ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ನಾಗಭೂಷಣ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಶನಿವಾರ (ಅಕ್ಟೋಬರ್ 30) ಕೋಣನಕುಂಟೆ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್ ಅವರ ಕಾರು ಡಿಕ್ಕಿ ಆಗಿದೆ. ಈ ಅಪಘಾತದಲ್ಲಿ 48 ವರ್ಷದ ಪ್ರೇಮಾ ಎಸ್. ನಿಧನರಾಗಿದ್ದಾರೆ. ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ದೂರು ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ನಾಗಭೂಷಣ್ ಹೇಳಿಕೆ:
‘ಅಕ್ಟೋಬರ್ 30ರಂದು ನಾನು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ, ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ಸು ಜೆ.ಪಿ. ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ಟೋಸ್ ಕಾರ್ ನಂಬರ್ ಕೆಎ-09 ಎಂಜಿ 5335ರ ವಾಹನವನ್ನು ಚಾಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗಲು ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್ಮೆಂಟ್ ಹತ್ತಿರ ರಾತ್ರಿ ಸುಮಾರು 9.45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಪುಟ್ ಪಾತ್ ಮೇಲಿಂದ ರಸ್ತೆಯ ಕೆಳಗೆ ಇಳಿದು ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದನು’ ಎಂದು ನಾಗಭೂಷಣ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.