
—–ನಾ ದಿವಾಕರ—–
ಐತಿಹಾಸಿಕ ತಾಣ ಹಂಪಿಯ ದಾರುಣ ಘಟನೆ ಯಾವ ಭಾವನೆಗಳಿಗೂ ಧಕ್ಕೆ ಉಂಟುಮಾಡಿಲ್ಲ ಏಕೆ ????
ಸಾಮಾನ್ಯವಾಗಿ ಆಧುನಿಕ ತಂತ್ರಜ್ಞಾನ ಸಂವಹನ ಯುಗದಲ್ಲಿ ಯಾವುದೇ ಸಮಾಜಘಾತುಕ ದುಷ್ಕೃತ್ಯಗಳು ಸಂಭವಿಸಿದರೂ ಅದು ರಾಜ್ಯಾದ್ಯಂತ ಸಂಚಲನ ಮೂಡಿಸುವುದಷ್ಟೇ ಅಲ್ಲದೆ, 24 x 7 ಸುದ್ದಿವಾಹಿನಿಗಳ ಮೂಲಕ ನಿರಂತರ ಸುದ್ದಿಯಾಗಿ ಮನೆ ಮನೆ ತಲುಪುತ್ತದೆ. ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಹತ್ಯೆ, ಜಾತಿ ದೌರ್ಜನ್ಯಗಳು ಹೆಚ್ಚು ಸಂಚಲನ ಮೂಡಿಸುತ್ತವೆ. ಈ ಹೀನ ಕೃತ್ಯಗಳಿಗೆ ಮತೀಯ ಸ್ಪರ್ಶ ಸಿಕ್ಕರೆ ಅದು ಮತ್ತಷ್ಟು ರೋಚಕತೆ ಪಡೆದುಕೊಳ್ಳುತ್ತದೆ. ಈ ವಾತಾವರಣದಲ್ಲಿ ಕಾಣಬಹುದಾದ ಮತ್ತೊಂದು ವಿದ್ಯಮಾನ ಎಂದರೆ ಸಮಾಜದ ಧಾರ್ಮಿಕ-ಭಾಷಿಕ-ಪ್ರಾದೇಶಿಕ ಅಥವಾ ಇನ್ನಿತರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸೃಷ್ಟಿಯಾಗುವ ಪ್ರಕ್ಷುಬ್ದ ವಾತಾವರಣ. ರಾಜಕೀಯ ಪಕ್ಷಗಳಿಗೆ ಮತ್ತು ಕನ್ನಡದ ಸುದ್ದಿಮನೆಗಳಿಗೆ ಇಂತಹ ಸನ್ನಿವೇಶಗಳು ರೋಚಕವಾಗಿ ಕಾಣುತ್ತವೆ. ಕನ್ನಡ ವಿದ್ಯುನ್ಮಾನ ವಾಹಿನಿಗಳ ಪರಿಭಾಷೆಯಲ್ಲಿ ಹೇಳುವುದಾದರೆ ಧಗಧಗ , ಕೊತಕೊತ ಹೊತ್ತಿ ಉರಿಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.
ನಮ್ಮ ಸಮಾಜ ಮತ್ತು ರಾಜಕೀಯ ವಾತಾವರಣ ಎಷ್ಟರ ಮಟ್ಟಿಗೆ ನಿರ್ದಿಷ್ಟ ಅಸ್ಮಿತೆಗಳಿಗೆ ಅಂಟಿಕೊಂಡಿದೆ ಎಂದರೆ, ಯಾವುದೋ ಒಂದು ಜಾತಿ ಅಥವಾ ಮತೀಯ ಸಮುದಾಯಕ್ಕೆ, ಸಮಾಜದ ಅಥವಾ ಸಾಂಸ್ಕೃತಿಕ ವಲಯಕ್ಕೆ ಸಂಬಂಧಿಸದೆ ಇದ್ದರೆ, ಎಂತಹ ದೃಷ್ಕೃತ್ಯಗಳಾದರೂ ಕೇವಲ ʼಕಾನೂನು-ಅವ್ಯವಸ್ಥೆ ʼಯ ಸುದ್ದಿಯಾಗಿಬಿಡುತ್ತದೆ. ಪ್ರತಿಭಟನೆ, ಪ್ರತಿರೋಧ, ಮೇಣದ ಬತ್ತಿ ಮೆರವಣಿಗೆ ಇವೆಲ್ಲವೂ ಸ್ಥಳೀಯ ಸ್ವರೂಪ ಪಡೆದುಕೊಂಡುಬಿಡುತ್ತವೆ. ನ್ಯಾಯಕ್ಕಾಗಿ ಹೋರಾಡುವ ರಾಜಕೀಯ-ಸಾಂಘಿಕ-ಸಾಂಸ್ಥಿಕ ದನಿಗಳು ಕ್ಷೀಣವಾಗಿಬಿಡುತ್ತವೆ. ಅಸ್ಮಿತೆಗಳಿಲ್ಲದ ಮಹಿಳೆಗಾಗಿ ಮಹಿಳಾ ಚಳುವಳಿಗಳು ಮಾತ್ರ ಸ್ಪಂದಿಸುತ್ತವೆ. ಇತ್ತೀಚೆಗೆ ಕರ್ನಾಟಕದ ಪ್ರತಿಷ್ಠಿತ ಐತಿಹಾಸಿಕ ತಾಣ, ಹಂಪಿಯಲ್ಲಿ ನಡೆದ ಒಂದು ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಈ ರೀತಿಯ ಸಂಚಲನ ಮೂಡಿಸಲಿಲ್ಲ. ಆದಾಗ್ಯೂ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತಿತರ ಮಹಿಳಾ ಸಂಘಟನೆಗಳು ಮಾರ್ಚ್ 8ರ ಮಹಿಳಾ ದಿನದ ಸಂದರ್ಭದಲ್ಲಿ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರ ಶೀಘ್ರವಾಗಿ ನ್ಯಾಯ ಒದಗಿಸಲು ಒತ್ತಾಯಿಸಿದೆ. ರಾಜ್ಯ ಸರ್ಕಾರವೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಜಾರಿಯಲ್ಲಿದೆ.

ಹಂಪಿಯ ದಾರುಣ ಘಟನೆ
ಐತಿಹಾಸಿಕ ತಾಣ ಹಂಪಿಯಲ್ಲಿ ನಡೆದ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ, ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಹೆಚ್ಚಾಗುತ್ತಲೇ ಇರುವ ಮಹಿಳಾ ದೌರ್ಜನ್ಯಗಳ ಮುಂದುವರಿಕೆಯಾಗಿ ಕಾಣುತ್ತದೆ. ವಿಶ್ವ ಪಾರಂಪರಿಕ ತಾಣ ಎಂದೇ ಹೆಸರಾಗಿರುವ ಹಂಪಿ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುವ ಒಂದು ಚಾರಿತ್ರಿಕ ಸ್ಥಳವಾಗಿದೆ. ಪ್ರವಾಸೋದ್ಯಮಕ್ಕೆ ಅತಿ ಹೆಚ್ಚು ಪ್ರಾಶಸ್ತ್ಯ ನೀಡುವ ರಾಜ್ಯ ಸರ್ಕಾರ ಇಂತಹ ತಾಣಗಳಿಗೆ ಪ್ರವಾಸಕ್ಕಾಗಿ ಬರುವವರ ರಕ್ಷಣೆಗಾಗಿ ಇನ್ನೂ ಹೆಚ್ಚಿನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವ ಸಿಸಿಟಿವಿ ಕ್ಯಾಮರಾಗಳು ಸಂಭವಿಸಿದ ಘಟನೆಗಳನ್ನು ಸೆರೆ ಹಿಡಿಯುತ್ತವೆಯೇ ಹೊರತು, ಅಪರಾಧಗಳನ್ನು ನಿಯಂತ್ರಿಸುವ ಸಾಧನಗಳಾಗುವುದಿಲ್ಲ. ರಾಜ್ಯದಲ್ಲಿ ಅತ್ಯಾಚಾರ-ಮರ್ಯಾದೆಗೇಡು ಹತ್ಯೆ-ದೌರ್ಜನ್ಯಗಳು ಹೆಚ್ಚಾಗುತ್ತಲೇ ಇರುವುದರಿಂದ, ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷಾಧಿಪತ್ಯದ ಕಾಮಾತಿರೇಕ ಮತ್ತು ಇದನ್ನು ಆಗುಮಾಡುವ ಸಾಮಾಜಿಕ-ಸಾಂಸ್ಕೃತಿಕ ವಾಸ್ತವ ಸನ್ನಿವೇಶಗಳತ್ತ ಗಮನಹರಿಸಬೇಕಿದೆ. ಯಾವುದೇ ಸಮಾಜದಲ್ಲಾದರೂ ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ಮೊನಚುಗೊಳಿಸದೆ ಹೋದರೆ, ಎಲ್ಲ ವರ್ಗಗಳ ಮಹಿಳೆಯರೂ ಸದಾ ಅಪಾಯದ ತೂಗುಗತ್ತಿಯ ಅಡಿಯಲ್ಲೇ ಬದುಕುವಂತಾಗುತ್ತದೆ. ಕರ್ನಾಟಕ ಇದಕ್ಕೆ ಸಾಕ್ಷಿಯಾಗಿ ನಿಂತಿದೆ.
ಮಾರ್ಚ್ 6ರ ರಾತ್ರಿ ಊಟದ ನಂತರ ಕಾರ್ತಿಕಾ ಎಂಬ ಮಹಿಳೆ, ಸ್ವತಃ ನಡೆಸುವ ರೆಸಾರ್ಟ್ ಒಂದರಿಂದ, ಆಕೆಯ ಗೆಳೆಯರಾದ ಡೇನಿಯಲ್, ಅಲಿಜಾ, ಪಂಕಜ್ ಮತ್ತು ಬಿಭಾಸ್ ಅವರೊಡನೆ ತುಂಗಭದ್ರ ಎಡದಂಡೆ ಕಾಲುವೆಯ ಕಡೆ ತಮ್ಮ ಸ್ವಂತ ವಾಹನಗಳಲ್ಲಿ ಹೊರಟಿದ್ದಾರೆ. ಈ ವೇಳೆಯಲ್ಲಿ ಮೋಟರ್ ಬೈಕ್ನಲ್ಲಿ ಬಂದ ಮೂವರು ಯುವಕರು ಇವರನ್ನು 100 ರೂ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಬಿಭಾಸ್ ಅವರು 20 ರೂಗಳನ್ನು ನೀಡಿದ್ದಾರೆ. ಇದರಿಂದ ಕುಪಿತರಾದ ಮೂವರು ಯುವಕರು ಇವರ ಮೇಲೆ ಹಲ್ಲೆ ನಡೆಸಿ, ಕಲ್ಲಿನಿಂದ ಹೊಡೆದು, ಡೇನಿಯಲ್ ಅವರ ಗಿಟಾರ್ನ್ನು ಮುರಿದುಹಾಕಿದ್ದಾರೆ. ತಮ್ಮೊಡನೆ ಇದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಲು ಮುಂದಾದ ದುಷ್ಕರ್ಮಿಗಳನ್ನು ತಡೆಯಲು ಮುಂದಾದ ಡೇನಿಯಲ್, ಪಂಕಜ್ ಮತ್ತು ಬಿಭಾಸ್ ಅವರನ್ನು ನಾಲೆಯೊಳಗೆ ತಳ್ಳಿದ್ದಾರೆ. ಇವರ ಪೈಕಿ ಈಜು ಕಲಿತಿದ್ದ ಬಿಭಾಸ್ ಹೊರಬರಲು ಯತ್ನಿಸುತ್ತಿದ್ದಾಗ, ಆತನ ತಲೆಗೆ ಬಲವಾದ ಪೆಟ್ಟು ಕೊಟ್ಟು ಪುನಃ ಕಾಲುವೆಯೊಳಗೆ ತಳ್ಳಿದ್ದಾರೆ.

