ಬೆಂಗಳೂರು: ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗಾಳಿಗೆ ಮೆಟ್ರೋ ಹಳಿಯ ಮೇಲೆಯೇ ಮರ ಬಿದ್ದಿರುವ ಘಟನೆ ನಡೆದಿದೆ.
ಇದರಿಂದಾಗಿ ಮೆಟ್ರೋ ನೇರಳೆ ಮಾರ್ಗದ (Metro Purple Line) ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಟ್ರಿನಿಟಿ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ (MG Road) ಕಡೆಗೆ ಹೊರಡುವ ಮಾರ್ಗದಲ್ಲಿಯೇ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಇದರಿಂದಾಗಿ ಮೆಟ್ರೋ ರೈಲು (Metro Train) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ (Namma Metro), ಇಂದಿರಾನಗರದಿಂದ ವೈಟ್ಫೀಲ್ಡ್ ಮತ್ತು ಎಂ.ಜಿ ರಸ್ತೆಯಿಂದ ಚಲ್ಲಘಟ್ಟದ ನಡುವೆ ಮಾತ್ರ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಬೆಂಗಳೂರಿನ ರಸ್ತೆಗಳೆಲ್ಲ ನೀರಿನಿಂದ ಆವೃತವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ.