ದೆಹಲಿಯಲ್ಲಿ ಜನಪರ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ರಾಷ್ಟ್ರ ರಾಜಧಾನಿಯ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷವು ಈಗ ತನ್ನ ನೆಲೆಯನ್ನು ದೆಹಲಿಯಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ವಿಸ್ತರಿಸಲು ಯೋಜನೆಯನ್ನು ರೂಪಿಸಿದೆ.
2022ರಲ್ಲಿ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್, ಅಸ್ಸಾಂ, ಉತ್ತರಾಖಂಡ್, ಗೋವಾ ರಾಜ್ಯಗಳ ಪಂಚ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಆಪ್ ಸ್ಪರ್ಧಿಸಲು ಯೋಜನೆ ರೂಪಿಸಿದ್ದು ಈಗಾಗಲೇ ದೆಹಲಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಇತರೆ ರಾಜ್ಯಗಳಲ್ಲಿ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ.
ಇದೀಗ ಉತ್ತರ ಪ್ರದೇಶದಲ್ಲೂ ಆಪ್ ಪಕ್ಷವು ಜನರಿಗೆ ಇದೇ ರೀತಿಯ ಯೋಜನೆಗಳನ್ನು ತಲುಪಿಸುವ ಬಗ್ಗೆ ಆಶ್ವಾಸನೆ ನೀಡಿದೆ. ಆದರೆ, ಈ ಯೋಜನೆಗಳು ಉತ್ತರ ಪ್ರದೇಶದಲ್ಲಿ ಯಾವ ರೀತಿ ಫಲ ಕೊಡುತ್ತದೆ ಎಂಬುದನ್ನು ನಾವು ವಿಶ್ಲೇಷಿಸಬೇಕಿದೆ. ದೇಶದಲ್ಲೇ ಅತಿ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ, 80 ಲೋಕಸಭಾ ಕ್ಷೇತ್ರಗಳಿವೆ. 2017ರಲ್ಲಿ ಇಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು.
ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ದೇಶದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಮಾತಿದೆ. ಅದರಂತೆ, ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಮತ್ತು ಜನಪ್ರಿಯತೆಯ ಕಾರಣ, ಬಿಜೆಪಿ 283 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ಅಧಿಕಾರ ವಹಿಸಿಕೊಂಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲು ಬಿಜೆಪಿ ಶೇಕಡ 55.74%ರಷ್ಟು ಮತಗಳನ್ನು ಪಡೆದು 62 ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿತ್ತು. ಇದೀಗ 2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರಂತೆಯೇ ಇಲ್ಲಿ ಎಲ್ಲಾ ಪಕ್ಷಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕಸರತ್ತು ನಡೆಸುತ್ತಿವೆ.
ಉತ್ತರ ಪ್ರದೇಶದ ಗಡಿ ಹಂಚಿಕೊಂಡಿರುವ ದೆಹಲಿಯ ಆಡಳಿತ ನಡೆಸುತ್ತಿರುವ ಆಪ್ ಮುಂಬರುವ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯಲು ಮುಂದಾಗಿದೆ. ಅದಕ್ಕಾಗಿ ಆಪ್ ಪಕ್ಷದ ವರಿಷ್ಟ ಅರವಿಂದ್ ಕೇಜ್ರಿವಾಲ್ ಈಗಾಗಲೇ ದೆಹಲಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಉ.ಪ್ರ ದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಫಲ ಕೊಡುತ್ತಾ ದೆಹಲಿ ತಂತ್ರ?
ದೆಹಲಿಯಲ್ಲಿ ಜನರಿಗೆ ಉಚಿತ ನೀರು, ವಿದ್ಯುತ್, ಮೊಹಲ್ಲಾ ಕ್ಲಿನಿಕ್‌ಗಳು, ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ಮತ್ತು ಮೂಲಭೂತ ಸೌಕರ್ಯದಂತಹ ಯೋಜನೆಗಳಿಂದ ದೇಶದ ಜನರ ಗಮನ ಸೆಳದಿದ್ದ ಆಪ್ ಉತ್ತರ ಪ್ರದೇಶದಲ್ಲಿ ಇದೇ ಮಾದರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದೆ.
ದೆಹಲಿಯ ಜನಸಂಖ್ಯೆ 1.9 ಕೋಟಿ, ಉತ್ತರ ಪ್ರದೇಶದ ಜನಸಂಖ್ಯೆ 20.42ಕೋಟಿ ದೆಹಲಿಯಲ್ಲಿ ಆಪ್ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಉತ್ತರ ಪ್ರದೇಶದಲ್ಲಿ ಜಾರಿಗೆ ಕಷ್ಟ ಎಂದು ಹೇಳಲಾಗುತ್ತಿದೆ. ಏಕೆಂದರೆ, ಉತ್ತರ ಪ್ರದೇಶದಲ್ಲಿರುವ ಜನಸಂಖ್ಯೆಗೂ ದೆಹಲಿಯಲ್ಲಿರುವ ಜನಸಂಖ್ಯೆಗೂ ಅಜಗಜಾಂತರ ವ್ಯತಾಸವಿದೆ.
