ಬೆಂಗಳೂರು : ಹಿಂದುತ್ವ ವಿರೋಧಿ ಹೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ ಆ ದಿನಗಳು ಚೇತನ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದ ನಟ ಚೇತನ್ರನ್ನು ಇಂದು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶವನ್ನು ಹೊರಡಿಸಿದೆ.
ನಟ ಚೇತನ್ ಅಂಹಿಸಾ ಸಂಘಪರಿವಾರಗಳ ಕುರಿತಂತೆ ಅವಹೇಳನಕಾರಿಯಾಗಿ ಪೊಸ್ಟ್ ಮಾಡಿದ್ದರು. ಈ ಸಂಬಂಧ ಹಿಂದೂ ಪರ ಕಾರ್ಯಕರ್ತ ಶಿವಕುಮಾರ್ ಎಂಬವರು ದೂರು ನೀಡಿದ್ದರು. ಈ ದೂರನ್ನು ಆಧರಿಸಿದ ಶೇಷಾದ್ರಿಪುರಂ ಠಾಣಾ ಪೊಲೀಸರು ಸೋಮವಾರ ಬಂಧಿಸಿದ್ದರು. ಇಂದು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು .
ಇನ್ನು ಈ ಎಲ್ಲದರ ನಡುವೆ ನಟ ಚೇತನ್ಗೆ ಜಾಮೀನು ನೀಡಬೇಕೆಂದು ಕೋರಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಕೆ ಮಾಡಿದ್ದು ಆಕ್ಷೇಪಣಾ ಅರ್ಜಿ ಸಲ್ಲಿಸಲು ಇಂದು ಅವಕಾಶ ನೀಡಲಾಗಿದೆ. ಪತಿ ಚೇತನ್ರನ್ನು ಬಂಧಿಸಿರುವ ಬಗ್ಗೆ ಪತ್ನಿ ಮೇಘನಾ ಪ್ರತಿಕ್ರಿಯೆ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನು ಪ್ರಶ್ನೆ ಮಾಡುವ ಅಧಿಕಾರವಿದೆ. ಪೊಲೀಸ್, ಜಡ್ಜ್, ಪ್ರಧಾನಿ ಹೀಗೆ ಯಾರನ್ನ ಬೇಕಿದ್ದರೂ ಪ್ರಶ್ನೆ ಮಾಡಬಹುದು. ಚೇತನ್ ಯಾವುದೇ ರೀತಿಯ ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ ಎಂದು ಪತಿ ಪರ ಬ್ಯಾಟ್ ಬೀಸಿದ್ದಾರೆ.