ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy) ಹೈಕೋರ್ಟ್ ನಿಂದ (Highcourt) ಜಾಮೀನು ಪಡೆದು ಡೆವಿಲ್ (Devil) ಸಿನಿಮಾದ ಚಿತ್ರೀಕರಣ ಬ್ಯುಸಿಯಾಗಿರುವ ನಟ ದರ್ಶನ್ (Actor darshan) ಪಾಲಿಗೆ ಇವತ್ತು ಡಿಸೈಡಿಂಗ್ ಡೇ ಆಗಲಿದೆ. ಹೌದು (ಜು.22) ಇಂದು ಸುಪ್ರೀಂಕೋರ್ಟ್‌ನಲ್ಲಿ ನಟ ದರ್ಶನ್ ಬೇಲ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ನಟ ದರ್ಶನ್ ಸೇರಿದಂತೆ 7 ಜನರ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಮುಂದುವರಿಯಲಿದೆ. ಈಗಾಗಲೇ ಸರ್ಕಾರದ ಪರ ವಕೀಲರ ವಾದ ಆಲಿಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಜಾಮೀನು ನೀಡಲು ನೀಡಿರುವ ಕಾರಣಗಳು ಸಮಂಜಸವಾಗಿಲ್ಲ ಎಂದು ಹೇಳಿದೆ.

ಈ ಕೇಸ್ ನ ಆರೋಪಿಗಳೈಗೆ ಜಾಮೀನು ನೀಡುವಲ್ಲಿ ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಹೈಕೋರ್ಟ್ ನ ಆದೇಶದ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದಿನ ಜುಲೈ 17 ರ ವಿಚಾರಣೆಯಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇದು ದರ್ಶನ್ ಪಾಲಿಗೆ ಮುಳುವಾಗಬಹುದು ಎನ್ನಲಾಗಿದೆ.
ಇವತ್ತು ನಟ ದರ್ಶನ್ ಪರ ವಕೀಲರ ವಾದ ಆಲಿಸಿ, ದರ್ಶನ್ ಬೇಲ್ ಸಂಬಂಧ ಇವತ್ತೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ ಬೇಲ್ ರದ್ದಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬ ಕುತೂಹಲ ಮನೆ ಮಾಡಿದ್ದು ಆರೋಪಿಗಳ ಚಿತ್ತ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ.