ಬೆಂಗಳೂರು: ಕಳೆದ ಐದು ದಿನಗಳಿಂದ ಇಂಡಿಗೋ(IndiGo )ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಸತತ ಆರನೇ ದಿನವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಅವ್ಯವಸ್ಥೆ ಇನ್ನೂ ಕೆಲ ದಿನಗಳು ಹೀಗೆ ಇರುವ ಸಾಧ್ಯತೆ ಹೆಚ್ಚಿದೆ ಎಂದು ಸಂಸ್ಥೆ ಹೇಳಿಕೊಂಡಿದ್ದು, ಇಂಡಿಗೋ ವಿಮಾನ ನಂಬಿದ ಪ್ರಯಾಣಿಕರ ಪರದಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಇದೇ ಬಿಕ್ಕಟ್ಟಿನಲ್ಲಿ ಲಾಭ ಪಡೆಯಲು ಟಿಕೆಟ್ ದರವನ್ನು ಮನಸೋ ಇಚ್ಛೆ ಏರಿಕೆ ಮಾಡಿರುವ ಕೆಲವು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದ್ದು, ದರ ಏರಿಕೆಗೆ ಬ್ರೇಕ್ ಹಾಕಿದೆ. ಈಗಾಗಲೇ ಇಂಡಿಗೋ ಸಂಸ್ಥೆಯ ಸಮಸ್ಯೆಗೆ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ, ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್‌ಗೆ ವಿನಾಯಿತಿ ನೀಡಿದೆ. ಅಲ್ಲದೇ ದೇಶಾದ್ಯಂತ ಇಂತಹ ಸಮಸ್ಯೆಗೆ ಕಾರಣವಾಗಿರುವ ಇಂಡಿಗೋ ಸಂಸ್ಥೆಗೆ ಎಚ್ಚರಿಕೆ ನೀಡಿದೆ. ಪ್ರಯಾಣಿಕರ ಮರುಪಾವತಿಯ ಬಾಕಿ ಹಣವನ್ನು ನಾಳೆ ರಾತ್ರಿ 8 ಗಂಟೆಯೊಳಗೆ ಮರುಪಾವತಿಸುವಂತೆ ವಿಮಾನಯಾನ ಸಚಿವಾಲಯವು ಸೂಚಿಸಿದ್ದು, ವಿಫಲವಾದರೆ ಸಂಸ್ಥೆ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.

ಈ ನಡುವೆ ದರ ಹೆಚ್ಚಿಸಿರುವ ಬೇರೆ ವಿಮಾನ ಸಂಸ್ಥೆಗಳಿಗೂ ಕೂಡ ಕೇಂದ್ರ ಮೂಗುದಾರ ಹಾಕಿದ್ದು, ದರ ಏರಿಕೆಯನ್ನು ನಿಯಂತ್ರಿಸಲು ಎಲ್ಲಾ ಏರ್‌ಲೈನ್ಸ್‌ಗಳಿಗೆ ಏಕರೂಪ ದರ ನಿಗದಿಪಡಿಸಿದೆ. ದೇಶಿಯ ವಿಮಾನ ದರಗಳ ಮೇಲೆ ಕೇಂದ್ರ ಸರ್ಕಾರ ಮಿತಿ ನಿಗದಿ ಪಡಿಸಿದೆ. 500 ಕಿಲೋ ಮೀಟರ್ವರೆಗೆ 7,500 ರೂಪಾಯಿ ಗರಿಷ್ಠ ದರ, 500–ರಿಂದ 1,000 ಕಿ.ಮೀ 12,000 ರೂಪಾಯಿ ಗರಿಷ್ಠ ದರ, 1,000 ರಿಂದ 1,500 ಕಿ.ಮೀ 15,000 ರೂಪಾಯಿ ಗರಿಷ್ಠ ದರ
1,500 ಕಿಲೋ ಮೀಟರ್ಗಿಂತ ಹೆಚ್ಚು ₹18,000 ಗರಿಷ್ಠ ದರ ಎಂದು ವಿಮಾನಯಾನ ಸಚಿವಾಲಯ ದರ ನಿಗದಿ ಪಡಿಸಿದೆ.