ತದನಂತರ ಕಾರ್ತಿಕಾ ಅವರ ಮೇಲೆ ಹಲ್ಲೆ ನಡೆಸಿದ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನು ನೋಡಿದ ಮತ್ತೋರ್ವ ಅಲಿಜಾ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರೂ ಮಹಿಳೆಯರು ಕಿರುಚಿಕೊಂಡ ಕಾರಣ ಅವರ ಮೊಬೈಲ್ ಫೋನ್ಗಳನ್ನು ಕಸಿದುಕೊಂಡು, ಅವರ ಬಳಿ ಇದ್ದ 9500 ರೂಗಳನ್ನೂ ಕಿತ್ತುಕೊಂಡು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಡೇನಿಯಲ್ ಮತ್ತು ಪಂಕಜ್ ಮರಳಿ ಅದೇ ಸ್ಥಳಕ್ಕೆ ಬಂದಾಗ, ಇಬ್ಬರೂ ಮಹಿಳೆಯರು ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ದಿಗ್ಭ್ರಾಂತರಾಗಿ, ಬಿಭಾಸ್ನನ್ನು ಹುಡುಕಲು ಹತ್ತಿರದ ರೆಸಾರ್ಟ್ ಬಳಿಗೆ ಹೊರಟಿದ್ದಾರೆ. ಈ ವೇಳೆಗೆ ನಡುರಾತ್ರಿಯಲ್ಲಿ ಬಂದ ಸ್ಥಳೀಯ ಪೊಲೀಸರು ಇಬ್ಬರೂ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕಾರ್ತಿಕಾ ಸಲ್ಲಿಸಿದ ದೂರು ಆಧರಿಸಿ, ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಮರುದಿನ ಮುಂಜಾನೆಯ ವೇಳೆಗೆ ಬಿಭಾಸ್ನ ಮೃತ ದೇಹ ಸ್ಥಳೀಯ ವಿದ್ಯುತ್ ಕೇಂದ್ರದ ಬಳಿ ದೊರೆತಿದೆ. ಆಸ್ಪತ್ರೆಯ ಚಿಕಿತ್ಸೆಯ ನಂತರ ಕಾರ್ತಿಕಾ ತನ್ನ ಹೋಮ್ಸ್ಟೇಗೆ ತೆರಳಿದ್ದು, ಅಲಿಜಾ ಪೊಲೀಸರ ಅನುಮತಿ ಪಡೆದು, ತನ್ನ ಸ್ವದೇಶ, ಇಸ್ರೇಲ್ಗೆ ತೆರಳಿದ್ದಾರೆ. ಮರುದಿನವೇ ತಮ್ಮ ತನಿಖೆಯನ್ನು ಆರಂಭಿಸಿದ ಪೊಲೀಸರು ಶೀಘ್ರದಲ್ಲೇ ಮಲ್ಲೇಶ್ ದಾಸರ (22), ಚೇತನ್ ಸಾಯಿ (21) ಅವರನ್ನೂ, ಮಾರ್ಚ್ 9ರಂದು ಶರಣಬಸವರಾಜ್ (30) ಎಂಬ ಆರೋಪಿಯನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂರು ಆರೋಪಿಗಳು ಗಾರೆ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಕೊಲೆಯಾದ ಬಿಭಾಸ್ ಒಡಿಷಾದಲ್ಲಿರುವ ಚರ್ಚ್ ಆಫ್ ನಾರ್ಥ್ ಇಂಡಿಯಾ ಸಂಸ್ಥೆಯ ನಿರ್ವಾಹಕ ಮತ್ತು ಡಯೋಸಿಸ್ ಆಫ್ ಆಗ್ರಾದ ಬಿಷಪ್ ಬಿಜಯ್ ಕುಮಾರ್ ನಾಯಕ್ ಅವರ ಪುತ್ರ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಘನತೆ-ಗೌರವ ಮತ್ತು ಅಸ್ಮಿತೆಗಳು
ಈ ಪ್ರಕರಣವು ತಾರ್ಕಿಕ ಅಂತ್ಯ ತಲುಪಿ ದೌರ್ಜನ್ಯಕ್ಕೊಳಗಾದ ಪ್ರವಾಸಿಗರು ಮತ್ತು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಅಂತಿಮ ನ್ಯಾಯ ದೊರೆಯುವುದು ನಿಶ್ಚಿತವಾದರೂ, ಇಲ್ಲಿ ಒಂದು ಪ್ರಬುದ್ಧವಾಗಿ ನಮ್ಮನ್ನು ಕಾಡಬೇಕಿರುವುದು ಕೇವಲ ಈ ಪ್ರಕರಣ ಮಾತ್ರವೇ ಅಲ್ಲ. ಒಂದು ವಿಶ್ವಮಾನ್ಯತೆ ಇರುವ ಪಾರಂಪರಿಕ ಪ್ರವಾಸಿ ತಾಣದಲ್ಲಿರುವ ರಕ್ಷಣಾ ವ್ಯವಸ್ಥೆಯ ಲೋಪಗಳು ಅನುಷಂಗಿಕವಾಗಿ ಚರ್ಚೆಗೊಳಗಾಗಬೇಕಿದೆ. ಆದರೆ ಕರ್ನಾಟಕದ ಘನತೆ ಮತ್ತು ಭಾಷಿಕ ಅಸ್ಮಿತೆಯ ನೆಲೆಯಲ್ಲಿ ನಿಂತು ನೋಡಿದಾಗ, ಈ ಘಟನೆ ಸಾರ್ವಜನಿಕವಾಗಿ ಸಂಚಲನ ಮೂಡಿಸಬೇಕಿತ್ತಲ್ಲವೇ ? ಪ್ರವಾಸೋದ್ಯಮದ ದೃಷ್ಟಿಯಿಂದ ಈ ಘಟನೆ ಮಾರುಕಟ್ಟೆಗೆ ಎಷ್ಟು ನಷ್ಟ ಉಂಟುಮಾಡುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದ್ದು, ಸರ್ಕಾರವೂ ಸಹ ಜನರ ವಿಶ್ವಾಸವನ್ನು ಮರಳಿ ಗಳಿಸಲು ಸಾಹಸ ಮಾಡುತ್ತಿದೆ.
