ಚಿತ್ರೋದ್ಯಮದಲ್ಲಿನ ಸಂಬಂಧಗಳು ಸಾಮಾನ್ಯವಾಗಿ ವ್ಯಾವಹಾರಿಕ ಸಂಬಂಧವಾಗಿರುತ್ತದೆ. ವರ್ಷದಲ್ಲಿ ಹಲವು ಬಾರಿ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತೇವೆ, ಅಲ್ಲಿ ಇಲ್ಲಿ ಸಿಕ್ಕಾಗ ನಗುತ್ತೇವೆ, ಹಾಡುಗಳನ್ನು ಹಾಡಿಕೊಳ್ಳುತ್ತೇವೆ, ಒಂದೆರಡು ಡೈಲಾಗ್ ಹೇಳುತ್ತೇವೆ, ಹೆಚ್ಚೆಂದರೆ ಒಟ್ಟಿಗೆ ಕೆಲಸ ಮಾಡುತ್ತೇವೆ. ನಂತರ ಬೇರೆಯಾಗುತ್ತೇವೆ.
ಬಹಳ ವಿರಳವಾಗಿ ಒಂದು ಭಾವನಾತ್ಮಕ ಅಥವಾ ಮಮತೆಯಿಂದ ಕೂಡಿದ ಸಂಬಂಧ ಹುಟ್ಟಿಕೊಳ್ಳುತ್ತದೆ. ಅಪ್ಪು ಸರ್ ( ಪುನೀತ್ ರಾಜ್ಕುಮಾರ್ ) ಅವರೊಂದಿಗೆ 13 ವರ್ಷಗಳ ಕಾಲ ಇಂತಹ ಒಂದು ಅರ್ಥಪೂರ್ಣ ಸಂಬಂಧವನ್ನು ಹೊಂದಿರಲು ನಾನು ಬಹಳ ಅದೃಷ್ಟಶಾಲಿಯಾಗಿದ್ದೆ. ಕೇವಲ ಒಬ್ಬ ಒಳ್ಳೆಯ ಸ್ನೇಹಿತನಷ್ಟೇ ಅಲ್ಲದೇ, ನನ್ನ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸಿ, ನನ್ನ ಹಿರಿಯ ಸಹೋದರನ ಜಾಗದಲ್ಲಿ ನಿಂತು, ವಿಶೇಷವಾಗಿ ಅವರ ನೆಚ್ಚಿನ ಹಾದಿಗಳಲ್ಲಿ ನಾನು ನಡೆಯದಿದ್ದರೂ ನನ್ನ ದಾರಿಯಲ್ಲಿ ನಡೆಯುವುದಕ್ಕೆ ನನಗೆ ಮಾರ್ಗದರ್ಶನ ನೀಡುತ್ತಿದ್ದರು.
ಅಪ್ಪು ಸರ್ ಅವರೊಂದಿಗಿನ ನನ್ನ ಸಂಪರ್ಕವು ಬಹಳ ಹಿಂದಿನದು, ನನ್ನ ಬಾಲ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿದ್ದಾಗಿನಿಂದದ್ದು. ಪೌರಾಣಿಕ ಚಿತ್ರವಾದ ‘ ಭಕ್ತ ಪ್ರಹ್ಲಾದ’ ದಲ್ಲಿ ಹಿರಣ್ಯಕಶಿಪು ಮತ್ತು ಆತನ ಪುತ್ರನ ನಡುವಿನ ಸಂಭಾಷಣೆಯನ್ನು, ನಾನು 7 ವರ್ಷದವನಾಗಿದ್ದಾಗ ನಾಡಿನಾದ್ಯಂತ ನಾನಾ ಕನ್ನಡ ವೇದಿಕೆಗಳಲ್ಲಿ ಪ್ರದರ್ಶಿಸುತ್ತಿದೆ. ಆ ಸಮಯದಲ್ಲಿ ‘ ಅಪ್ಪು ‘ ಸರ್ ಎಂದರೆ ಯಾರೆಂಬುದನ್ನೂ ತಿಳಿಯದೆ ‘ ಪ್ರಹ್ಲಾದ ‘ ಎಂಬ ಅಡ್ಡಹೆಸರನ್ನು ಗಳಿಸಿಕೊಂಡಿದ್ದೆ. 1985 ರಲ್ಲೀ ಅಪ್ಪು ಸರ್ ಒಬ್ಬ ಬಾಲ ಕಲಾವಿದನಾಗಿ ಆ ಪಾತ್ರವನ್ನು ಸಲೀಸಾಗಿ ಅಭಿನಯಿಸಿದ್ದರು. ಚಿತ್ರರಂಗಕ್ಕೆ ನಾನು ಪ್ರವೇಶಿಸಿದ ನಂತರ ಅಪ್ಪು ಸರ್ ಅವರ ಅಮೆರಿಕಾದ ಪರಿಚಯಸ್ಥರೊಬ್ಬರು ಅವರಿಗೆ ನನ್ನ ಅಡ್ಡ ಹೆಸರಿನ ಬಗ್ಗೆ ಹೇಳಿದ್ದರು ಎಂಬ ವಿಷಯ ನನಗೆ ತಿಳಿದಿರಲಿಲ್ಲ – ಆ ವಿಷಯ ನನಗೆ ತಿಳಿದದ್ದೇ 2020ರ ನನ್ನ ಮದುವೆಯ ಸಂದರ್ಭದಲ್ಲಿ, ಅಪ್ಪು ಸರ್ ಅವರನ್ನು ನನ್ನ ವಿವಾಹಕ್ಕೆ ಆಹ್ವಾನಿಸಿದಾಗ. ನನ್ನ ಅಡ್ಡ ಹೆಸರಿನ ಬಗ್ಗೆ ಆ ದಿನ ಅವರು ಒಂದು ಪ್ರೀತಿಯ, ಸಾಂತ್ವನದ ನಗುವಿನೊಂದಿಗೆ ಮಾತಾಡಿದರು.
ಅವರೊಂದಿಗಿನ ನನ್ನ ವಸ್ತುನಿಷ್ಠ ಪಯಣಕ್ಕೆ ಅಡಿಪಾಯ ಹಾಕಿದ ಒಂದು ನಿರ್ದಿಷ್ಟ ಕ್ಷಣವನ್ನು ವಿವರಸಬೇಕೆಂದರೆ, ಅದು ಫೆಬ್ರವರಿ, 2009ರ ‘ ಅಮೃತ ಮಹೋತ್ಸವ ‘ ಸಮಾರಂಭದ ಪೂರ್ವಾಭ್ಯಾಸದ ಸಮದಲ್ಲಿ ನಡೆದದ್ದು. ಅದು ನನ್ನ ಎರಡನೇ ಚಿತ್ರವಾದ ‘ ಬಿರುಗಾಳಿ ‘ ಯ ಬಿಡುಗಡೆಯ ಸಮಯವೂ ಹೌದು. ಹೆಚ್ಚು ಕಡಿಮೆ ನಾವು 50 ಮಂದಿ ಇದ್ದೆವು, ನೆಲದ ಮೇಲೆ ಕುಳಿತುಕೊಂಡು ನಮ್ಮ ನೃತ್ಯವನ್ನು ಅಭ್ಯಾಸ ಮಾಡುವ ಸರದಿಗಾಗಿ ಕಾಯುತ್ತಾ ಇದ್ದೆವು. ಅಪ್ಪು ಸರ್ ಅವರ ಸರದಿ ಬಂದಾಗ, ಕೈಯಲ್ಲಿ ಫೋನ್ ಹಿಡಿದು ಎದ್ದು ನಿಂತು, ಪ್ರಶ್ನಾರ್ಥಕವಾಗಿ ಅಲ್ಲಿ ಕುಳಿತ ಎಲ್ಲರನ್ನೂ ನೋಡ ತೊಡಗಿದರು. ಅವರು ತಡ ಮಾಡುತ್ತಿರುವುದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಾ ಕುಳಿತಿದ್ದ ನನ್ನೆಡೆಗೆ ಬಂದರು – ಚಿತ್ರರಂಗಕ್ಕಷ್ಟೇ ಅಲ್ಲದೇ ಕರ್ನಾಟಕಕ್ಕೇ ಹೊಸಬನಾಗಿದ್ದ ನನ್ನ ಬಳಿ – ಬಲು ಸುಲಭವಾಗಿ ಅವರ ಫೋನನ್ನು ಇಟ್ಟು, ಡಾನ್ಸ್ ಫ್ಲೋರ್ನತ್ತ ಹೆಜ್ಜೆ ಹಾಕಿದರು. ಅಪ್ಪು ಸರ್ ಅವರಿಗೆ ನನ್ನ ಮೇಲೆ ನಂಬಿಕೆಯಿದೆ ಎಂಬ ಸತ್ಯ ನಂಗೆ ಆ ಕ್ಷಣಕ್ಕೆ ತಿಳಿದು ಹೋಯಿತು, ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು – ಕೇವಲ ಅವರ ಫೋನಿನ ವಿಚಾರವಾಗಿಯಲ್ಲದೇ, ಒಟ್ಟಾರೆ ಜೀವನದಲ್ಲಿಯೂ ಕೂಡ.
