ಬೆಂಗಳೂರು : ಮೇ.02: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದು ವಿಂಡೋ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿ ಮರಳಿದ್ದೆನೆ. ಚಲಿಸುತ್ತಿದ್ದ ಹೆಲಿಕಾಪ್ಟರ್ನತ್ತ ಮೂರು ಹದ್ದುಗಳು ಬಂದವು. ಎರಡು ಹದ್ದುಗಳು ಹೆಲಿಕಾಪ್ಟರ್ಗೆ ಡಿಕ್ಕಿಯಾಗೋದನ್ನು ಪೈಲಟ್ ತಪ್ಪಿಸಿದರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹೆಲಿಕಾಪ್ಟರ್ ಟೇಕಾಫ್ ಆಗಿ 10 ನಿಮಿಷ ಆಗಿತ್ತು. ಹೊಸಕೋಟೆ ಬಳಿ ಹೆಲಿಕಾಪ್ಟರ್ ಹಾರಾಟದ ವೇಳೆ ಹದ್ದು ಡಿಕ್ಕಿ ಹೊಡೆಯಿತು. ಅದೃಷ್ಟವತಾಶ್ ಯಾವುದೇ ಅವಘಡ ಸಂಭವಿಸಿಲ್ಲ. ಹೆಲಿಕಾಫ್ಟರ್ ನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ. ರಾಜ್ಯದ ಜನತೆ ಹಾಗೂ ದೇವರ ಅನುಗ್ರಹದಿಂದ ನಾನು ಅಪಾಯದಿಂದ ಪಾರಾಗಿದ್ದೇನೆ ಎಂದು ಡಿಕೆ ಹೇಳಿದ್ದಾರೆ.
ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದೆ. ಕಾಂಗ್ರೆಸ್ ಪ್ರಚಾರಕ್ಕಾಗಿ ಹೆಚ್ಎಎಲ್ನಿಂದ ಮುಳಬಾಗಿಲಿಗೆ ಡಿಕೆ ಶಿವಕುಮಾರ್ ತೆರಳುತ್ತಿದ್ದರು. ಈ ವೇಳೆ ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದಿದ್ದು, ಕಾಪ್ಟರ್ನ ವಿಂಡೋ ಗಾಜು ಪುಡಿಪುಡಿಯಾಗಿದೆ. ಆದ್ದರಿಂದ ಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಬಳಿಕ, ಕೋಲಾರದ ಮುಳುಬಾಗಿಲಿಗೆ ಪ್ರಯಾಣ ಕೈಗೊಂಡರು. ಈ ವೇಳೆ ಅವಘಡ ಸಂಭವಿಸಿದೆ. ಹಾರಾಟ ವೇಳೆ ಹೆಲಿಕಾಪ್ಟರ್ ಮುಂಭಾಗದ ವಿಂಡೋ ಗಾಜು ಪುಡಿಪುಡಿಯಾಗಿದ್ದು, ತುರ್ತು ಭೂಸ್ಪರ್ಶವಾಗಿದೆ.