ ಕನ್ನಿಡಿಗರ ಸ್ವಾಭಿಮಾನವನ್ನು ಕೆದಕಿತ್ತು. ಕನ್ನಡಿಗರು ಒಕ್ಕೊರಳಿನಿಂದ ಗೂಗಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು. ಕೂಡಲೇ ಎಚ್ಚೆತ್ತ ಗೂಗಲ್ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿತ್ತು. ಇದಾದ ಬೆನ್ನಲೆ ಅಮೇಜಾನ್ ಉದ್ಧಟತನ ಮೆರೆದಿದೆ.
ಆನ್ಲೈನ್ ಶಾಪಿಂಗ್ ಸಂಸ್ಥೆಯಾದ ಅಮೇಜಾನ್ ಮೂಲಕ ಮಾರಾಟ ಮಾಡುವ ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನ ಬಳಕೆಯಾಗಿದ್ದು, ಪ್ರತಿಯೊಬ್ಬ ಕನ್ನಡಿಗನು ದೇಶದ ಬಾವುಟದಷ್ಟೇ ಗೌರವಿಸುವ ಮತ್ತೊಂದು ಬಾವುಟವೆಂದರೆ ಅದು ಕೆಂಪು, ಹಳದಿ ಬಣ್ಣವಿರುವ ಕರುನಾಡ ಬಾವುಟ. ಇದೀಗ ಅಮೇಜಾನ್ ಕನ್ನಡಿಗರ ಸಂಸ್ಕೃತಿಗೆ ಅಪಮಾನ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಮೇಜಾನ್ ಸಂಸ್ಥೆ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಒಳ ಉಡುಪುಗಳ ಮೇಲೆ ಕನ್ನಡದ ಧ್ವಜದ ಬಣ್ಣ ಮತ್ತು ಕರ್ನಾಟಕ ಸರ್ಕಾರದ ಲಾಂಛನವನ್ನು ಬಳಸಿ ಕನ್ನಡಿಗರ ಅಸ್ಮಿತೆಗೆ, ಸಾರ್ವಭೌಮತ್ವಕ್ಕೆ ಧಕ್ಕೆ ಆಗುವಂತೆ ಮಾಡಿರುವ ಕೆನಡಾದ ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರಗಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಡೆಪ್ಟ್ ಕನ್ಸಾಲಿಡೇಷನ್ ಸ್ಕ್ವಾಡ್.ಕಾಮ್ ಮತ್ತು ಗೂಗಲ್ ಸಂಸ್ಥೆ ಇಂತಹದೇ ಅಚಾತುರ್ಯದ ಕೆಲಸವನ್ನು ಮಾಡಿ ಕನ್ನಡಿಗರಿಂದ ಛೀಮಾರಿ ಹಾಕಿಸಿಕೊಂಡ ನಂತರ ಕ್ಷಮೆಯನ್ನು ಕೂಡ ಯಾಚಿಸಿದ್ದು ಹಸಿಯಾಗಿರುವಾಗಲೇ ಇಂದು ಅಮೆಜಾನ್ ಸಂಸ್ಥೆ ಇಂತಹ ಉದ್ಧಟತನ ಮೆರೆದಿರುವುದು ಕನ್ನಡಿಗರ ಸೌಮ್ಯ ಭಾವನೆಯನ್ನು ಕೆರಳಿಸಿದೆ. ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಅದೂ ಒಳ ಉಡುಪುಗಳ ಮೇಲೆ ಅಖಂಡ ಕನ್ನಡ ಮನಸ್ಸುಗಳು ಗೌರವಿಸುವ, ಪೂಜ್ಯಭಾವನೆಯಿಂದ ನೋಡಲಾಗುವ ರಾಜ್ಯದ ಧ್ವಜ ಮತ್ತು ಕರ್ನಾಟಕ ಸರ್ಕಾರದ ಲಾಂಛನ ಬಳಸಿ, ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಇಂತಹವರನ್ನು ಹೀಗೆ ಬಿಟ್ಟರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹಾಗಾಗಿ ಇಂತಹ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕೆನಡಾದ ಅಮೆಜಾನ್ ಸಂಸ್ಥೆ ಕೂಡಲೇ ಕ್ಷಮೆಯಾಚಿಸಬೇಕು ಮತ್ತು ಈ ರೀತಿ ಒಳಉಡುಪುಗಳ ಮೇಲೆ ರಾಜ್ಯದ ಲಾಂಛನವನ್ನು ಬಳಸಲು ಆದೇಶಿಸಿದ ಆಡಳಿತ ಮಂಡಳಿ, ಅಧಿಕಾರಿ ಮತ್ತು ನೌಕರರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಅಮೆಜಾನ್ ಸಂಸ್ಥೆಯ ವಿರುದ್ಧ ಟ್ವಿಟ್ಟರ್ ಅಭಿಯಾನವನ್ನು ಪ್ರಾರಂಭಿಸಲಾಗುವುದು ಮತ್ತು ಕ್ಷಮೆ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಮ್ಮ ಕರ್ನಾಟಕದ ಜನತೆ ಅಮೆಜಾನ್ ನೊಂದಿಗೆ ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.
ಸಾವಿರಾರು ಕೋಟಿ ವ್ಯವಹಾರ ವಹಿವಾಟು ನಡೆಸುವ ಅಮೆಜಾನ್ ಸಂಸ್ಥೆ, ಈ ರೀತಿ ಒಂದು ರಾಜ್ಯದ ಜನತೆಗೆ ದಕ್ಕೆ ತರುವ ರೀತಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧ. ಕರ್ನಾಟಕದಲ್ಲಿಯೂ ತನ್ನ ಶಾಖೆಯನ್ನು ತೆರೆದಿರುವ ಅಮೆಜಾನ್, ಇಲ್ಲಿನ ನೆಲ-ಜಲ, ಭೂಮಿಯನ್ನು ಬಳಸಿಕೊಂಡು ವ್ಯಾಪಾರವನ್ನು ವೃದ್ಧಿಸಿಕೊಂಡಿದೆ. ಅಷ್ಟಾಗಿಯೂ ಕನ್ನಡಿಗರನ್ನ ಅವಮಾನಿಸಿರುವುದು ಹೇಯ ಕೃತ್ಯ ಎಂದು ಆರೋಪಿಸಿದ್ದಾರೆ.
ನಮ್ಮ ರಾಜ್ಯದ ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ. ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ. ಇಂತಹ ಮಂಗಳಕರವಾದ ಸಂಕೇತಕ್ಕೆ ಅವಮಾನಿಸುವ ಅಚಾತುರ್ಯ ಎಸಗಿರುವ ಸಂಸ್ಥೆಯನ್ನು ಕ್ಷಮಿಸುವ ಮಾತೇ ಇಲ್ಲ. ಅವರ ವಿರುದ್ಧ ಕಾನೂನು ಸಮರ ಕಟ್ಟಿಟ್ಟಬುತ್ತಿ ಎಂದು ಆಕ್ರೋಶಗೊಂಡಿದ್ದಾರೆ.
ಈ ಮೂಲಕ ಎಲ್ಲಾ ಕನ್ನಡಿಗರು ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಅಮೆಜಾನ್ ಸಂಸ್ಥೆಗೂ ದೂರು ಸಲ್ಲಿಸುವಂತೆ ಕೋರಿದ್ದಾರೆ.