ಪೂರ್ವಾಭ್ಯಾಸ ನಡೆಯುತ್ತಿದ್ದ ಒಂದು ವಾರದ ಅವಧಿಯಲ್ಲಿ, ಅಪ್ಪು ಸರ್ ಅವರೊಂದಿಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದೆ, ಶ್ರದ್ಧಾಪೂರ್ವಕವಾದ ಬಾಂಧವ್ಯ ನಮ್ಮಿಬ್ಬರ ನಡುವೆ ಬೆಳೆಯಿತು. ಅದೇ ವರ್ಷದ ಕೊನೆಯಲ್ಲಿ ಅವರ ‘ ರಾಮ್ ‘ ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸಲು ಒಪ್ಪಿಕೊಂಡೆ. ರಾಕ್ಲೈನ್ ಸ್ಟುಡಿಯೋದಲ್ಲಿನ ಸೆಟ್ನಲ್ಲಿದ್ದಾಗ, ನನ್ನ ಮನೆಯು ಸದಾಶಿವನಗರದ ಹತ್ತಿರವೇ ಇದ್ದ ಬಡಾವಣೆಯಲ್ಲಿ ಇದ್ದ ಕಾರಣಕ್ಕೆ, ಅವರು ಅಲ್ಲಿ ಹೋಗುತ್ತಿದ್ದ ಒಂದು ಜಿಮ್ಗೆ ಸೇರಿಕೊಳ್ಳಲು ಹೇಳಿದರು. 2012 ರ ಶುರುವಿನಲ್ಲಿಯೇ ನಾನು ಅವರು ಹೋಗುತ್ತಿದ್ದ ಜಿಮ್ಮಿಗೆ ಸೇರಿದೆ.
ಅದೇ ವರ್ಷದ ಕೊನೆಯಲ್ಲಿ, ನಾನು ನನ್ನ ಮೊದಲ ಹೋರಾಟವನ್ನು ಮುನ್ನಡೆಸಿದೆ – ಕರಾವಳಿ ಕರ್ನಾಟಕದಾದ್ಯಂತ ಎಂಡೋಸಲ್ಫಾನ್ ಕೀಟನಾಶಕ ಸಂತ್ರಸ್ತರಿಗೆ, ಸರ್ಕಾರದ ವತಿಯಿಂದ ಸೌಲಭ್ಯಗಳು ಸಿಗಬೇಕೆಂಬ ಕಾರಣಕ್ಕೆ ಮಾಡುತ್ತಿದ್ದ ಹೊರಾಟವದು. ಸಾಮಾಜಿಕ ಚಳುವಳಿಗಳ ಬಗ್ಗೆ ನನ್ನ ತಿಳುವಳಿಕೆಯು ಕೇವಲ ಇತಿಹಾಸ ಪುಸ್ತಕಗಳಿಗೆ ಮೀಸಲಾಗಿತ್ತು, ಆದ್ದರಿಂದ ನಾನು ಅಪ್ಪು ಸರ್ ಅವರ ಮಾರ್ಗದರ್ಶನಕ್ಕಾಗಿ ಮೊದಲ ಬಾರಿ ಅವರ ಮನೆಗೆ ಭೇಟಿ ನೀಡಿದೆ. ಎಂಡೋಸಲ್ಫನ್ ಬಲಿಪಶುಗಳ ವಿಡಿಯೋವನ್ನು ಅವರ ಲ್ಯಾಪ್ಟಾಪ್ನಲ್ಲಿ ನೋಡಿದ ನಂತರ, ಮಾನವೀಯ ಉದ್ದೇಶಕ್ಕೆ ಬೆಂಬಲವಾಗಿ ಅವರು ಎಲ್ಲಿಗೆ ಬೇಕಾದರೂ ಬರಲು ಒಪ್ಪಿಕೊಂಡರು. ನನಗೂ ಧೈರ್ಯ ಬಂದಿತು. 6 ತಿಂಗಳ ನಂತರ ನಾವು ಆ ಹೋರಾಟದಲ್ಲಿ ಜಯ ಸಾಧಿಸಿದೆವು,ಕರ್ನಾಟಕ ಸರ್ಕಾರವು ಸಂತ್ರಸ್ತರಿಗೆ 90 ಕೋಟಿ ರೂಪಾಯಿ ಹಣ ನೀಡಿತು. ಆ ಕ್ಷಣದಲ್ಲಿ, ಅಪ್ಪು ಸರ್ ಅವರಿಗೆ ನಮ್ಮ ಸಮಾಜದ ಅಸಹಾಯಕರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿಯಿದೆ ಎಂಬ ವಿಷಯವು ನನಗೆ ಸ್ಪಷ್ಟವಾಯಿತು.
ಅವತ್ತಿನಿಂದ ಹಿಡಿದು ಕಳೆದ 9 ವರ್ಷಗಳ ಕಾಲ, ನಾನು ಮತ್ತೆ ಅಪ್ಪು ಸರ್ ಒಂದೇ ಜಿಮ್ಮಿನಲ್ಲಿ ವ್ಯಾಯಾಮ ಮಾಡಿದ್ದೇವೆ, ಬೇರೆ ಬೇರೆ ಥ್ರೆಡ್ ಮಿಲ್ಗಳಲ್ಲಿ ವ್ಯಾಯಾಮ ಮಾಡುತ್ತಲೇ ಮಾತನಾಡುತ್ತಾ ಕಾಲ ಕಳೆದಿದ್ದೇವೆ, ಅಕ್ಕ ಪಕ್ಕ ನಿಂತು ವೇಟ್ಸ್ ಎತ್ತಿದ್ದೇವೆ, ಒಟ್ಟಿಗೆ ಯೋಗ ಮಾಡಿದ್ದೇವೆ. ಅವರ ದೈಹಿಕ ಸದೃಢತೆ, ಫ್ಲೆಕ್ಸಿಬಿಲಿಟಿ, ಶಕ್ತಿಯನ್ನು ಕಂಡು ಆಶ್ಚರ್ಯವಾಗುತ್ತಿತ್ತು, ವಿಶಾಲವಾದ ನಗುವೊಂದು ಅವರ ಮೊಗದ ಮೇಲಿರುತ್ತಿತ್ತು. ಸಂತೋಷದಾಯಕ ದನಿಯೊಂದಿಗೆ – ‘ ನಮಸ್ಕಾರ ಚೇತನ್, ಹೇಗಿದ್ದೀರಾ? ಯಾವುದಾದರೂ ಒಳ್ಳೆಯ ಸಿನಿಮಾ ನೋಡಿದ್ರಾ ಈ ವಾರ? ‘ ಎಂದು ಕೇಳುತ್ತಿದ್ದರು.
2020ರ ಆರಂಭದಲ್ಲಿ, ಸ್ಥಳೀಯ ಅನಾಥಾಶ್ರಮವೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ನನ್ನ ವಿವಾಹ ಕಾರ್ಯಕ್ರಮಕ್ಕೆ ಅಪ್ಪು ಸರ್ ಮತ್ತು ಅಶ್ವಿನಿ ಮೇಡಮ್ ಅವರನ್ನು ನನ್ನ ಮದುವೆಯ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲು ಅವರ ಮನೆಗೆ ಹೋಗಿದ್ದೆ. ಬಹುಜನ ತತ್ವಜ್ಞಾನಿ ನಾರಾಯಣ ಗುರು ಅವರ ಕೊಡುಗೆಗಳ ಬಗ್ಗೆ, ಶಿಕ್ಷಣದ ಅಗತ್ಯತೆಯ ಕುರಿತ ಮತ್ತು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಸಮಾಜ ಸೇವೆಗಳು, ಇಷ್ಟೇ ಅಲ್ಲದೇ ಇನ್ನೂ ಹಲವಾರು ವಿಷಯಗಳ ಬಗ್ಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದೆವು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಆಯೋಜಿಸಿದ ನಂತರ, ಶಿಕ್ಷಣಕ್ಕೆ ಎಷ್ಟು ಮಹತ್ವವಿದೆ ಎಂದು ಅರಿವಾಯಿತು ಎಂದು ಅಪ್ಪು ಸರ್ ಆಗ ಹೇಳಿದರು. ಅದರ ಪರಿಣಾಮವಾಗಿ, ನಮ್ಮ ಗ್ರಾಮೀಣಾಭಿವೃದ್ಧಿಗೆ ಮತ್ತು ಯುವಕರಿಗೆ ಸಹಾಯ ಮಾಡಲು ಶಿಕ್ಷಣ ಹಕ್ಕು ಮತ್ತು ಕೌಶಲ್ಯ ಅಭಿವೃದ್ಧಿ ಮಂಡಳಿಯ ರಾಯಭಾರಿಯಾದರು ಎಂದು ಅಪ್ಪು ಸರ್ ಹೇಳಿದರು. ಸಾಮಾಜಿಕ ಸೇವೆಯ ದೃಷ್ಟಿಯಲ್ಲಿ ನೋಡುವುದಾದರೆ, ಒಬ್ಬ ಮನುಷ್ಯನ ಮೂಲಭೂತ ಮತ್ತು ಕುಟುಂಬದ ಅವಶ್ಯಕತೆಗಳನ್ನು ಪೂರೈಸಿಕೊಂಡ ನಂತರ, ನಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಸಮಾಜಕ್ಕೆ ಸಹಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ನಂಬಿದ್ದರು. ತರುವಾಯ, ಕೊರೋನ ಮೊದಲ ಅಲೆಯ ಸಮಯದಲ್ಲಿ, ರಾಜ್ಯ ಸರ್ಕಾರಕ್ಕೆ 50 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಷ್ಟೇ ಅಲ್ಲದೇ, ಎರಡನೇ ಅಲೆಯ ಸಂದರ್ಭದಲ್ಲಿ ನಮ್ಮಿಬ್ಬರಿಗೂ ಜಿಮ್, ಯೋಗ, ಮತ್ತು ಸಿನಿಮಾ ಮೂಲಕ ತಿಳಿದಿದ್ದ ಹಲವಾರು ಕಾರ್ಮಿಕ ವರ್ಗದ ಜನರಿಗೆ ಯಾವುದೇ ಪ್ರಚಾರವಿಲ್ಲದೇ ಸಹಾಯ ಮಾಡಿದರು. ಹಾಗೆಯೇ, ಅವರು ಹಾಡಿದ ಯಾವ ಗೀತೆಗೂ ಹಣ ಪಡೆದುಕೊಳ್ಳದೇ, ಕೇವಲ ಅದರ ಸಂಗೀತ ಮತ್ತು ಸಾಹಿತ್ಯಕ್ಕೋಸ್ಕರ ಹಾಡಿ, ಅದೇ ಹಣವನ್ನು ತಮ್ಮ ಕುಟುಂಬ ನಡೆಸುತ್ತಿದ್ದ ದತ್ತಿ ಸಂಸ್ಥೆಗಳಿಗೆ ದಾನ ಮಾಡುವಂತೆ ಹೇಳುತ್ತಿದ್ದರು.
02/02/2020ರಂದು ನನ್ನ ಮದುವೆಯ ಸಮಾರಂಭದಲ್ಲಿ, ಅಪ್ಪು ಸರ್ ಮತ್ತು ಅಶ್ವಿನಿ ಮೇಡಮ್, ನಾನು ವಿನಂತಿಸಿದ್ದಂತೆಯೇ ಸಮಯಕ್ಕೆ ಸರಿಯಾಗಿ ಸಂಜೆ 7.15ಕ್ಕೆ ಅನಾಥಾಶ್ರಮಕ್ಕೆ ಆಗಮಿಸಿದರು. ನನ್ನ ಪೋಷಕರು ಮಾತನಾಡುತ್ತಿದ್ದಂತೆ, ಇಬ್ಬರೂ ವೇದಿಕೆಯ ಮೇಲೆ ನಿಂತು ತಾಳ್ಮೆಯಿಂದ ಕಾಯುತ್ತಿದ್ದರು. ಮೇಘಾ ಮತ್ತು ನಾನು ನಮ್ಮ ಸ್ವ ಬರಹದ ಪ್ರತಿಜ್ಞೆಯನ್ನು ತೆಗೆದುಕೊಂಡು,ಇಬ್ಬರಿಗೂ ಕನ್ನಡ ಭಾಷೆಯ ಮೇಲೆ ಇದ್ದ ಅಭಿಮಾನವನ್ನು ನೆರೆದಿದ್ದವರಿಗೆ ಅಭಿವ್ಯಕ್ತಗೊಳಿಸಿದೆವು. ನನ್ನ, ಮೇಘಾನ, ನಮ್ಮ ಕುಟುಂಬ / ಸ್ನೇಹಿತರ ವಿಶೇಷ ದಿನದಂದು, ಸಾವಿರಾರು ಹಿತೈಷಿಗಳ ಮುಂದೆ ನಾವೆಲ್ಲರೂ ಒಟ್ಟಾಗಿ ನಿಂತು ನಮ್ಮ ಭಾರತೀಯ ಸಂವಿಧಾನದ ಪುಸ್ತಕವನ್ನು ಎತ್ತಿ ಹಿಡಿದದ್ದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.
2020ರಲ್ಲಿ,ನಮ್ಮ ಸಂವಹನಗಳು ಸಾಕಷ್ಟಿದ್ದವು – ವೈಯಕ್ತಿಕ ಮತ್ತು ವೃತ್ತಿಪರ, ಎರಡೂ. ಚಲನಚಿತ್ತ್ರೋದ್ಯಮದ ‘ ಸಂಘರ್ಷ ‘ ಗಳಿಂದ ದೂರ ಇರಲು ನನಗೆ ಅವರು ಹೇಳಿದಾಗ, ಆ ಮಾತಿಗೆ ಬೆಲೆ ನೀಡಿದೆ. ಏಕೆಂದರೆ ಆ ಮಾತುಗಳು ಅವರಿಗೆ ನನ್ನ ಮೇಲಿದ್ದ ಕಾಳಜಿಯಿಂದ ಬಂದಿದ್ದವು ಎಂಬುದು ನನಗೆ ತಿಳಿದಿತ್ತು.
