ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ, ಆಧಾರರಹಿತ ಆರೋಪಗಳಿಂದ ಕೇಂದ್ರೀಯ ಪಡೆಗಳನ್ನು ಅಪಮಾನಗೊಳಿಸಬಾರದೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದಾರೆ.
ಕೂಚ್ ಬೆಹರ್ ಜಿಲ್ಲೆಯಲ್ಲಿ ಸಿಐಎಸ್‌ಎಫ್ ಪಡೆಗಳು ಹಾರಿಸಿದ ಗುಂಡೇಟಿಗೆ ನಾಲ್ವರು ಸಾರ್ವಜನಿಕರು ಬಲಿಯಾದ ಮೇಲೆ, ಮಮತಾ ಬ್ಯಾನರ್ಜಿ ಕೇಂದ್ರ ಶಸ್ತ್ರ ಪಡೆಯ ವಿರುದ್ಧ ಹರಿಹಾಯ್ದಿದ್ದರು. ಕೂಚ್ ಬೆಹರ್ ನಲ್ಲಿ ನಡೆದ ಘಟನೆಯನ್ನು ನರಮೇಧ ಎಂದು ಕರೆದಿದ್ದರು. ಇದಾದ ಒಂದೇ ದಿನದಲ್ಲಿ ನರೇಂದ್ರ ಮೋದಿ, ಆಧಾರರಹಿತ ಆರೋಪ ಹೊರಿಸಬಾರದೆಂದು ದೀದಿಯನ್ನು ಟೀಕಿಸಿದ್ದಾರೆ.
ಸಿಐಎಸ್‌ಎಫ್ ಮಾತ್ರವಲ್ಲದೆ, ಚುನಾವಣಾ ಆಯೋಗವನ್ನೂ ಕೂಡಾ ಮೋದಿ ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರದ ಅಣತಿಯಂತೆ ಆಯೋಗವು ಕೆಲಸ ಮಾಡುತ್ತಿದೆಯೆಂದು ಮಮತಾ ಗಂಭೀರ ಆರೋಪ ಹೊರಿಸಿದ್ದರು. ಮಾದರಿ ನೀತಿ ಸಂಹಿತೆಯನ್ನು ಮೋದಿ ನೀತಿ ಸಂಹಿತೆಯೆಂದು ಬದಲಾಯಿಸುವಂತೆಯೂ ಮಮತಾ ವ್ಯಂಗ್ಯವಾಡಿದ್ದರು.
ಎಂಟು ಹಂತದಲ್ಲಿ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ-ಟಿಎಂಸಿ ನೇರ ಹಣಾಹಣಿಯಲ್ಲಿದೆ. ಇದುವರೆಗೂ ನಾಲ್ಕು ಹಂತದ ಚುನಾವಣೆಗಳು ಮುಗಿದಿದ್ದು, ಈ ಬಾರಿ ಚುನಾವಣೆಯ ವೇಳೆ ಹಲವು ಹಿಂಸಾಚಾರಗಳಿಗೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ.
ಬಿಜೆಪಿಯಂತೂ, ಪಶ್ಚಿಮ ಬಂಗಾಳವನ್ನು ಪ್ರತಿಷ್ಟೆಯ ವಿಷಯವನ್ನಾಗಿಸಿದ್ದು, ತನ್ನ ಸ್ಟಾರ್ ಪ್ರಚಾರಕರಾದ ಅಮಿತ್ ಷಾ ಹಾಗೂ ನರೇಂದ್ರ ಮೋದಿಯನ್ನು ಒಂದೇ ದಿನದಲ್ಲಿ ಹಲವು ಕಡೆಗಳಲ್ಲಿ ರಾಜಕೀಯ ರ್ಯಾಲಿಗೆ ಆಯೋಜಿಸಿದೆ. ಸೋಮವಾರ ಮೋದಿ ದಕ್ಷಿಣ ಬಂಗಾಳದಲ್ಲಿ ಮೂರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅದೇ ವೇಳೆ, ಅಮಿತ್ ಷಾ ಉತ್ತರ ಬಂಗಾಳದಲ್ಲಿ ಎರಡು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ ರೋಡ್ ಷೋದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಬಿಜೆಪಿಯ ಇಬ್ಬರು ನಾಯಕರೂ, ಮಮತಾ ಅವರನ್ನೇ ಗುರಿಯಾಗಿಸಿಕೊಂಡಿದ್ದು, ಭಾನುವಾರ, ಬಸಿರ್ಹತ್ ದಕ್ಷಿಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಅಮಿತ್ ಶಾ, “ದೀದಿ ಪದೇ ಪದೇ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರೆ. ಜನರು ನನ್ನನ್ನು ರಾಜೀನಾಮೆ ಕೇಳಿದಾಗ, ನಾನು ಮಾಡುತ್ತೇನೆ. ಆದರೆ ನೀವು ಮೇ 2 ರಂದು ರಾಜೀನಾಮೆ ನೀಡಬೇಕಾಗಿರುವುದರಿಂದ ನೀವು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಮಮತಾ ಅವರನ್ನು ಗುರಿಯಾಗಿಸಿಕೊಂಡ ಮೋದಿ, ನಿಮಗೆ ಬೇಕಾದರೆ ನನ್ನನ್ನು ನಿಂದಿಸಿ. ಆದರೆ ಬಂಗಾಳದ ಘನತೆ ಮತ್ತು ಸಂಪ್ರದಾಯವನ್ನು ಅವಮಾನಿಸಬೇಡಿ. ನಿಮ್ಮ ದುರಹಂಕಾರವನ್ನು ಬಂಗಾಳ ಸಹಿಸುವುದಿಲ್ಲ, ಮತ್ತು ಟೋಲಾಬಾಜ್ ಮತ್ತು ಹಣ ಸಂಸ್ಕೃತಿಯನ್ನು ಕಡಿತಗೊಳಿಸಿ ಏಕೆಂದರೆ ಜನರು ಈಗ ‘ಅಸಲಿ ಪರಿವರ್ತನೆʼಯನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಟಿಎಂಸಿ ನಾಯಕರು ಬಂಗಾಳದ ಎಸ್‌ಸಿ ಸಮುದಾಯವನ್ನು ನಿಂದಿಸುತ್ತಾರೆ ಮತ್ತು ಅವರನ್ನು ಭಿಕ್ಷುಕರು ಎಂದು ಕರೆಯುತ್ತಾರೆ. ಇಂತಹ ಕಹಿ ಮಾತುಗಳನ್ನು ಕೇಳಿ ಬಾಬಾ ಸಾಹೇಬ್ ಅವರ ಆತ್ಮಕ್ಕೆ ನೋವಾಗುತ್ತದೆ. ದೀದಿ ತನ್ನನ್ನು ‘ರಾಯಲ್ ಬಂಗಾಳ ಹುಲಿ’ ಎಂದು ಕರೆದುಕೊಳ್ಳುತ್ತಾಳೆ. ಎಸ್‌ಸಿಗಳ ಬಗ್ಗೆ ಇಂತಹ ಕಾಮೆಂಟ್‌ಗಳನ್ನು ದೀದಿ ಅವರ ಇಚ್ಛಾಶಕ್ತಿಯಿಲ್ಲದೆ ಯಾವುದೇ ಟಿಎಂಸಿ ಮುಖಂಡರು ನೀಡಲು ಸಾಧ್ಯವಿಲ್ಲ ಎಂದು ಮೋದಿ ಕಿಡಿಕಾರಿದ್ದಾರೆ.