ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇದರ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ಮೇಲೆ ಹುಲಿ ಉಗುರು ಧರಿಸಿರುವ ಆರೋಪ ಕೇಳಿಬಂದಿದೆ.
ಹೌದು, ಭಾನುವಾರ ರಾತ್ರಿಯಷ್ಟೇ ಬಿಗ್‌ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ರಾತ್ರಿಯಿಡೀ ವಿಚಾರಣೆ ನಡೆಸಿ ಮಧ್ಯಾಹ್ನದ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ವಿಚಾರಣೆ ನಡೆಸಿಸಿ ಸಂತೋಷ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದರ ನಡುವೆ ಈಗ ಜಗ್ಗೇಶ್ ಕೂಡ ಹುಲಿ ಉಗುರು ವಿಷಯವಾಗಿ ದೊಡ್ಡ ಸುದ್ದಿಯಲ್ಲಿ ಇದ್ದಾರೆ.
ನಟ ಜಗ್ಗೇಶ್ ಕೂಡ ತಮ್ಮ ಕೊರಳಿನಲ್ಲಿ ಹುಲಿ ಉಗುರಿನ ಸರ ಹಾಕಿಕೊಂಡಿದ್ದಾರೆ. ಈ ಬಗ್ಗೆ ಖುದ್ದಾಗಿ ಸ್ವತಃ ಜಗ್ಗೇಶ್ ನ್ಯೂಸ್ ಪಸ್ಟ್ ಕನ್ನಡ ಎಂಬ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಹಲವರು, ವರ್ತೂರ್ ಸಂತೋಷ್ಗೆ ಒಂದು ನ್ಯಾಯ ಜಗ್ಗೇಶ್ ಗೆ ಒಂದು ನ್ಯಾಯ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಂಧನ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.

ಸಂದರ್ಶನದಲ್ಲಿ ನಟ ಜಗ್ಗೇಶ್ “ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು” ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.