ಕೋವಿಡ್ ಸಂಕಷ್ಟದಿಂದ ದೇಶದಲ್ಲಿ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಇಂಧನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ವಿಪರೀತ ಏರುತ್ತಿದೆ. ಈ ನಡುವೆ ಕಳೆದ ಹದಿನಾಲ್ಕು ವರ್ಷಗಳಿಂದ ಏರಿಕೆಯಾಗದ ಬೆಂಕಿ ಪೊಟ್ಟಣದ ದರವೂ ಏರಲಿದೆ.
ಹೌದು. ಸರಕು ಸಾಗಾಣಿಕೆ ಹಾಗೂ ಕಚ್ಛಾ ವಸ್ತುಗಳ ದರ ಏರಿಕೆಯಿಂದಾಗಿ ಬೆಂಕಿ ಪೊಟ್ಟಣ ಕಂಪೆನಿಗಳು ಬೆಲೆ ಏರಿಸಲು ನಿರ್ಧರಿಸಿದೆ. 2007 ರಲ್ಲಿ ಬೆಂಕಿಪೊಟ್ಟಣದ ದರವು 50 ಪೈಸೆಯಿಂದ 1 ರುಪಾಯಿಗೆ ಏರಿಕೆಯಾಗಿದ್ದವು. ಅದಾಗಿ ಕಳೆದ 17 ವರ್ಷಗಳಿಂದಲೂ ಬೆಂಕಿ ಪೊಟ್ಟಣದಲ್ಲಿ ಯಾವುದೇ ದರ ಏರಿಕೆಯಾಗಿರಲಿಲ್ಲ.
ಐದು ಪ್ರಮುಖ ಉದ್ಯೋಗ ಒಕ್ಕೂಟಗಳ ಪ್ರತಿನಿಧಿಗಳು ಸರ್ವಾನುಮತದಿಂದ ಬೆಂಕಿ ಪೊಟ್ಟಣದ ಬೆಲೆಯನ್ನು 1 ರೂ.ನಿಂದ 2 ರೂ.ಗೆ ಹೆಚ್ಚಿಸಲು ನಿರ್ಣಯವನ್ನು ಕೈಗೊಂಡಿವೆ. ಮುಂದಿನ ಡಿಸೆಂಬರ್ 1 ರಿಂದ ನೂತನ ದರ ಜಾರಿಯಾಗಲಿದೆ.
ಬೆಂಕಿ ಪೊಟ್ಟಣದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ 14 ಕಚ್ಛಾ ವಸ್ತುಗಳ ಬೆಲೆ ಏರಿಕೆಯಾಗಿದೆ. . ಒಂದು ಕೆಜಿ ಕೆಂಪು ರಂಜಕ 425 ರೂ.ನಿಂದ 810 ರೂ.ಗೆ, ಮೇಣ 58 ರೂ.ನಿಂದ 80 ರೂ.ಗೆ, ಹೊರ ಬಾಕ್ಸ್ ಬೋರ್ಡ್ 36 ರೂ.ನಿಂದ 55 ರೂ.ಗೆ ಮತ್ತು ಒಳ ಪೆಟ್ಟಿಗೆ ಬೋರ್ಡ್ 32 ರೂ.ನಿಂದ 58 ರೂ.ಗೆ ಏರಿಕೆಯಾಗಿದೆ.
ಅಕ್ಟೋಬರ್ 10ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತಯಾರಕರು 600 ಬೆಂಕಿಪೆಟ್ಟಿಗೆಗಳ ಒಂದು ಬಂಡಲ್ ಅನ್ನು 270 ರಿಂದ 300 ರೂ.ಗೆ ಮಾರಾಟ ಮಾಡುತ್ತಿದ್ದಾರೆ. “ನಾವು ನಮ್ಮ ಘಟಕಗಳಿಂದ ಮಾರಾಟ ಬೆಲೆಯನ್ನು 60% ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ. 12% ಜಿಎಸ್ಟಿ ಮತ್ತು ಸಾರಿಗೆ ವೆಚ್ಚವನ್ನು ಹೊರತುಪಡಿಸಿ ರೂ 430 ರಿಂದ ರೂ 480 ರ ವರೆಗೆ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಕಿ ಪೊಟ್ಟಣ ತಯಾರಿಕ ಉದ್ಯಮವು ತಮಿಳುನಾಡಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಅನೇಕ ಕಾರ್ಮಿಕರು ಉತ್ತಮ ವೇತನ ನೀಡುವ MGNREGA ಯೋಜನೆಯಡಿ ಕೆಲಸ ಮಾಡಲು ಆದ್ಯತೆ ನೀಡುತ್ತಿರುವುದರಿಂದ ಕಾರ್ಮಿಕರ ಕೊರತೆಯನ್ನೂ ಈ ಉದ್ಯಮಗಳು ಎದುರಿಸುತ್ತಿದೆ.