ಬಿಡಿಎ ಭ್ರಷ್ಟಾಚಾರ ಬಯಲಿಗೆಳೆದ ಮೇಲೆ ಈಗ ಎಸಿಬಿ ದೃಷ್ಟಿ ಬಿಬಿಎಂಪಿ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಸುಮಾರು 200 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪಾಲಿಕೆಯ 8 ವಲಯಗಳ ಎಲ್ಲಾ ಬಿಬಿಎಂಪಿ ಇಲಾಖೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅನೇಕ ದಾಖಲೆಗಳನ್ನೂ ವಶಪಡಿಸಿಕೊಂಡಿದೆ.
ಸಾರ್ವಜನಿಕರ ದೂರಿನ ಮೇಲೆ ದಾಳಿ ನಡೆಸಿದ ACB
ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಈಗ ಬಿಬಿಎಂಪಿ ಕೋಟೆಗೆ ಲಗ್ಗೆ ಇಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಚೇರಿಗೆ ದೂರುಗಳು ಬರುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಎಫ್ ಐ ಆರ್ ದಾಖಲಿಸಿಕೊಂಡು ಬಿಬಿಎಂಪಿ ಕೇಂದ್ರ ಕಚೇರಿ ಸೇರಿ ನಗರದ ಹನ್ನೊಂದು ಕಡೆ ಇರೋ 27 ಬಿಬಿಎಂಪಿ ಕಚೇರಿಗಳ ಮೇಲೆ ಬೃಹತ್ ದಾಳಿ ನಡೆಸಿದ್ದಾರೆ. ಮೂವರು ಎಸಿಬಿ ಎಸ್ ಪಿ, ಡಿವೈ ಎಸ್ ಪಿಗಳು, ಇನ್ಸ್ಪೆಕ್ಟರ್ ಗಳು ಸೇರಿದಂತೆ ಸುಮಾರು 200 ಜನ ಅಧಿಕಾರಿಗಳ ತಂಡ ದಾಳಿ ನಡೆಸಿ ಕಡತಗಳನ್ನ ಪರಿಶೀಲನೆ ನಡೆಸಿ ಕೆಲ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ.
200 ಅಧಿಕಾರಿಗಳ ತಂಡದಿಂದ 27 BBMP ಕಚೇರಿಗಳ ಮೇಲೆ ದಾಳಿ
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಬಿಎಂಪಿ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳ ಬೃಹತ್ ದಾಳಿ ನಡೆದಿದೆ. ಬರೋಬ್ಬರಿ 200 ಎಸಿಬಿ ಅಧಿಕಾರಿಗಳ ತಂಡ ನಗರದ 27 ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಅಗಮಿಸಿದ 200 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ತಂಡ ತಂಡವಾಗಿ ನಗರದ ಪಾಲಿಕೆಯ ಕೇಂದ್ರ ಕಛೇರಿ ಸೇರಿದಂತೆ ನಗರದ ಹಲವು ಬಿಬಿಎಂಪಿ ಕಛೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಕಳೆದ ಹಲವು ತಿಂಗಳುಗಳಿಂದ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರ ಆರೋಪ ಹೊರೆಸಿ ಎಸಿಬಿ ಕಚೇರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ಜೊತೆಗೆ ಸರ್ಕಾರದ ಕಡೆಯಿಂದಲೂ ಬಿಬಿಎಂಪಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಣ್ಣಿಡಲು ಸೂಚನೆ ಸಿಕ್ಕಿತ್ತು. ಇತ್ತ ಬೃಹತ್ ದಾಳಿಗೆ ಹಲವು ದಿನಗಳಿಂದಲೂ ತಯಾರಿ ಮಾಡಿಕೊಂಡಿದ್ದ ಎಸಿಬಿ ಬೃಹತ್ ಅಧಿಕಾರಿಗಳು ಜಾಹಿರಾತು, ಟಿಡಿಆರ್, ಕಂದಾಯ, ಆರೋಗ್ಯ, ರಸ್ತೆ ಮತ್ತು ಮೂಲ ಭೂತಸೌಕರ್ಯ ವಿಭಾಗಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಳಗ್ಗೆ 11.30 ಸುಮಾರಿಗೆ ದಾಳಿ ಶುರು ಮಾಡಿರುವ ಅಧಿಕಾರಿಗಳು ಸತತವಾಗಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಟ್ಯಾಕ್ಸ್, ರಸ್ತೆ ಡಾಂಬರೀಕರಣ, ಮನೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಕಳೆದ ಹತ್ತು ವರ್ಷಗಳಿಂದಲೂ ನಡೆದಿರುವ ಕಾಮಗಾರಿಗಳ ಕಡತಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ, ಈಗಾಗಲೆ ಸರ್ಕಾರಕ್ಕೆ 40 ಪರ್ಸೆಂಟ್ ಎಂಬ ಅಪಕೀರ್ತಿ ಇದೆ. ಇದನ್ನುಅಳಿಸಿ ನಗರದ ಜನರ ವಿಶ್ವಾಸಗಳಿಸಲು ಶಾಸಕರೇ ಈ ಬಾರಿ ಎಸಿಬಿ ರೈಡ್ ಗೆ ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನುವ ಮಾತೂ ಕೇಳಿ ಬಂದಿದೆ. ಕಳೆದ 10 ವರ್ಷಗಳಿಂದ ಒಂದೆ ಕಡೆ ಗೂಟ ಹೊಡೆದು ಕುಳಿತಿರುವ ಅಧಿಕಾರಿಗಳಿಗೆ ಚಳಿ ಬಿಡಿಸಲು ಈ ರೀತಿ ಪ್ಲಾನ್ ಮಾಡಿದ್ದಾರೆ ಅಂತ ಪಾಲಿಕೆ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದು ಕೊಂಡ ಎಸಿಬಿ ಬೆಳಿಗ್ಗೆ ರೈಡ್ ಮಾಡಿ, ಸಿಕ್ಕಿರುವ ದಾಖಲೆಗಳ ಬಗ್ಗೆ ಬಿಬಿಎಂಪಿ ಸಿಬ್ಬಂದಿಯನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಬೃಹತ್ ಕೋಟೆ ಬಿಬಿಎಂಪಿ ಮೇಲಿನ ದಾಳಿ ನಾಳೆ ಕೂಡ ಮುಂದುವರೆಯಲಿದ್ದು ಕೋಟಿ ಕೋಟಿ ಭ್ರಷ್ಟಾಚಾರ ನಡೆದಿರುವ ಸುಳಿವು ಸಿಕ್ಕಿದೆ. ದಾಳಿ, ಪರಿಶೀಲನೆ, ವಿಚಾರಣೆ ನಂತರ ಬಿಬಿಎಂಪಿ ಗೂಡಲ್ಲಿ ಏನೆಲ್ಲಾ ನಡೆದಿದೆ ಅನ್ನೋದರ ಫುಲ್ ಪಿಚ್ಚರ್ ಹೊರ ಬೀಳಲಿದೆ.