‘ಕಾವೇರಿಗೆ ನಾವು ಪ್ರಾಣ ಕೊಡೋಕೆ ಸಿದ್ಧ’ ಅಂತ ಅನೇಕರ ಬಾಯಲ್ಲಿ ಕೇಳುತ್ತಿರುತ್ತೇವೆ. ಈಗ ‘ನೆನಪಿರಲಿ’ ಪ್ರೇಮ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ರಕ್ತದಲ್ಲಿ ಪತ್ರ ಬರೆದಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಈ ಹಿಂದೆ ನಾನು ಪ್ರೀತಿಸಿದ ಹುಡುಗಿ ಜ್ಯೋತಿಗೋಸ್ಕರ ರಕ್ತದಲ್ಲಿ ಪತ್ರ ಬರೆದಿದ್ದೆ ಎಂದು ಪ್ರೇಮ್ ಹೇಳಿದ್ದರು. ಈಗ ಅವರಯ ಕಾವೇರಿಗೋಸ್ಕರ ಪತ್ರ ಬರೆದಿದ್ದಾರೆ. “ಕಾವೇರಿ, ಕರ್ನಾಟಕಕ್ಕೆ ದಯವಿಟ್ಟು ನ್ಯಾಯ ಕೊಡಿ. ಕಾವೇರಿ ನಮ್ಮದು” ಎಂದು ಅವರು ರಕ್ತದಲ್ಲಿ ಪತ್ರ ಬರೆದಿದ್ದು, “ಸಿದ್ಧ ಕಣೋ ಪ್ರಾಣ ಕೊಡೋಕೆ, ಈ ಜಲ ನೆಲ ನಾಡು ನುಡಿಗೆ” ಎಂದು ಅಡಿಬರಹ ನೀಡಿದ್ದಾರೆ. ಹಾಗೆಯೇ ಆ ಪತ್ರದಲ್ಲಿ ಅವರ ಹಸ್ತದ ಅಚ್ಚನ್ನು ರಕ್ತದಲ್ಲಿ ನಮೂದಿಸಿದ್ದಾರೆ.