ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿವೆ. ಇದರ ನಡುವೆ ಕರ್ನಾಟಕ ಮಹಿಳಾ ಘಟಕ ಮಹಿಳೆಯರಿಗೆ ಅವಕಾಶ ನೀಡುವಂತೆ ಕೋರಿ ಹೈಕಮಾಂಡ್ ಗೆ ಪತ್ರ ಬರೆದಿದೆ.
ಕರ್ನಾಟಕ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಐಸಿಸಿಗೆ ಬರೆದ ಪತ್ರದಲ್ಲಿ ಮೇಲ್ಮನೆಗೆ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ.
ಮೇಲ್ಮನೆಗೆ ಕೇವಲ ಪುರುಷ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿದರೆ ಮಹಿಳೆಯರ ಪರ ಹಾಗೂ ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರು ಯಾರು? ಆದ್ದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಮೇಲ್ಮನೆಗೆ ಸಾಕಷ್ಟು ಅನುಭವಿ ಕಾಂಗ್ರೆಸ್ ನಾಯಕಿಯರು ಇದ್ದು, ಅವರಿಗೆ ಸೂಕ್ತ ಸ್ಥಾನ ನೀಡಬೇಕಾಗಿದೆ. ಮೇಲ್ಮನೆಯಿಂದ ನಿವೃತ್ತರಾಗಿರುವ ವೀಣಾ ಆಚಾರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವುದೂ ಸೇರಿದಂತೆ ವೀಣಾ ಕಾಶಪ್ಪನವರ್, ಬೆಂಗಳೂರಿನ ರತ್ನಪ್ರಭಾ ವಾಸಂತಿ ಶಿವಣ್ಣ, ಪುಷ್ಪಾ ಅಮರ್ ನಾಥ್, ಆರತಿ ಕೃಷ್ಣ ಸೇರಿದಂತೆ ಹಲವಾರು ನಾಯಕಿಯರು ಆಕಾಂಕ್ಷಿಗಳಾಗಿದ್ದಾರೆ. ಅವರನ್ನು ಗುರುತಿಸಿ ಮೇಲ್ಮನೆಗೆ ಅವಕಾಶ ನೀಡಬೇಕು ಎಂದು ಪುಷ್ಪಾ ಅಮರನಾಥ್ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಿಂದ ಪ್ರಸ್ತುತ ಮೇಲ್ಮನೆಗೆ ಒಬ್ಬರು ಕೂಡ ಮಹಿಳಾ ಸದಸ್ಯೆ ಇಲ್ಲದಂತಾಗಿದೆ. ಆದರೆ ಇತರೆ ಪಕ್ಷಗಳಲ್ಲಿ ಕನಿಷ್ಠ ಪ್ರತಿನಿಧಿಗಳಾದರೂ ಇದ್ದಾರೆ. ಲಡ್ಕಿ ಹು ಲಡ್ ಸಕ್ತಿ ಹೂ ಎಂಬ ಘೋಷವಾಕ್ಯ ಹೊಂದಿರುವ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.