ತಿರುಪತಿಯ ಶ್ರೀನಿವಾಸನ ಸನ್ನಿಧಿ ಸಮಸ್ಥ ಹಿಂದುಗಳ ಶ್ರದ್ಧಾ ಕೇಂದ್ರದಲ್ಲಿನ ಪ್ರಸಾದದ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಿಕೆ ನಡೆದಿದೆ ಎನ್ನುವ ವಿಷಯ ಬಹಳ ಅಘಾತಕಾರಿಯಾದುದು. ಇದನ್ನು ನಾವು ಒಕ್ಕೂರಿಲಿನಿಂದ ಖಂಡಿಸುತ್ತೇವೆ ಎಂದು ಮಂತ್ರಾಲಯದ ಸುಬುಧೇಂದ್ರ ಶ್ರೀಪಾದಂಗಳು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಸಮಗ್ರ ತನಿಖೆಯಾಗಿ ಯಾರ ಅಚಾತುರ್ಯದಿಂದ ಮತ್ತು ಎಂದಿನಿoದ ಇದು ನಡೆದಿದೆ ಎನ್ನುವುದನ್ನು ಪತ್ತೆ ಹಚ್ಚಿ ತಪ್ಪು ಎಸಗಿದವರಿಗೆ ಕಾನೂನಾತ್ಮಕ ಶಿಕ್ಷೆ ಆಗುವಂತಾಗಬೇಕು. ಈ ವಿಷಯವಾಗಿ ಪ್ರಧಾನಮಂತ್ರಿ ಗಮನಹರಿಸಿರುವುದು ಮತ್ತು ಆಂದ್ರದ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿ ತನಿಖೆಯನ್ನು ಮಾಡಿಸುತ್ತಿರುವುದು ಸ್ವಾಗತಾಹ್ವಾದುದು ಎಂದರು.
ಸನಾತನ ಧರ್ಮ ಉಳಿವಿಗಾಗಿ ಸನಾತನ ಧರ್ಮರಾಷ್ಟ್ರಪಾಲನಾ ಸಮಿತಿ ರಚನೆ ಆಗಬೇಕೆಂದು ಹೇಳಿರುವ ಆಂದ್ರದ ಉಪ ಮುಖ್ಯಮಂತ್ರಿ ಪವನಕಲ್ಯಾಣ ಅವರ ಮಾತಿಗೆ ನಮ್ಮದು ಸಹಮತವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ಊರುಗಳ ಪ್ರಮುಖರಿಂದ ಮಠ, ಮಾನ್ಯಗಳ, ಶ್ರದ್ಧಾ ಕೇಂದ್ರಗಳ ನಿರ್ವಹಣೆ ಮಾಡಲಾಗುತ್ತಿತ್ತು. ಆಗ ಈ ಸ್ಥಳಗಳಲ್ಲಿ ಶ್ರದ್ಧಾ, ಭಕ್ತಿಯಿಂದ ಎಲ್ಲ ಕಾರ್ಯಗಳು ಸುಗಮವಾಗಿ ಜರಗುತ್ತಿದ್ದವು. ಆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಡೆಯುತ್ತಿದ್ದವು. ಹೀಗಾಗಿ ಈ ಎಲ್ಲ ಮಠ ಮಾನ್ಯಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿ ಸ್ಥಳೀಯ ಆಡಳಿತಕ್ಕೆ ನೀಡಬೇಕೆಂದು ಆಗ್ರಹಿಸಿದರು.
ಮಠ, ಮಾನ್ಯಗಳನ್ನು ಸ್ವಾಧೀನ ಮಾಡಿಕೊಂಡು ಆ ಶ್ರದ್ಧಾಕೇಂದ್ರಗಳಲ್ಲಿ ಸರ್ಕಾರ ಆಡಳಿತ ಮಾಡಬೇಕೆಂದು ಸಂವಿಧಾನದಲ್ಲಿ ಬಿ.ಆರ್.ಅಂಬೇಡ್ಕರ ಅವರು ಎಲ್ಲಿಯೂ ಉಲ್ಲೇಖಿಸಿಲ್ಲ. ಆದ್ದರಿಂದ ಮಠ ಮಾನ್ಯಗಳಲ್ಲಿ ಸರ್ಕಾರ ಮತ್ತು ರಾಜಕೀಯ ಪ್ರವೇಶ ಮಾಡುವುದು ಸೂಕ್ತವಲ್ಲ. ಆದ್ದರಿಂದ ಮಠ, ಮಾನ್ಯಗಳು, ಶ್ರದ್ಧಾ ಕೇಂದ್ರಗಳನ್ನು ಸರ್ಕಾರದ ಆಧೀನದಿಂದ ಮುಕ್ತಗೊಳಿಸುವುದು ಬಹಳ ಸೂಕ್ತ ಮತ್ತು ಅವಶ್ಯಕವಾದುದು ಎಂದು ಹೇಳಿದರು.ತಿರುಪತಿಯಲ್ಲಿನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಿಕೆಯಾಗಿದ್ದರೆ ದೇಗುಲವನ್ನು ಶುದ್ಧೀಕರಿಸುವುದಕ್ಕೆ ನಮ್ಮ ಬೆಂಬಲವಿದೆ. ಆ ಕಾರ್ಯದಲ್ಲಿ ನಾವೂ ಭಾಗವಹಿಸುತ್ತೇವೆ ಎಂದರು.