ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಜಿನ್ನಾ ಗೋಪುರಕ್ಕೆ ವೈಎಸ್ಆರ್ ಕಾಂಗ್ರೆಸ್ ಶಾಸಕರೊಬ್ಬರು ಮಂಗಳವಾರ ತ್ರಿವರ್ಣ ಬಣ್ಣ ಬಳಿದಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಈ ಗೋಪುರವು ಕೆಲವು ದಿನಗಳಿಂದ ವಿವಾದದಲ್ಲಿದ್ದು, ಭಾರತೀಯ ಜನತಾ ಪಕ್ಷವು ಅದರ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸುತ್ತಿದೆ.
ನಿಷೇಧಾಜ್ಞೆಗಳ ಹೊರತಾಗಿಯೂ ಗೋಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ಮೂವರನ್ನು ಜನವರಿ 26 ರಂದು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಮಂಗಳವಾರ ಗುಂಟೂರು ಪೂರ್ವ ಶಾಸಕ ಮೊಹಮ್ಮದ್ ಮುಸ್ತಫಾ ಈ ಕುರಿತು ಮಾತನಾಡಿ, ವಿವಿಧ ಗುಂಪುಗಳ ಮನವಿ ಮೇರೆಗೆ ಗೋಪುರವನ್ನು ತ್ರಿವರ್ಣ ಧ್ವಜದಿಂದ ಅಲಂಕರಿಸಲು ಮತ್ತು ಗೋಪುರದ ಬಳಿ ರಾಷ್ಟ್ರಧ್ವಜವನ್ನು ಹಾರಿಸಲು ಕಂಬವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅದಲ್ಲದೇ ಗುರುವಾರ ಜಿನ್ನಾ ಟವರ್ನಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪಿಟಿಐ ವರದಿಯ ಪ್ರಕಾರ, ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಜೆಪಿಯ ರಾಜ್ಯ ಘಟಕವು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಗೌರವಿಸಲು ಗೋಪುರದ ಹೆಸರನ್ನು ಬದಲಾಯಿಸಬೇಕೆಂದು ಒತ್ತಾಯಿಸಿತ್ತು. ವೈಎಸ್ಆರ್ಸಿ ಸರ್ಕಾರ ತಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ ಸ್ಮಾರಕವನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ, ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರನ್ನು ಆಂಧ್ರಪ್ರದೇಶ್ ನ ಗುಂಟೂರ್ ಶಾಸಕ ಮುಸ್ತಫಾ ತರಾಟೆಗೆ ತೆಗೆದುಕೊಂಡರು. ಕೋಮು ಘರ್ಷಣೆಯನ್ನು ಪ್ರಚೋದಿಸುವ ಬದಲು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ಬಿಜೆಪಿ ನಾಯಕರು ಭಾಗವಹಿಸಬೇಕು ಎಂದು ಅವರು ಎಎನ್ಐಗೆ ಉಲ್ಲೇಖಿಸಿದ್ದಾರೆ.
ಗಣರಾಜ್ಯೋತ್ಸವದ ಘಟನೆಯ ನಂತರ, ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದರು. ಮುಸ್ತಫಾ ಅವರು ಜಿಎಂಸಿ ಮೇಯರ್ ಕವಟಿ ಮನೋಹರ್ ನಾಯ್ಡು ಅವರೊಂದಿಗೆ ಮಂಗಳವಾರ ಸ್ಮಾರಕಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದರು.