
ಬೆಂಗಳೂರು:ದರ್ಶನ್‌ಗೆ ಜಾಮೀನು ಕೊಡಿಸಲು ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಹೈಕೋರ್ಟ್‌ನಲ್ಲಿ ಇಂದು ವಾದ ಮಂಡಿಸಿದ್ದಾರೆ. ತನಿಖೆಯಲ್ಲಿನ ಕೆಲವು ಲೋಪಗಳ ಬಗ್ಗೆ ನಾಗೇಶ್ ಪ್ರಸ್ತಾಪಿಸಿದ್ದಾರೆ. ವಿಚಾರಣೆಯನ್ನು ಮತ್ತೆ ನ.29ಕ್ಕೆ ಮುಂದೂಡಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಾದವನ್ನು ಆಲಿಸಿದ ನ್ಯಾ.ವಿಶ್ವಜೀತ್ ಶೆಟ್ಟಿ ಅವರು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಗುರುವಾರ (ನ.28 ರಂದು) ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ನಡೆದಿದೆ.ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಹಿಂದಿನಂತೆಯೇ ಈ ಸಲಿಯೂ ಪ್ರಬಲ ಅಂಶವನ್ನು ಮುಂದಿಟ್ಟುಕೊಂಡು ವಾದವನ್ನು ಮುಂದುವರೆಸಿದ್ದಾರೆ.

ರೇಣುಕಾಸ್ವಾಮಿಯನ್ನು ಬಲವಂತವಾಗಿ ಕಿಡ್ನ್ಯಾಪ್ ಮಾಡಿಲ್ಲ. ಕೊಲೆ ಮಾಡುವ ಉದ್ದೇಶದಿಂದ ಆತನ ಅಪಹರಣ ನಡೆದಿಲ್ಲ. ಆತನೇ ಬಾರ್‌ವವೊಂದಕ್ಕೆ ಹಣ ಪಾವತಿಸಿದ್ದಾನೆ. ಹಾಗಾಗಿ ಇದನ್ನು ಒತ್ತಾಯಪೂರ್ವಕವಾಗಿ ನಡೆದ ಅಪಹರಣವೆಂದು ಹೇಳಲ್ಲು ಆಗುವುದಿಲ್ಲ. ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆ ಇದೆ ಎಂದಿದ್ದಾರೆ. ಆದರೆ ಅದನ್ನು ಸರ್ಫ್‌ನಲ್ಲಿ ಹಾಕಿ ಕುಕ್ಕಿ ಕುಕ್ಕಿ ಒಗೆದಿದ್ದಾರೆ. ಹೀಗೆ ಮಾಡಿದರೆ ರಕ್ತದ ಕಲೆ ಇರುವುದು ಹೇಗೆ? ಎನ್ನುವ ಕೆಲ ಪ್ರಬಲ ಅಂಶಗಳನ್ನಿಟ್ಟುಕೊಂಡು ಈ ಹಿಂದಿನ ವಾದದಲ್ಲಿ ನಾಗೇಶ್ ಉಲ್ಲೇಖಿಸಿದ್ದರು.
ಗುರುವಾರ ಕೂಡ ಇದೇ ರೀತಿಯ ಅಂಶಗಳೊಂದಿಗೆ ವಾದವನ್ನು ಮುಂದುವರೆಸಿದ್ದಾರೆ.ಪ್ರಾಸಿಕ್ಯೂಷನ್‌ನವರು ನರೇಂದ್ರ ಸಿಂಗ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಸೇರಿ 6 ಜನರನ್ನು ಪ್ರತ್ಯಕ್ಷದರ್ಶಿಗಳೆಂದು ಹೆಸರಿಸಿದ್ದಾರೆ. ನರೇಂದ್ರ ಸಿಂಗ್ ನ ಸಿಆರ್ ಪಿಸಿ 164ರ ಅಡಿ ಹೇಳಿಕೆ ದಾಖಲಿಸಿದ್ದಾರೆ. ಈತ ಹಲ್ಲೆಯ ಬಗ್ಗೆ ಏನನ್ನೂ ಹೇಳಿಲ್ಲ. 164ರ ಹೇಳಿಕೆಗೆ 161ರ ಹೇಳಿಕೆಗಿಂತ ಹೆಚ್ಚಿನ ಮೌಲ್ಯವಿದೆ.
ಪ್ರತ್ಯಕ್ಷದರ್ಶಿ ಮಧುಸೂದನ್ ಹೇಳಿಕೆಯನ್ನ ಇಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ಕಾರು ಬರುತ್ತವೆ. ಅದರಲ್ಲಿ ದರ್ಶನ್ ಸರ್ ಇರ್ತಾರೆ. ಅಲ್ಲಿಗೆ ಹೋಗ್ಬೇಡಿ ಎಂದಿದ್ದೆ. ನಂತರ ಸಂಜೆ ಮನೆಗೆ ಹೋಗಿದ್ದೆ ಎಂದು ಮಧುಸೂದನ್ ಹೇಳಿಕೆ ನೀಡಿದ್ದಾರೆ. ಕೊಲೆಯಾದ ಬಗ್ಗೆ 10ನೇ ತಾರೀಕು ಮೊಬೈಲ್ ನಲ್ಲಿ ನೋಡಿಯೇ ತಿಳಿದುಕೊಂಡೆ ಎಂದು ಅವರು ಹೇಳಿದ್ದಾರೆ ಎಂದು ನಾಗೇಶ್ ವಾದದಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಜಡ್ಜ್ ವಿಶ್ವಜಿತ್ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಕೇಳಿದ್ದಾರೆ. ಎಂಆರ್ ಐ ಸ್ಕ್ಯಾನ್ ಆಗಿದೆ. ಬಿಪಿ ವ್ಯತ್ಯಾಸವಾಗುತ್ತಿದೆ. ಅದು ಸರಿಯಾದ ಬಳಿಕವಷ್ಟೇ ಮುಂದಿನ ಚಿಕಿತ್ಸೆ. ಈ ಕಾರಣದಿಂದ ಸರ್ಜರಿ ವಿಳಂಬವಾಗುತ್ತಿದೆ ಎಂದು ನಾಗೇಶ್ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ದರ್ಶನ್ ಮ್ಯಾನೇಜರ್ ನಾಗರಾಜು ಪರ ವಕೀಲರು ವಾದ ಮಂಡಸಿದ್ದಾರೆ.ವಿಚಾರಣೆಯನ್ನು ಶುಕ್ರವಾರ(ನ.29) ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ.
ದರ್ಶನ್ ಅವರಿಗೆ ಸದ್ಯ ಅನಾರೋಗ್ಯ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದುವರೆಗೆ ಸರ್ಜರಿ ಮಾಡಿಸಿಕೊಂಡಿಲ್ಲ.