ಸ್ಟಾರ್ ಹೀರೋಗಳ ಚಿತ್ರಗಳು ರಿಲೀಸ್ ಆಗುವಾಗ ನಸುಕಿನಲ್ಲೇ ಪ್ರದರ್ಶನ ಶುರು ಮಾಡಲಾಗುತ್ತದೆ. ಈಗ ತೆಲುಗಿನ ಬಿಗ್ ಬಜೆಟ್ ಸಿನಿಮಾ ಕೂಡ ಇದೇ ಟ್ರೆಂಡ್ ಪಾಲೋ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಾಳೆ ಬಿಡುಗಡೆಗೆ ಸಿದ್ದವಾಗಿದೆ. ಬೇಡಿಕೆ ಹೆಚ್ಚಿರುವ ಕಾರಣದಿಂದ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಬೆಳೆಗಿನ ಜಾವ 3 ಗಂಟೆಗೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿದ್ದಾರೆ. ಸಿದ್ದತೆ ಮಾಡಿಕೊಂಡಿರುವ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಪೊಲೀಸ್ ಆಯುಕ್ತರಿಗೆ ಪತ್ರ ರವಾನೆ ಮಾಡಿದ್ದಾರೆ. ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ. ಬುಕ್ ಮೈ ಶೋ ಮೂಲಕ ಬೆಳಗಿನ ಜಾವ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಆಗುತ್ತಿರುವುದನ್ನು ಗಮನಿಸಿ ಕಾನೂನು ಕ್ರಮ ಪಾಲಿಸಲು ಆದೇಶ ನೀಡಿದ್ದಾರೆ.
ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯ ನಿಮಯ 41ರ ಪ್ರಕಾರ, ಬೆಳಗ್ಗೆ 6.30ಕ್ಕೂ ಮೊದಲು ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುವಾಗಿಲ್ಲ. ಅಲ್ಲದೇ, ರಾತ್ರಿ 10.30ರ ನಂತರ ಯಾವುದೇ ಸಿನಿಮಾ ಪ್ರದರ್ಶನ ಕೂಡ ಮಾಡುವಂತಿಲ್ಲ. ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಕೊಳ್ಳುವಂತೆ ಆದೇಶ ನೀಡಿದ್ದಾರೆ. ಆದ್ದರಿಂದ ಸಿನಿಮಾದ ಬಹುತೇಕ ಶೋಗಳು ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.