ಚುನಾವಣೆಯಲ್ಲಿ ಸಿನಿಮಾ ರಂಗದ ದಿಗ್ಗಜರು ತಮ್ಮ ನೆಚ್ಚಿನ ಅಭ್ಯರ್ಥಿ ಹಾಗೂ ಪಕ್ಷಗಳ ಪರ ಮತಯಾಚನೆ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಘೋಷಿಸಿದ್ದಾರೆ.

ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡ ಕಾರಣಕ್ಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಈ ಬಗ್ಗೆ ಅಭಿಮಾನಿಗಳಲ್ಲೂ ಪರ ಹಾಗೂ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇನ್ನು ಕಿಚ್ಚ ಸುದೀಪ್ ನಡೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.

“ನೋಡ್ರಪ್ಪ, ನಿಮ್ ಮಾಮನೊ, ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%, 20% ಇಲ್ಲ 30 % ಕೊಡಿ. ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೇಡಿ. ಅಷ್ಟೆ..ಅಷ್ಟೇ. ನೀವು ಈಗ ಹೊರಲೇಬೇಕಾದದ್ದು ಬೇರೆ ಬಣ್ಣದ ಲೋಕದ ಭಾರ” ಅಂತ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಇನ್ನು ಸುದೀಪ್ ಬಿಜೆಪಿ ಪರವಾಗಿ ನಿಂತಿರೋದ್ರಿಂದ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಪರವಾಗಿಯೂ ಸ್ಟಾರ್ ನಟರನ್ನ ಕರೆತರುವ ಯತ್ನಗಳನ್ನ ಆರಂಭಿಸಿವೆ ಎನ್ನಲಾಗ್ತಿದೆ. ಈ ಬಗ್ಗೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪ್ರತಿಕಿಯಿಸಿದ್ದು, ʻಅಪಾರವಾದ ಅಭಿಮಾನಿ ಬಳಗ ಇರುವ ಸ್ಟಾರ್ ನಟರು, ಸೆಲೆಬ್ರಿಟಿಗಳು ಚುನಾವಣೆ ಸಂದರ್ಭದಲ್ಲಿ ಯಾವುದಾದ್ರೂ ರಾಜಕೀಯ ಪಕ್ಷದ ಪರ ಪ್ರಚಾರ ಮಾಡುವುದು ಸಹಜ.

ಸುದೀಪ್ ಬಿಜೆಪಿಗೆ ಬೆಂಬಲ ನೀಡುತ್ತಿರೋದಾಗಿ ಹೇಳಿದ್ದಾರೆ. ನಾನು ಅವರ ಹೇಳಿಕೆಗಳನ್ನ ಗಮನಿಸಿದ್ದೇನೆ. ಬಿಜೆಪಿ ಅನ್ನೋದಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಅವರ ಮೇಲಿರುವ ಭಾಂದವ್ಯ, ಸಂಬಂಧದಿಂದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದಿದ್ದಾರೆ.