ಆದರೆ ಒಬ್ಬ ವಿದೇಶಿ ಮಹಿಳೆಯ ಮೇಲೆ ನಡೆದಿರುವ ಅತ್ಯಾಚಾರ, ನೆರೆ ರಾಜ್ಯದ ಪ್ರವಾಸಿಗನ ಕಗ್ಗೊಲೆಯನ್ನು ಕೇವಲ ಪ್ರವಾಸೋದ್ಯಮದ ಹಿತಾಸಕ್ತಿಯ ನೆಲೆಯಲ್ಲಿ ನೋಡಲಾಗುವುದಿಲ್ಲ. ಇಲ್ಲಿ ಸಮಾಜದಲ್ಲಿ ಉಲ್ಬಣಿಸುತ್ತಲೇ ಇರುವ ಪುರುಷಾಧಿಪತ್ಯದ ಕಾಮಾತಿರೇಕದ ಘಟನೆಗಳು ಮತ್ತು ಹಿಂಸಾತ್ಮಕ ಮನಸ್ಥಿತಿ ನಮ್ಮನ್ನು ಕಾಡಬೇಕಿದೆ. ತಳಸ್ತರದ ಶ್ರಮಿಕ ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿಗಳಿಂದ ನಡೆದಿರುವ ಈ ಘೋರ ಕೃತ್ಯವನ್ನು ನೈತಿಕತೆ, ಸಾರ್ವಜನಿಕ ಪ್ರಜ್ಞೆ ಮತ್ತು ಮನುಜ ಸೂಕ್ಷ್ಮತೆಗಳ ನೆಲೆಯಲ್ಲಿ ನೋಡುವುದಕ್ಕಿಂತಲೂ ಹೆಚ್ಚಾಗಿ, ವಿಶಾಲ ಸಾಮಾಜಿಕ ಚೌಕಟ್ಟಿನೊಳಗಿಟ್ಟು ನೋಡಿದಾಗ, ನಮ್ಮ ಸಮಾಜದಲ್ಲಿ ಮಹಿಳಾ ಸಂಕುಲ ಎಷ್ಟು ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿದೆ, ಹಿಂಸಾತ್ಮಕ ಮನೋಭಾವ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇದು ನಮ್ಮನ್ನು ಕಾಡಬೇಕಿರುವ ಗಂಭೀರ ವಿಚಾರವೂ ಆಗಿದೆ.

