ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಮಗಳು ಮೇಘಾ ಸಾಗರದ ಹಲವೆಡೆ ಇಂದು ಮತಯಾಚಿಸಿದರು. ಆನಂದಪುರದ ದಾಸಕೊಪ್ಪ ಗ್ರಾಮದಲ್ಲಿ, ಮತಯಾಚನೆಯ ಸಂದರ್ಭದಲ್ಲಿ ಹಿರಿಯರ ಕಾಲಿಗೆ ಬಿದ್ದು ತನ್ನ ತಂದೆ ಗೋಪಾಲಕೃಷ್ಣ ಬೇಳೂರಿಗೆ ಮತ ನೀಡುವಂತೆ ಬೇಡಿಕೊಂಡರು. ಗೋಪಾಲ್ ಬಗ್ಗೆ ಮತದಾರ ವಿಶ್ವಾಸದ ಮಾತುಗಳನ್ನ ಕೇಳಿ ಕಣ್ಣೀರು ಹಾಕಿ, ತಾನೂ ಸಹ ತನ್ನ ತಂದೆಯಂತೆಯೇ ಮೃದು ಮನಸ್ಕಳು, ತಂದೆ ತುಂಬಾ ಒಳ್ಳೇಯವರು, ಹಿಂದೆಂದೂ ಸಹ ಮತ ಯಾಚನೆಗೆ ನಾನು ಬಂದವಳಲ್ಲ ಈಗ ಬಂದಿದ್ದೇನೆ . ದಯವಿಟ್ಟು ಈ ಸಲ ಗೋಪಾಲಕೃಷ್ಣ ಬೇಳೂರ್ ನ್ನ ಗೆಲ್ಲಿಸಿಕೊಡಿ ಎಂದಳು.
ಸಾಗರದಲ್ಲಿ ಈಗಾಗಲೇ ಸ್ಟಾರ್ ಪ್ರಚಾರಕರಂತೆ ನಟ ಶಿವರಾಜ್ ಕುಮಾರ್ ಅವರನ್ನ ಕರೆತಂದು ಚುನಾವಣಾ ರ್ಯಾಲಿಗಳನ್ನ ಮಾಡಿಸಿರುವ ಗೋಪಾಲಕೃಷ್ಣ, ಚುನಾವಣಾ ಪ್ರಚಾರ ಜೋರಾಗಿ ನಡೆಸಿದ್ದಾರೆ. ಕಾಂಗ್ರೆಸ್ ಹಿರಿ-ಕಿರಿ ನಾಯಕರೂ ಕೂಡ ಅವರದ್ದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮೊದಲ ಪಟ್ಟಿಯಲ್ಲೇ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದ್ದ ಗೋಪಾಲಕೃಷ್ಣ ಚುನಾವಣೆಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅವರ ಎದುರಾಳಿ ಬಿಜೆಪಿ ಸ್ಪರ್ಧಿ ಹರತಾಳು ಹಾಲಪ್ಪ ಸಹಜವಾಗಿ ಅಭಿವೃದ್ಧಿ ಹೆಸರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಹಾಲಪ್ಪ ಮಗ ಚೇತನ್ ಈಗಾಗಲೇ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಎಲ್ಲೆಡೆ ಪ್ರಚಾರ, ಕಾರ್ಯಕರ್ತರ ಸಭೆ, ರಣತಂತ್ರ ಹೆಣೆಯುತ್ತಿದ್ದಾರೆ. ಆದರೂ ಸಾಗರದ ಮಟ್ಟಿಗೆ ಕಣ್ಣೀರಿನ ರಾಜಕಾರಣ ಲಾಭ ತಂದು ಕೊಡಬಲ್ಲದು ಎಂಬುದಕ್ಕೆ ಕಾಗೋಡು ತಿಮ್ಮಪ್ಪ ಉದಾಹರಣೆ ಇದೆ. ಗೋಪಾಲಕೃಷ್ಣ ಎದುರು ಎರಡು ಸಲ ಸೋತಿದ್ದ ತಿಮ್ಮಪ್ಪ ಪುನರಾಯ್ಕೆಯಾಗಲು ಕಾಗೋಡು ಪುತ್ರಿ ರಾಜನಂದಿನಿ ಕಣ್ಣೀರಿಡುತ್ತಾ ಜನರ ಮನಸ್ಸು ಗೆದ್ದಿದ್ದಳು. ದಶಕದ ನಂತರ ಗೋಪಾಲಕೃಷ್ಣ ಬೇಳೂರ್ ಪರ ಅವರ ಮಗಳೂ ಕೂಡ ಅಪ್ಪನಿಗೆ ಕಂಬನಿ ಸುರಿಸಿದ್ದಾಳೆ.