ದೆಹಲಿಯ ಬಜೆಟ್ ಗಾತ್ರ 69 ಸಾವಿರ ಕೋಟಿ ರೂಪಾಯಿಗಳು. ಉತ್ತರ ಪ್ರದೇಶದ ಬಜೆಟ್ ಗಾತ್ರ 7ಲಕ್ಷ ಕೋಟಿ ರೂಪಾಯಿಗಳು. ಆಪ್ ಪಕ್ಷವು ಅಧಿಕಾರಕ್ಕೆ ಬಂದರೆ ಬಜೆಟ್‌ನಲ್ಲಿ ಶೇಕಡ 25%ರಷ್ಟು ದುಡ್ಡನ್ನು ಶಿಕ್ಷಣಕ್ಕೆ ಮೀಸಲಿಡಲಾಗುವುದು ಎಂದು ಘೋಷಿಸಿದೆ.
ಆದರೆ, ಈ ಯೋಜನೆಯು ಯುಪಿಯಲ್ಲಿ ಫಲ ನೀಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ ಸಾಕ್ಷರತೆ ಪ್ರಮಾಣವು ಶೇಕಡ 70%ರಷ್ಟಿದೆ ದೆಹಲಿಯಲ್ಲಿ ಸಾಕ್ಷರತೆ ಪ್ರಮಾಣವು ಶೇಕಡ 86%ರಷ್ಟಿದೆ. ಪ್ರಾದೇಶಿಕತೆಗೆ ಅನುಗುಣವಾಗುವಂತಹ ನವೀನ ಮಾದರಿ ಯೋಜನೆಯನ್ನು ಆಪ್ ತರದೆ ಹೋದಲ್ಲಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಜಯ ಸಾಧಿಸುವುದು ಕಷ್ಟಸಾಧ್ಯ. ಅದಲ್ಲದೆ 2017ರ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ರಾಮ ರಾಜ್ಯದ ಕನಸು ಕಂಡಿದ ಬಿಜೆಪಿ, ಅಂದು ನೀಡಿದಂತಹ ಆಶ್ವಾಸನೆಗಳನ್ನು ಈಗಾಗಲೇ ಬಹುತೇಕ ಈಡೇರಿಸಿದೆ.
ಯುಪಿ ರಾಜ್ಯಾದ್ಯಂತ ಜಾತಿ ಮತ್ತು ಧರ್ಮಾಂಧತೆಯ ಬಲೆಯನ್ನು ಹೆಣೆದಿರುವ ಬಿಜೆಪಿಯನ್ನು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಹೇಗೆ ಭೇದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಉತ್ತಮ ವಿರೋಧ ಪಕ್ಷವಾಗುವ ಸಾಧ್ಯತೆ
ಒಂದು ವೇಳೆ ಬಿಜೆಪಿಯ ವಿರುದ್ದದ ಹೋರಾಟದಲ್ಲಿ ವಿಫಲವಾದರು ಕೂಡ ಆಪ್ ಒಂದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ, 2019ರ ಬಳಿಕ ದೆಹಲಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳನ್ನು ಯುಪಿ ಜನರಿಗೆ ತಿಳಿಸುವಲ್ಲಿ ಆಪ್ ಪಕ್ಷ ಯಶಸ್ವಿಯಾಗಿದೆ. ಇದಕ್ಕೆ ಮುಖ್ಯ ಉದಾಹರಣೆ ಎಂದರೆ 2021ರ ಏಪ್ರಿಲ್‌ನಲ್ಲಿ ನಡೆದ ಪಂಚಾಯತ್ ಚುನಾವಣೆಯ ಪಲಿತಾಂಶ.
ಪಂಚಾಯತ್ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯ ಹಾಗು ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್‌ರವರ ನೇತೃತ್ವದಲ್ಲಿ ಆಪ್ ಪಕ್ಷವು 83 ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು, 300 ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ, 232 ಬ್ಲಾಕ್ ಡೆವಲೆಪಮೆಂಟ್ ಕಮಿಟಿ ಸ್ಥಾನಗಳಲ್ಲಿ ಆಪ್ ಜಯ ಸಾಧಿಸಿತ್ತು. ಇದು ಅಲ್ಲಿನ ಜನರ ಬೆಂಬಲದ ಸೂಚನೆ ಎಂದೇ ಪರಿಗಣಿಸಬಹುದು.