ಈ ದೃಷ್ಟಿಯಿಂದಲಾದರೂ ಹಂಪಿಯ ಘಟನೆ ರಾಜ್ಯದ ರಾಜಕೀಯ ಪಕ್ಷಗಳನ್ನು, ಕನ್ನಡಪರ ಸಂಘಟನೆಗಳನ್ನು, ʼದೇಶದ ಗೌರವʼದ ಸಂರಕ್ಷಕರಾಗಿ ವರ್ತಿಸುವ ಮತೀಯ-ಧಾರ್ಮಿಕ ಸಂಘಟನೆಗಳನ್ನು, ಅಲ್ಪಸಂಖ್ಯಾತ ಸಮುದಾಯವನ್ನು ಹಾಗೂ ಕನ್ನಡಿಗರ ಘನತೆ ಗೌರವಕ್ಕೆ ಧಕ್ಕೆ ಉಂಟಾಗುವುದನ್ನು ಸಹಿಸದ ಹೋರಾಟಗಾರರನ್ನು ಬಡಿದೆಬ್ಬಿಸಬೇಕಿತ್ತು. ಏಕೆಂದರೆ ಈ ಘಟನೆ ಕಪ್ಪು ಮಸಿ ಬಳಿದಿರುವುದು ರಾಜ್ಯದ ಸಾಂಸ್ಕೃತಿಕ ಘನತೆಗೆ ಮತ್ತು ಸಾಮಾಜಿಕ ಅಸ್ಮಿತೆಗೆ. ಇಲ್ಲಿ ಅನ್ಯಾಯ-ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಜಾತಿ, ಮತ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನು ದಾಟಿ ನೋಡುವ ಕ್ಷಮತೆ ನಮ್ಮೊಳಗೆ ಇದ್ದಲ್ಲಿ, ಇಡೀ ಘಟನೆಯ ಹಿಂದೆ ಇರುವ ಸಾಮಾಜಿಕ ವ್ಯಾಧಿಯನ್ನು ( Social malaise) ಗುರುತಿಸಬೇಕಿದೆ. ಈ ವ್ಯಾಧಿಯು ಸಮಾಜದ ಎಲ್ಲ ಸ್ತರಗಳಲ್ಲಿ, ಎಲ್ಲ ವಲಯಗಳಲ್ಲಿ, ಸಾಮಾಜಿಕ-ಆರ್ಥಿಕ ಅಂತಸ್ತು-ಸ್ಥಾನಮಾನಗಳ ಎಲ್ಲೆ ಮೀರಿ ಆವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಮಹಿಳಾ ದೌರ್ಜನ್ಯ ಎನ್ನುವುದು ನಮ್ಮ ಮೇಲ್ಪದರದ ಗಣ್ಯ ಸಮಾಜವನ್ನು (Upper Elitist Society) ಕಿಂಚಿತ್ತೂ ಅಲುಗಾಡಿಸುತ್ತಿಲ್ಲ. ಈ ಸಮಾಜವನ್ನು ಪ್ರತಿನಿಧಿಸುವ ಹಿತವಲಯದ ಸಂಘಟನೆಗಳು ಇಂತಹ ಸನ್ನಿವೇಶಗಳಲ್ಲಿ ಮೌನ ವಹಿಸುವುದನ್ನೂ ನಾವು ಪ್ರಶ್ನಿಸಬೇಕಿದೆ.
ಇದೇ ಸಮಾಜದಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ಉತ್ಪಾದಿಸುವ ಕನ್ನಡದ ವಿದ್ಯುನ್ಮಾನ ವಾಹಿನಿಗಳು, ಸುದ್ದಿಮನೆಗಳೂ ಸಹ ತಮ್ಮ ಉತ್ತರದಾಯಿತ್ವವನ್ನು ಮನಗಾಣಬೇಕಿದೆ. ಸೌಜನ್ಯ ಪ್ರಕರಣದಲ್ಲಿ ತಮ್ಮ ನಿಷ್ಕ್ರಿಯತೆ ಮತ್ತು ಅಸೂಕ್ಷ್ಮತೆಯನ್ನು ಬಹಿರಂಗಪಡಿಸಿರುವ ವಿದ್ಯುನ್ಮಾನ ಮಾಧ್ಯಮಗಳು, ಕರ್ನಾಟಕದ-ಕನ್ನಡ ಜನತೆಯ ಘನತೆಗೆ ಧಕ್ಕೆ ಉಂಟಾದಾಗಲೂ ಮೌನ ವಹಿಸುವುದು ಅಕ್ಷಮ್ಯ ಎನ್ನದೆ ವಿಧಿಯಿಲ್ಲ. ಮತ್ತೊಂದೆಡೆ, ಸಾಮಾಜಿಕ ಅನ್ಯಾಯ ಮತ್ತು ಭೌತಿಕ ದೌರ್ಜನ್ಯಕ್ಕೊಳಗಾಗುವ ವ್ಯಕ್ತಿ ಮತ್ತು ಸಮುದಾಯಗಳ ಜಾತೀಯ, ಮತೀಯ ಅಥವಾ ಭಾಷಿಕ ಅಸ್ಮಿತೆಗಳು ಮಾತ್ರವೇ ನಮ್ಮ ಪ್ರತಿರೋಧ ಮತ್ತು ಪ್ರತಿಭಟನೆಯನ್ನು ನಿರ್ಧರಿಸುವುದಾದರೆ, ನಾವು ನಾಗರಿಕರಾಗಲು ಇನ್ನೂ ಬಹುದೂರ ಕ್ರಮಿಸಬೇಕಿದೆ ಎಂದು ವಿಧಿಯಿಲ್ಲದೆ ಹೇಳಬೇಕಿದೆ. ಮಹಿಳಾ ದೌರ್ಜನ್ಯಗಳು ಸಂಭವಿಸಿದಾಗೆಲ್ಲಾ ಕಂಡುಬರುವ ಸಮಾಜದ ಈ ತಣ್ಣನೆಯ ಮೌನವನ್ನು ಹೇಗೆ ನಿರ್ವಚಿಸುವುದು ?