ಕೇವಲ ಒಂದು ಫೋನ್ ಕಾಲ್ನ ಮೂಲಕ ವಿನಂತಿಸಿದ ನಂತರ, ನನ್ನ ‘ ಮಾರ್ಗ ‘ ಚಿತ್ರದ ಬಿಡಗಡೆಯ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಸಮಾಜದಲ್ಲಿ ಮತ್ತು ಕೆ. ಎಫ್. ಐನಲ್ಲಿ ಆಯ್ದ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಕೆಲವು ಸವಲತ್ತುಗಳು ಅಥವಾ – ‘ಸ್ಟಾರ್ ಕಲ್ಚರ್’ನ ವಿರುದ್ಧದ ನನ್ನ ಹೋರಾಟವು, ಪ್ರತಿಭಟನೆ, ಭಾಷಣ, ಮತ್ತು ಬರಹಗಳ ಮೂಲಕ ಹೆಚ್ಚು ಜಾಗರೂಕತೆಯನ್ನು ಬೆಳೆಸಲು ಪ್ರಾರಂಭಿಸಿದ್ದರೂ,ಹುಟ್ಟಿನಿಂದಲೇ ಸ್ಟಾರ್ ಆಗಿದ್ದ ಅಪ್ಪು ಸರ್ ಮತ್ತು ಎಂದಿಗೂ ಸ್ಟಾರ್ ಆಗಿಲ್ಲದ ನನ್ನ ನಡುವಿನ ಸಂಬಂಧಕ್ಕೆ ಆ ಹೋರಾಟ ಯಾವತ್ತಿಗೂ ಅಡ್ಡಿ ಬರಲಿಲ್ಲ. ಷೇಕ್ಸ್ಪಿಯರ್ ಅವರ ‘ ಟ್ವೆಲ್ಫ್ಟ್ ನೈಟ್ ‘ ಪುಸ್ತಕದ ಒಂದು ಭಾಗವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ – ಅಪ್ಪು ಸರ್ ಅವರಿಗೆ ಅವರ ಸ್ಟಾರ್ಡಂ ಅನ್ನು ‘ ಅವರ ಮೇಲೆ ಹೇರಲಾಗಿತ್ತು ‘ ( ತ್ರಸ್ಟ್ ಅಪಾನ್ ಹಿಂ). ಆದರೆ ಅದರೊಂದಿಗೆ ಬಂದ ಅಹಂಕಾರ ಅಥವಾ ಅತಿಸೂಕ್ಷ್ಮತೆಯನ್ನು ಅವರು ಎಂದಿಗೂ ರೂಡಿಸಿಕೊಳ್ಳಲಿಲ್ಲ. ಪ್ರಜಾಪ್ರಭುತ್ವದ ಕಟ್ಟಾ ವಕೀಲರೂ ಕೂಡ ಒಳ್ಳೆಯ ರಾಜರಿದ್ದರು ಎಂಬುದನ್ನು ಒಪ್ಪಿಕೊಳ್ಳುವಂತೆ, ಒಬ್ಬ ಸಮಾನತೆಯ ಉತ್ಸಾಹಿ ಸೈದ್ಧಾಂತಿಕವಾಗಿ ಮತ್ತು ಅಪ್ಪು ಸರ್ ಅವರ ವಿಷಯದಲ್ಲಿ, ಒಳ್ಳೆಯ ಸ್ಟಾರ್ಗಳು ಇರಬಹುದೆಂದು ಒಪ್ಪಿಕೊಳ್ಳಬಹುದು.
ಒಬ್ಬ ನಟನಾಗಿ – ಜನಪ್ರಿಯ ನಾಯಕ ನಟನಾಗಿ ಅಪ್ಪು ಸರ್ ಅವರ ಕೆಲಸ, ಮತ್ತು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರಗಳ ನಾಯಕರ/ನಾಯಕೀಯರ ಆಯ್ಕೆ ಮತ್ತು ಚಿತ್ರದ ವಿಷಯ, ಮೇಲೆ ಹೇಳಿರುವ ಅಷ್ಟೂ ವಿಷಯಗಳನ್ನು ಧ್ರುಡೀಕರಿಸುತ್ತದೆ. ಜನಕ್ಕಿಂತ, ಹಣದ ಬಗ್ಗೆಯೇ ಆದ್ಯತೆ ನೀಡುವ ಸಮಾಜ ಮತ್ತು ಚಿತ್ರೋದ್ಯಮದಲ್ಲೀ, ಇಡೀ ಕುಟುಂಬ ಕೂತು ನೋಡಬಹುದಾದಂತಹ ಸಿನಿಮಾವನ್ನು ನೀಡುವ ಬಗ್ಗೆ ಅವರು ಆದ್ಯತೆ ನೀಡಿದರು. ಹಿಂಸೆ, ಕ್ರೌರ್ಯ, ಸ್ವಯಂ ಅಭಿಮಾನ ಮತ್ತು ನಾಯಕ ವೈಭೀಕರಣದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರೆ, ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದರ ಜೊತೆಗೆ ಅವರು ಮಾಸ್ ಹೀರೋ ಎಂದು ಖ್ಯಾತಿ ಪಡೆಯಬಹುದಾಗಿತ್ತು. ಆದರೂ ಅವರು, ತಮ್ಮ ತಂದೆ ನಡೆದು ಬಂದ ಹಾದಿಯಂತೆಯೇ ಆರೋಗ್ಯಕರ, ಮನರಂಜನೀಯ ಚಿತ್ರಗಳಲ್ಲಿ ನಟಿಸುತ್ತ, ಕಲಾತ್ಮಕತೆಯನ್ನು ಶ್ರೀಮಂತಗೊಳಿಸಿದರು. ಒಬ್ಬ ನಿರ್ಮಾಪಕನಾಗಿ ವಿಷಯ ಆಧಾರಿತ ಚಿತ್ರಗಳಲ್ಲಿ ಅವರು ಹೊಸ ಪ್ರತಿಭೆಗಳನ್ನು ಕರೆ ತಂದರು. ಆ ರೀತಿ, ಯಾವಾಗಲೋ ಒಮ್ಮೆ ಒಂದು ಹಿಟ್ ಚಿತ್ರ ಕೊಡುವುದರ ಬದಲಿಗೆ, ಒಳ್ಳೆಯ ವಿಷಯಗಳನ್ನುಳ್ಳ ಕಮರ್ಷಿಯಲ್ ಚಿತ್ರಗಳನ್ನು ಕೊಡುವುದರ ಬಗ್ಗೆ ಯೋಚಿಸುತ್ತಿದ್ದರು.
ಅಪ್ಪು ಸರ್ ಅವರು, ಚಲನಚಿತ್ರ ಬಂಧುಬಳಗದವರೊಂದಿಗೆ, ಹೊರಗಿನ ಎಲ್ಲರೊಂದಿಗೂ ಪ್ಪ್ರೀತಿಯಿಂದ ವರ್ತಿಸುತ್ತಿದ್ದರೂ, ಅಭಿನಯದ ಕಲೆಯನ್ನು ಪರಿಷ್ಕರಿಸಿದ ನಟರನ್ನ ಕಂಡರೆ ಅವರಿಗೆ ಭಾರಿ ಮೆಚ್ಚುಗೆ. ಒಮ್ಮೆ ಜಿಮ್‌ನಲ್ಲಿ ಅವರು ಹಿಂದಿ ಚಲನಚಿತ್ರೋದ್ಯಮದ ಪ್ರತಿಭಾವಂತ ನಟ ಅಮೀರ್ ಖಾನ್ ಅವರೊಂದಿಗಿನ ನಿಕಟ ಒಡನಾಟದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಸೆಲೆಬ್ರಿಟಿಗಳಿಂದ ತುಂಬಿ ತುಳುಕುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,ಅಪಾರ ಸಾಮರ್ಥ್ಯದ ಮತ್ತೊಬ್ಬ ಹಿಂದಿ ನಟರಾದ ಪಂಕಜ್ ತ್ರಿಪಾಠಿ ಅವರೊಂದಿಗೆ ಹೇಗೆ ಸಂವಾದ ನಡೆಸಲು ಅವರು ಉತ್ಸುಕರಾಗಿದ್ದರು ಎಂಬುದನ್ನು ನಾನು ಓದಿದ್ದೇನೆ. ಸ್ಟಾರ್ಡಂ ಇರುವ ನಟನ ಬದಲು ನಟನಾ ಸಾಮರ್ಥ್ಯವಿದ್ದ ಒಬ್ಬ ಕಲಾವಿದನನ್ನು ಅವರು ಶ್ಲಾಘಿಸುತ್ತಿದ್ದರು. ಅಪ್ಪು ಸರ್ ಅವರು ಹಣಕಾಸಿಗಿಂತ ಹೆಚ್ಚಾಗಿ ನ್ಯಾಯ ಒದಗಿರದ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಇದು, ಅವರು ಕಲಾತ್ಮಕ ಆಯಾಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರೆಂದು ಬಹಿರಂಗಪಡಿಸುತ್ತದೆ.
