
ಮಹೇಂದ್ರಗಢ:ಹರ್ಯಾಣದ ಮಹೇಂದ್ರಗಢದ ನರ್ನಾಲ್ ನಲ್ಲಿ ನ್ಯಾಯಾಲಯದ ಆವರಣದಲ್ಲಿ ದುಷ್ಕರ್ಮಿಗಳು ಯುವಕನ ಮೇಲೆ ಚಾಕು ಮತ್ತು ಸ್ಕ್ರೂಡ್ರೈವರ್ ನಿಂದ ಹಲ್ಲೆ ನಡೆಸಿದ್ದಾರೆ. ದಾಳಿ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರ ಪ್ರಕಾರ, ನರ್ನಾಲ್‌ನ ಸುರಾನಿ ಗ್ರಾಮದ ನಿವಾಸಿ ಸೋನು ನರ್ನಾಲ್‌ನ ನ್ಯಾಯಾಲಯಕ್ಕೆ ಬಂದು ವಕೀಲರ ಚೇಂಬರ್‌ನಿಂದ ನ್ಯಾಯಾಲಯದ ಕಡೆಗೆ ಹೋಗುತ್ತಿದ್ದಾಗ ನ್ಯಾಯಾಲಯದ ಆವರಣದಲ್ಲಿ ಕುಳಿತಿದ್ದ ದುಷ್ಕರ್ಮಿಗಳು ಚಾಕು ಮತ್ತು ಸ್ಕ್ರೂಡ್ರೈವರ್‌ನಿಂದ ಹಲ್ಲೆ ನಡೆಸಿದ್ದಾರೆ.

ದಾಳಿಯ ನಂತರ, ಸೋನು ನೆಲದ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡರು.ಇದಾದ ಬಳಿಕ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇಡೀ ಘಟನೆಯನ್ನು ನೋಡಿದ ವಕೀಲರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕ ಸೋನುವನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ದಾಳಿಯ ನಂತರ ಸೋನು ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ದಾಳಿಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ, ಆದರೆ ಹಿಂದಿನ ದ್ವೇಷವೇ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದ ಆವರಣದಲ್ಲಿ ಹಲ್ಲೆ ನಡೆಸಿದ ನಂತರ ವಕೀಲರು ಯುವಕರ ಮೇಲಿನ ಹಲ್ಲೆ ಖಂಡಿಸಿ ಘೋಷಣೆಗಳನ್ನು ಕೂಗಿದರು.ಈ ಹಿಂದೆಯೂ ನ್ಯಾಯಾಲಯದ ಆವರಣದಲ್ಲಿ ಹಲವು ಘಟನೆಗಳು ನಡೆದಿವೆ ಎಂದು ಧರಣಿ ನಿರತ ವಕೀಲರು ಆರೋಪಿಸಿದರು.
ನರ್ನಾಲ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಂಜೀತ್ ಯಾದವ್ ಅವರು ಘಟನೆಯ ಬಗ್ಗೆ ವಕೀಲರು ಕೋಪಗೊಂಡಿದ್ದಾರೆ ಮತ್ತು ನ್ಯಾಯಾಲಯದ ಆವರಣದಲ್ಲಿ ಇಂತಹ ಘಟನೆಯು ಭದ್ರತೆಯ ಲೋಪ ಮತ್ತು ಪೊಲೀಸರ ವೈಫಲ್ಯ ಎಂದು ಹೇಳಿದರು. ಕೆಲ ತಿಂಗಳ ಹಿಂದೆ ನ್ಯಾಯಾಲಯದ ಆವರಣದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.