ಮಹಿಳೆಯರ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಭೀಕರ ಕೊಲೆಗಳು ಸಮಾಜವನ್ನು ಆಳದಲ್ಲಿ ಕಾಡುತ್ತಿರುವ ಸಾಮಾಜಿಕ ವ್ಯಾಧಿ ಆದರೆ, ಈ ಘಟನೆಗಳನ್ನು ಸಾಪೇಕ್ಷವಾಗಿ ನೋಡುವ ನಾಗರಿಕ ಸಮಾಜದ ಧೋರಣೆ ಸಾಂಸ್ಕೃತಿಕ ವ್ಯಸನವಾಗಿ ಕಾಣುತ್ತದೆ. ಎರಡೂ ಸಹ ಚಿಕಿತ್ಸೆಗೊಳಗಾಗಬೇಕಿದೆ. 12 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣ ಮತ್ತು 2025ರ ಹಂಪಿಯ ಘಟನೆ ನಮ್ಮ ಸಾಮಾಜಿಕ ಅಸೂಕ್ಷ್ಮತೆಗಳನ್ನು ಸುಸ್ಪಷ್ಟವಾಗಿ ಬಯಲುಗೊಳಿಸಿದೆ. ವಿದೇಶಿ ಪ್ರವಾಸಿ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ದೂರು ದಾಖಲಿಸಿ, ಮೌನವಾಗಿ ತವರಿಗೆ ಹಿಂದಿರುಗಿರುವುದು ಕರ್ನಾಟಕದ ಜನತೆ ನಾಚಿಕೆಯಿಂದ ತಲೆ ತಗ್ಗಿಸುವ ವಿಚಾರ ಅಲ್ಲವೇ ? ಈ ನಿಟ್ಟಿನಲ್ಲಿ ಇಡೀ ಸಮಾಜ ಯೋಚಿಸಬೇಕಿದೆ. ಕಾಯ್ದೆ ಕಾನೂನುಗಳು ಅಪರಾಧಗಳನ್ನು ತಡೆಗಟ್ಟುವುದು ಅಪೇಕ್ಷಿತವಾದರೂ, ಸಮಾಜದಲ್ಲಿ, ಅದರಲ್ಲೂ ಪುರುಷ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಸ್ತ್ರೀದ್ವೇಷ ಮತ್ತು ಯಜಮಾನಿಕೆಯ ಧೋರಣೆಯನ್ನು ಸಾಂಸ್ಕೃತಿಕ ನೆಲೆಯಲ್ಲಿ ನಿವಾರಿಸಬೇಕಿದೆ.
ಇದು ನಾಗರಿಕರ ಜವಾಬ್ದಾರಿ, ನಾಗರಿಕ ಸಮಾಜವನ್ನು ( Civil Society) ಪ್ರತಿನಿಧಿಸುವ ಎಲ್ಲ ಸಂಘಟನೆಗಳ ನೈತಿಕ ಹೊಣೆಗಾರಿಕೆ.
(ಈ ಲೇಖನದ ಮಾಹಿತಿಯನ್ನು Near historica Hampi, a heinous crime , ಕುಮಾರ್ ಬುರಡಿಕಟ್ಟಿ , ಲೇಖನದಿಂದ ಪಡೆದುಕೊಳ್ಳಲಾಗಿದೆ. ಮಹಿಳೆಯರ ಹೆಸರುಗಳನ್ನು ಗೋಪ್ಯತೆಯ ದೃಷ್ಟಿಯಿಂದ ಬದಲಾಯಿಸಲಾಗಿದೆ. ಲೇಖನದ ಲಿಂಕ್ ಇಲ್ಲಿದೆ : https://www.thehindu.com/news/national/karnataka/near-historical-hampi-a-heinous-crime/article69331075.ece )

̲ಁ̲ಁ̲ಁ̲ಁ̲ಁ̲