ಹಣದಿಂದ ತುಂಬಿದ್ದ ಮರುಭೂಮಿಯಲ್ಲಿ ಅವರು ಓಯಸಿಸ್ನಂತೆ ಇದ್ದರು. ಕನ್ನಡ ಚಿತ್ರೋದ್ಯಮವು ಅವರನ್ನು ಕಳೆದುಕೊಂಡ ನಷ್ಟವನ್ನು ಖಂಡಿತವಾಗಿಯೂ ಅರಿತುಕೊಳ್ಳುತ್ತದೆ.
ಅಪ್ಪು ಸರ್ ಅವರಲ್ಲಿ ನಾನು ಮೆಚ್ಚುವ ಎರಡು ಅಂಶವೆಂದರೆ, ಒಂದು – ಕಲಿಕೆಯ ಬಗ್ಗೆ ಅವರಿಗಿರುವ ತವಕ, ಸಮಯ ಕಳೆದಂತೆ ಒಬ್ಬ ಒಳ್ಳೆಯ ಮನುಷ್ಯನಾಗಬೇಕೆಂಬ ಅವರ ಹಂಬಲ. ಇನ್ನೊಂದು – ನಮ್ಮಿಂದ ಏನೂ ಸಿಗದಿದ್ದರೂ ನಮಗೆ ಅವರು ತೋರಿಸುತ್ತಿದ್ದ ಪ್ರೀತಿ ಮತ್ತು ಕಾಳಜಿ. ನಿಸ್ವಾರ್ಥ ಒಳ್ಳೆತನ ಎಂಬುದು ಕೆಲವೇ ಕೆಲವು ಜನ ಹೊಂದಿರುವ ಗುಣ.
ಇಂತಹ ಉದಾತ್ತ ಮೌಲ್ಯಗಳನ್ನು ನಾವು ನಮ್ಮೊಳಗೆ ಬೆಳೆಸಿಕೊಳ್ಳುವುದೇ ನಾವು ಅಪ್ಪು ಸರ್ ಅವರಿಗೆ ಸಲ್ಲಿಸುವ ಗೌರವ.
ಅವರ ತಂದೆ ತಾಯಿಯಂತೆ, ಅಪ್ಪು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದರು. ಅಪ್ಪು ಸರ್ ಅವರ ಆಸೆಯನ್ನು ಪೂರೈಸಿದ ಅವರ ಕುಟುಂಬವನ್ನು ಗೌರವಿಸಬೇಕು. ನಾನು ಅಪ್ಪು ಸರ್ ಅವರನ್ನು ನೋಡಲು ಅಕ್ಟೋಬರ್ 29,2021 ರಂದು ಆಸ್ಪತ್ರೆಯಲ್ಲಿದ್ದಾಗ, ಸಾವಿನ ನಂತರದ ೬ ಗಂಟೆಗಳ ಅವಧಿಗಳಲ್ಲಿ ಅವರ ಕಣ್ಣುಗಳನ್ನು ತೆಗೆಯಲು ವೈದ್ಯಕೀಯ ತಂಡವೊಂದು ಬಂದಿತು. ಮುಂದಿನ ದಿನಗಳಲ್ಲಿ, ಅವರ ಕಣ್ಣಿನ ಕಾರ್ನಿಯಾ ಮತ್ತು ಕಣ್ಣು ಗುಡ್ಡೆಗಳು ಕರ್ನಾಟಕದ 4 ಯುವಕರಿಗೆ ದೃಷ್ಟಿ ಒದಗಿಸಿದವು. ಅಪ್ಪು ಸರ್ ಅವರಂತೇ ನಾವುಗಳು ಕೂಡ ನಮ್ಮ ಅಂಗಾಂಗಗಳನ್ನು ದಾನ ಮಾಡಿ ಜೀವನ್ಮರಣವನ್ನು ನೀಡುತ್ತಲೇ ಇರಬೇಕು. ನಾನು ಕೂಡ ಅದೇ ಹಾದಿಯಲ್ಲಿ ನಡೆಯುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ, ಬೇರೆಯವರಿಗೂ ಕೂಡ ಆ ಹಾದಿಯನ್ನೇ ಅನುಸರಿಸಲು ಹೇಳುತ್ತೇನೆ.
- ಮೂಲ ಬರಹ : ನಟ ಚೇತನ್ ಅಹಿಂಸಾ
- ಅನುವಾದ : ವೈಶ್ನವಿ ಮೋಹನ್